ಬಳ್ಳಾರಿ / ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಶ್ರಾವಣಮಾಸದ ಕೊನೆ ಸೋಮವಾರದಂದು ಶ್ರೀ ಬಂಡೆ ಬಸವೇಶ್ವರ ಮತ್ತು ಶಿವಶರಣೆ ನೀಲಮ್ಮದೇವಿ ಗಂಗೆಸ್ಥಳ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಕುರುಗೋಡು ಪಟ್ಟಣದ ಗುಡ್ಡದಲ್ಲಿ ನೆಲೆಸಿರುವ ನೀಲಮ್ಮ ದೇವಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಅಲ್ಲಿಂದ ಎಮ್ಮಿಗನೂರು, ಬಳ್ಳಾಪುರ ಮೂಲಕ ಪ್ರಭುಕ್ಯಾಂಪಿನ ಮುದ್ದಾಪುರ ರಸ್ತೆಯ ಬನ್ನಿಗಿಡದ ಬಸವನ ಗುಡಿ ಬಳಿ ದೇವಿಯನ್ನು ಬರ ಮಾಡಿಕೊಂಡು, ತದ ನಂತರ ಶ್ರೀ ಬಂಡೆ ಬಸವೇಶ್ವರ ಮತ್ತು ಶಿವಶರಣೆ ನೀಲಮ್ಮದೇವಿ ಜೊತೆಗೂಡಿ ಗಂಗೆಸ್ಥಳ ಮೆರವಣಿಗೆ ಸಕಲ ಮಂಗಳವಾದ್ಯದೊಂದಿಗೆ ಆರಂಭಗೊಂಡು, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಈ ಮೆರವಣಿಗೆಯಲ್ಲಿ ಹೂವಿನಪಲ್ಲಕ್ಕಿ, ವೀರಗಾಸೆ, ಸುಮಂಗಲಿಯರ ಕಳಸ, ಡೊಳ್ಳು ಕುಣಿತ, ತಾಷಾರಾಂಡೋಲ್, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದವು. ಗಂಗೆಸ್ಥಳ ಹಿನ್ನಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಬಂಡೆ ಬಸವೇಶ್ವರ ಮತ್ತು ಶಿವಶರಣೆ ನೀಲಮ್ಮದೇವಿ ಸೇವಾ ಸಂಘದ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ಮುಖಂಡರಾದ ವೀರಯ್ಯಸ್ವಾಮಿ, ಬಸರಾಜಸ್ವಾಮಿ, ಶರಣಪ್ಪ ತಾತ, ವಿರುಪಾಕ್ಷಯ್ಯ, ಗಾರೆ ಸೋಮೇಶ, ಗಾರೆ ಬಸವರಾಜ, ವಸಂತ, ಎಂ. ಬಸವರಾಜ, ಸೋಮೇಶ್ವರ, ಜಡೆ ಮಹಾದೇವಪ್ಪ, ಜೀರ್ ಮಲ್ಲಪ್ಪ, ಹೊನ್ನಳ್ಳಿ ಗಂಗಾಧರ, ಮಂಜೇಶ, ಆರ್. ಸೋಮಲಿಂಗಮೂರ್ತಿ, ಧನಂಜಯ್ಯಸ್ವಾಮಿ, ಕಟ್ಟೆ ಮಹಾಂತೇಶ, ಕಟ್ಟೆ ಸುನೀಲ್, ವಿಪ್ರದ ಭೀಮೇಶ, ಬಳೆ ವಿರೇಶ, ಮಲ್ಲಿಕಾರ್ಜುನ, ಬಿ.ಎಸ್.ಶಿವಮೂರ್ತಿ ಸೇರಿದಂತೆ ಗ್ರಾಮದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಸುತ್ತಮುತ್ತಲಿನ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















