ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸದಾ ಸ್ಮರಣೀಯ, ಹಿಂದುಳಿದ ವರ್ಗಗಳ ಮಹಾನ್ ಸುಧಾರಕ – ಮುತ್ಸದ್ಧಿ, ರಾಜಕೀಯ ನೇತಾರ – ಡಿ. ದೇವರಾಜ್ ಅರಸು.

– ಡಾ. ಮಹಾಂತೇಶ ಬಿ. ನೆಲಾಗಣಿ, ಕೊಪ್ಪಳ

ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಅವಲೋಕನ ಮಾಡುವಾಗ ಎಪ್ಪತ್ತರ ದಶಕದಲ್ಲಿ ಪೂರ್ಣ ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದು, ಹಲವಾರು ಪ್ರಗತಿಪರ ಸಾಮಾಜಿಕ ಸುಧಾರಣೆಗಳನ್ನು ಜಾರಿ ಮಾಡುವ ಮೂಲಕ, ಮುಖ್ಯಮಂತ್ರಿಗಳಾಗಿ ಜನಪರ ಕಾರ್ಯಗಳ ಮೂಲಕ, ಜನಪ್ರಿಯ ವ್ಯಕ್ತಿಯಾಗಿ ಸಾರ್ವಜನಿಕರ ನೆನಪಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿರುವ ಪ್ರಮುಖರಲ್ಲಿ ಡಿ. ದೇವರಾಜ್ ಅರಸು ಅವರು ಒಬ್ಬರು.

೨೦೨೦-೨೧ರ ಶೈಕ್ಷಣಿಕ ವರ್ಷದಲ್ಲಿ ಫೆಬ್ರವರಿ ೨೦ನೇ ತಾರೀಖಿನಂದು ನಮ್ಮ ರಾಜ್ಯದಲ್ಲಿ ಕೋವಿಡ್-೧೯ ಆಗ ತಾನೇ ವ್ಯಾಪಕವಾಗಿ ಹಬ್ಬುತ್ತಿದ್ದ ಕಾಯಿಲೆ. ಆ ದಿನಗಳಲ್ಲಿ ಕಾರ್ಯನಿಮಿತ್ಯ ನಾನು ಮೈಸೂರಿನಿಂದ ೪೨ ಕಿ.ಮೀ. ಅಂತರವಿರುವ ಹುಣಸೂರಿನ ಡಿ. ದೇವರಾಜ್ ಅರಸು, ಸ.ಪ್ರ.ದ. ಕಾಲೇಜಿಗೆ ಕನ್ನಡ ವಿಷಯದ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಗಿತ್ತು. ಅಲ್ಲಿ ಕಾರ್ಯನಿರ್ವಹಿಸಿದ್ದು, ಕೇವಲ ೨೦ ದಿನಗಳು ಮಾತ್ರ. ಮಧ್ಯಂತರ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಮರಳಿ ಕೊಪ್ಪಳಕ್ಕೆ ಬರುವಂತಾಯ್ತು.
ನಮ್ಮ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ, ಡಿ. ದೇವರಾಜ್ ಅರಸ್ ಅವರ ಹೆಸರಿನ ಸ.ಪ್ರ.ದರ್ಜೆ ಕಾಲೇಜು, ಹುಣಸೂರಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸಿದ್ದು, ಕೆಲವೇ ದಿನಗಳಾದರೂ ಅಲ್ಲಿನ ನಗರದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ರಂಗದ ಅಭಿವೃದ್ಧಿಯ ಕೆಲಸಗಳು, ಯೋಜನೆಗಳು ಮತ್ತು ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ್ ಅರಸು ಅವರ ಕಾರ್ಯವೈಖರಿ, ಅವರ ವಿಚಾರಧಾರೆಗಳು ನಿಜವಾಗಿಯೂ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದವು ಎಂದರೆ ಅತಿಶಯೋಕ್ತಿಯಾಗಲಾರದು. ಅದು ೧೯೭೨ರ ಚುನಾವಣಾ ಸಮಯ. ಆಗ ಕರ್ನಾಟಕ ಎಂಬ ಹೆಸರು ಚಾಲ್ತಿಯಲ್ಲಿರಲಿಲ್ಲ. `ಮೈಸೂರು ರಾಜ್ಯ’ ಎಂದು ಕರೆಯಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಅರಸು ಅವರು ಮೈಸೂರು ಭಾಗದ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿ, ಜನಸಾಮಾನ್ಯರ ನಾಡಿಮಿಡಿತವನ್ನು ಕಂಡುಕೊಂಡು, ಜನತೆಯ ಮಾತಿಗೆ ಮನ್ನಣೆ ನೀಡಿ, ಆ ಚುನಾವಣೆಯಲ್ಲಿ ಜಯಗಳಿಸುವ ಮೂಲಕ, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರು. ಅಧಿಕಾರ ವಹಿಸಿಕೊಂಡ ಮರುವರ್ಷವೇ ಅಂದರೆ ೧೯೭೩, ನವೆಂಬರ್ ೧ರಂದು `ಕರ್ನಾಟಕ’ವೆಂದು ನಾಮಕರಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ‘ಕರ್ನಾಟಕ’ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲೇ `ಅರಸು’ ಅವರು ಎರಡು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.
ಆ ಪ್ರಮುಖ ನಿರ್ಣಯಗಳು ಹೀಗಿವೆ.
೧. ಹಿಂದುಳಿದ ವರ್ಗಗಳ ಹಾಗೂ ದಲಿತರ ರಾಜಕೀಯ ಸಂಘಟನೆ ಮಾಡುವುದು.
೨. ಬಡವರ ಏಳ್ಗೆಗಾಗಿ ಆರ್ಥಿಕ ಪರಿವರ್ತನೆ.

ಅರಸು ಅವರ ಈ ಮಹತ್ವದ ನಿರ್ಣಯಗಳು, ಅವರನ್ನು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ `ಹರಿಕಾರ’ ರೆನ್ನುವಂತೆ ಬಿಂಬಿಸಿದವು ಎಂದು ಹೇಳಿದರೆ ತಪ್ಪಾಗಲಾರದು. ಅರಸು ಅವರು ತಾವು ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಮತ್ತು ಕೆಲವು ಮಹತ್ವದ ಬದಲಾವಣೆಗಳಿಗೆ ಸ್ವತಃ ತಾವೇ ಕಾರಣರಾಗಿ ಸಮರ್ಥವಾದ ಆಡಳಿತ ನೀಡಿ ಎಲ್ಲರಿಂದಲೂ ಸೈ ಎನಿಸಿಕೊಂಡ ಮುತ್ಸದ್ಧಿ ರಾಜಕಾರಣಿಗಳಾದ ಡಿ. ದೇವರಾಜ್ ಅರಸು ಅವರ ಸೇವೆಯನ್ನು ಯಾರೂ ಮರೆಯಲಾರರು. ಜೊತೆಗೆ ಇವರು ಮಾಡಿರುವ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳು ಇಂದಿಗೂ ಅನುಕರಣೀಯವಾಗಿವೆ.
ಭೂಸುಧಾರಣೆಯನ್ನು ಜಾರಿಗೆ ತರುವಲ್ಲಿ ಅರಸು ಅವರು ತೋರಿದ ಆಸಕ್ತಿ ಅನನ್ಯವಾದುದು. ಈ ಕುರಿತ ಪ್ರಯತ್ನ ಮೊದಲಿಗೆ ನಡೆದಿತ್ತಾದರೂ, ಗೇಣಿದಾರರ ಪರವಾಗಿ ಭೂ ಸುಧಾರಣೆಯನ್ನು ಜಾರಿಗೆ ತರಲು ಬೇಕಾದ ರಾಜಕೀಯ ಇಚ್ಛಾಶಕ್ತಿಯನ್ನು ಯಾವೊಬ್ಬ ರಾಜಕಾರಣಿಯೂ ಪ್ರದರ್ಶಿಸಿರಲಿಲ್ಲ. (ಕಡಿದಾಳ್ ಮಂಜಪ್ಪ ಅವರನ್ನು ಹೊರತುಪಡಿಸಿ). ಆದರೂ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ವಾಗ್ಧಾನವನ್ನು ಈಡೇರಿಸಲು ದೇವರಾಜ್ ಅರಸು ಅವರು ಬದ್ಧರಾಗಿದ್ದರಿಂದಲೇ ಮರುವರ್ಷವೇ ಭೂ ಸುಧಾರಣಾ ಕಾನೂನಿನ ಕರಡು ಸಿದ್ಧವಾಯಿತು. ಈ ಕಾನೂನಿಗೆ ಜನತೆಯಿಂದ ವಿರೋಧ ವ್ಯಕ್ತವಾಗದಂತೆ ಜನಾಭಿಪ್ರಾಯವನ್ನು ರೂಪಿಸುವಲ್ಲಿ ಅರಸು ಅವರು ಸಫಲರಾದದ್ದು ಗೇಣಿ ಹಕ್ಕನ್ನು ನಿರ್ಧರಿಸಲು ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಿದರು.
ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ಅವರು ಮಾಡಿದ ಮತ್ತೊಂದು ಮಹತ್ಸಾಧನೆಯೆಂದರೆ ಜೀತ ವಿಮುಕ್ತಿ ಪದ್ಧತಿ. ‘ಜೀತ ಪದ್ಧತಿ’ ಈ ಸಮಾಜಕ್ಕೆ ಅಂಟಿದ, ಅಮಾನುಷವಾದ ಪದ್ಧತಿಯಾಗಿದ್ದು, ಇದನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂದು ಅರಸು ಅವರು ಕಟಿಬದ್ಧರಾಗಿ ನಿಂತರು. ಆದರೆ ಈ ಅಮಾನುಷ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆ ಆಗಲಿಲ್ಲವೆಂಬ ಕೊರಗು ಅವರನ್ನು ಸದಾ ಕಾಡಿತ್ತು. ಆದರೆ ಈ ಮುಂಚೆ ಜಾರಿಯಲ್ಲಿದ್ದ ಜೀತ ಪದ್ಧತಿಯು ಸ್ವಲ್ಪ ಮಟ್ಟಿಗಾದರೂ ನಿರ್ಮೂಲನೆಯತ್ತ ಹೆಜ್ಜೆ ಇಟ್ಟಿದ್ದು ಅವರಿಗೆ ಸಮಾಧಾನ ತಂದಿತ್ತು ಎಂಬ ಅಂಶವನ್ನು ಗಮನಿಸಿದರೆ, ಅರಸುರವರ ಕಾರ್ಯವೈಖರಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಇವರ ಕಾಲಾವಧಿಯಲ್ಲಿ ಸುಮಾರು ೬೫ ಸಾವಿರ ಜೀತದಾಳುಗಳು ಋಣ ವಿಮುಕ್ತರಾದರು ಎಂಬ ಅಂಶ ಅರಸು ಅವರ ಮಹತ್ಸಾಧನೆಯೆಂದೇ ಹೇಳಬೇಕು.
ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ, ಹತ್ತಾರು ಉಪಯುಕ್ತ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಮುಂದಾಗಿದ್ದನ್ನು ನಾವು ಎಂದಿಗೂ ಮರೆಯಲಿಕ್ಕೆ ಆಗದು. ಉದಾಹರಣೆಗೆ ನೆಲದ ಆಳದ ಜಲದ ಬಳಕೆ, ವ್ಯರ್ಥವಾಗಿ ಹರಿದು ಹೋಗುವ ನೀರಿನ ಬಳಕೆಯಿಂದ, ಅದನ್ನು ಸದುಪಯೋಗಕ್ಕೆ ಬಳಕೆ ಮಾಡಿಕೊಳ್ಳಲು, ಸಣ್ಣ ನೀರಾವರಿ ಯೋಜನೆ, ಮಣ್ಣು ಸಂರಕ್ಷಣೆ, ಸಣ್ಣ ಹಾಗೂ ದೊಡ್ಡ ವಿದ್ಯುತ್ ಯೋಜನೆ ಮುಂತಾದವುಗಳಿಗೆ ಆದ್ಯತೆ ನೀಡಲಾಯಿತು. ನಗರ, ಗ್ರಾಮೀಣ ಪ್ರದೇಶಗಳ ಬಡಜನತೆಯ ಸಲುವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ, ಹಿಂದುಳಿದ ವರ್ಗದ ಜನರಿಗೆ ಉಚಿತ ನಿವೇಶನ, ಚಿಕ್ಕಮನೆಗಳ ನಿರ್ಮಾಣ ಮತ್ತು ಆ ಮನೆಗಳಿಗೆ ಉಚಿತ ವಿದ್ಯುತ್ ಯೋಜನೆ `ಭಾಗ್ಯಜ್ಯೋತಿ’ ದೀಪಗಳ ವ್ಯವಸ್ಥೆ ಮಾಡುವ ಮೂಲಕ, ಬಡಜನತೆಯ ಆಶಾದೀಪವಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ.

ಅರಸು ಅವರ ಕಾಲಾವಧಿಯಲ್ಲಿ ಹತ್ತಾರು ಕ್ರಾಂತಿಕಾರಿ ಬದಲಾವಣೆಗಳಾದವು. ಅವುಗಳಲ್ಲಿ ಪ್ರಮುಖವಾದ ಕೆಲವೊಂದನ್ನು ಮಾತ್ರ ಇಲ್ಲಿ ಉಲ್ಲೇಖಿಸಿದೆ.

೧. ಪ್ರಬಲವಾಗಿದ್ದ `ಜಾತಿ’ ವ್ಯವಸ್ಥೆಯ ಪದ್ಧತಿಗೆ ಕಡಿವಾಣ ಹಾಕಿ, ಅಸ್ಪೃಶ್ಯತೆಯ ಕರಿನೆರಳಿನಲ್ಲಿ ಬದುಕುತ್ತಿದ್ದವರಿಗೆ, ಶಿಕ್ಷಣ ಕೊಡುವ ಮೂಲಕ ಈ ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿ ಸ್ವಲ್ಪ ಮಟ್ಟಿನ ಯಶಸ್ಸನ್ನು ಪಡೆದದ್ದು, ಸಾಮಾನ್ಯ ಸಂಗತಿಯಲ್ಲವೆಂದೇ ಹೇಳಬಹುದು.

೨. ಎಲ್.ಜಿ. ಹಾವನೂರು ವರದಿ ಜಾರಿಗೊಳಿಸುವ ಮೂಲಕ ಶಿಕ್ಷಣದಿಂದ ವಂಚಿತರಾದ ಮತ್ತು ಆರ್ಥಿಕ, ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದ ಬಹುಸಂಖ್ಯಾತ, ಹಿಂದುಳಿದ ವರ್ಗಗಳ ಜನತೆಯಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸುವ ಶಕ್ತಿಯನ್ನು ಕೈಗೆತ್ತಿಕೊಂಡು ಆ ನಿಟ್ಟಿನಲ್ಲಿ ಕಾರ‍್ಯಪ್ರವೃತ್ತರಾದರು.

೩. ಅರಸು ಅವರ ಜನೋಪಯೋಗಿ ಕಾರ್ಯಕ್ರಮಗಳು (ಯೋಜನೆಗಳು) ಉನ್ನತ ವರ್ಗದ ವ್ಯಕ್ತಿಗಳ ಕೋಪಕ್ಕೆ ಗುರಿಯಾಗಿದ್ದನ್ನು ಸ್ಮರಿಸಬಹುದು.

೪. ಅರಸು ಅವರ ಮತ್ತೊಂದು ಯೋಜನೆಯೆಂದರೆ, ಶಿಕ್ಷಣದ ರಾಷ್ಟ್ರೀಕರಣವಾಗಬೇಕೆಂಬುದಾಗಿತ್ತು. ಆದರೆ ಕಾರಣಾಂತರದಿಂದ ಅವರ ಈ ಯೋಜನೆ ಕಾರ್ಯಗತವಾಗಲಿಲ್ಲ. ಆದರೆ, ಕೆಲವೇ ಕೆಲವು ಉನ್ನತ ಜಾತಿಗಳ ಕಪಿಮುಷ್ಠಿಯಲ್ಲಿದ್ದ ಶಿಕ್ಷಣವು ಎಲ್ಲ ವರ್ಗದವರಿಗೆ ಸಿಗುವಂತೆ ಮಾಡುವಲ್ಲಿ ಸ್ಪಲ್ಪಮಟ್ಟಿಗಾದರೂ ಯಶಸ್ಸು ಕಂಡರು. ಬಡವಿದ್ಯಾರ್ಥಿಗಳಿಗೆ, (ಯುವ ಜನತೆಗೆ) ‘ಸ್ಟೆಪಂಡರಿ’ ಎಂಬ ಯೋಜನೆಯ ಮೂಲಕ ಆಸರೆಯಾದರು.
ಕರ್ನಾಟಕ ಕಂಡ ಮುತ್ಸದ್ಧಿ, ಕ್ರಿಯಾಶೀಲ ರಾಜಕಾರಣಿಗಳಲ್ಲಿ ಡಿ. ದೇವರಾಜ ಅರಸೂ ಕೂಡ ಒಬ್ಬರಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದು. ದೇವರಾಜು ಅರಸು ಅವರು ರಾಜಕೀಯ, ಸಾಮಾಜಿಕ, ಆರ್ಥಿಕ ಸುಧಾರಣೆಗಳ ಮೂಲಕ, ಜನಾನುರಾಗಿ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿ ಇತಿಹಾಸದ ಪುಟಗಳಲ್ಲಿ ಸಾಧನೆಯ ಮೇರುಶಿಖರವಾಗಿ ಕಂಗೊಳಿಸುತ್ತಿದ್ದಾರೆ. ಅವರ ಸಾಧನೆಗಳ ಪಟ್ಟಿ ಬಹು ದೊಡ್ಡದು. ಅವರ ವ್ಯಕ್ತಿತ್ವ ಕೂಡಾ ತುಂಬಾ ದೊಡ್ಡದು. ಅವರೊಬ್ಬ ಆದರ್ಶ ವ್ಯಕ್ತಿ ಎಂಬುದನ್ನು ಅವರನ್ನು ಬಲ್ಲ ಎಲ್ಲಾ ವರ್ಗದ ಜನರೂ ಒಪ್ಪಿಕೊಂಡಿರುವುದೇ ಇದಕ್ಕೆ ಸಾಕ್ಷಿ.
ವೈಯಕ್ತಿಕವಾಗಿ ಹೇಳುವುದಾದರೆ, ದೇವರಾಜು ಅರಸು ಅವರು ಮಾನವೀಯ ಅಂತಃಕರಣದ ವ್ಯಕ್ತಿಯಾಗಿದ್ದರು ಎಂಬುದಕ್ಕೆ ಅವರ ಹತ್ತಿರ ಹೋಗಿ ಸಹಾಯ ಪಡೆಯದೇ ಬರೀ ಕೈಯಿಂದ ಬಂದವರೇ ಇಲ್ಲ ಎನ್ನುವುದನ್ನು ಅರಸು ಅವರನ್ನು ಹತ್ತಿರದಿಂದ ನೋಡಿದವರೆಲ್ಲರೂ ಹೇಳುತ್ತಾರೆ. ಅರಸು ಅವರು ತಮಗೆ ಭ್ರಷ್ಟಮೂಲದಿಂದ ಬಂದ ಹಣದಲ್ಲಿ ಬಹುಪಾಲನ್ನು ಅವರು ಕಷ್ಟ ಎಂದು ಬಂದವರಿಗೆ ಧಾರಾಳವಾಗಿ ಹಂಚುತ್ತಿದ್ದರು. “ನಾನೊಬ್ಬ ಅಂಚೆ ಮನುಷ್ಯ, ಅಲ್ಲಿ ಬರುತ್ತೇ ಇಲ್ಲಿ ಹೋಗುತ್ತೆ” ಎಂದು ತಮಾಷೆಯಾಗಿ ಅವರು ಹೇಳುತ್ತಿದ್ದರು ಎಂದು ಕೋಣಂದೂರು ವೆಂಕಪ್ಪಗೌಡರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಅರಸು ಅವರ ವ್ಯಕ್ತಿತ್ವವನ್ನು ಕುರಿತು ಕೋಣಂದೂರು ವೆಂಕಪ್ಪಗೌಡರು ಹೇಳಿರುವಂತೆ ಕೆಂಪು ಮಿಶ್ರಿತ ಬಿಳಿಯ ಬಣ್ಣ, ಅಗಲವಾದ ದುಂಡು ಮುಖ, ಹದವಾದ ಕಣ್ಣು, ಮೂಗು, ವಿಶಾಲವಾದ ಹಣೆ, ತಲೆಯಲ್ಲಿ ತೆಳುವಾಗಿ ಹರಡಿದ ಬಿಳಿಮಿಶ್ರಿತ ಕಪ್ಪುಕೂದಲು, ಬುದ್ಧಿವಂತಿಕೆಯ ಲಕ್ಷಣ ಎಂಬಂತಹ ದೊಡ್ಡದಾದ ಕಿವಿಗಳು, ತಲೆಯ ಭಾರಕ್ಕೆ ಸೋತು ಕುಸಿದಿದೆಯೇನೊ ಎಂಬಂತಹ ಕುತ್ತಿಗೆ, ಮನಸ್ಸಿನಂತೆ ವಿಶಾಲವಾದ ಎದೆಯ ಹರವು, ನೀಳವಾಗಿ ತುಂಬಿಕೊಂಡ ಕೈಕಾಲು, ದೇಹಕ್ಕೆ ತುಸು ದೊಡ್ಡದೆನಿಸಿದರೂ ಗಾಂಭೀರ್ಯವಾದ ಕಳೆ ತುಂಬಿದ ಹೊಟ್ಟೆ ಈ ಅಂಗಸೌಷ್ಠವಕ್ಕೆ ಒಪ್ಪುವಂತಹ ಶುಭ್ರವಾದ ಬಿಳಿಯ ಖಾದಿ ಜುಬ್ಬ, ಅಚ್ಚುಕಟ್ಟಾಗಿ ಉಟ್ಟ ಕಚ್ಚೆ, ಪಂಚೆ, ಕಾಲಿಗೆ ಬೂಟು, ನಡೆಯುವ ನಡಿಗೆಯಲ್ಲಿ ಗಾಂಭೀರ್ಯ ಇದು ಅವರ ಆಕರ್ಷಕ ಬಾಹ್ಯ ನಿಲುವು. ಅರಸು ಅವರ ಆಂತರಿಕ ನಿಲುವಿನಲ್ಲೂ ಅವರ ಅನುಭವ, ಬುದ್ಧಿ, ಪ್ರತಿಭೆ ಕಡಿಮೆಯೇನಲ್ಲ. ಕಷ್ಟ ಕಂಡು ಕರಗುವ ಹೆಂಗರಳು, ಸೇಡಿಗಿಂತ ಸ್ನೇಹದಲ್ಲಿ ಹೆಚ್ಚು ವಿಶ್ವಾಸ, ಎಡತಾಕಿದ್ದನ್ನೆಲ್ಲ ಸವರಿ ಮುನ್ನಡೆಯುವ ದಿಟ್ಟತನ, ಅವರು ಸಾಧಕರು, ವಸ್ತುನಿಷ್ಠ, ದಕ್ಷ ಆಡಳಿತಗಾರರು, ನಿಷ್ಠುರವಾದಿಗಳು, ಮಾಗಿದ ಅನುಭವಿ, ರಾಜಕೀಯ ಚತುರ, ವ್ಯವಹಾರ, ಆಡಳಿತ, ತಂತ್ರ, ರೀತಿ, ನೀತಿಗಳಿಗೆಲ್ಲ ಮಹಾಭಾರತದ ಮೇಲ್ಪಂಕ್ತಿ. ಸಾಮಾನ್ಯ ಅಸಾಮಾನ್ಯರ ಎಲ್ಲಾ ಸ್ತರಗಳಲ್ಲೂ ಕಾಣಿಸಿಕೊಂಡ ಎತ್ತರ ಈ ಉದಾರ ಚೇತನದ ಸಾಹಸ ನೋವಿನ ಕಥೆಯ ಉಜ್ವಲ ಬದುಕು ಬಹಳ ಕಾಲ ನಿಲ್ಲುವಂತಹ ಶಕ್ತಿಯುಳ್ಳದ್ದು.
ಕಳೆದ ೪೦ ವರ್ಷಗಳಿಂದ ಡಿ. ದೇವರಾಜು ಅರಸು ಅವರ ಪುಣ್ಯಸ್ಮರಣೆ ನಿಮಿತ್ತ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ `ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸು ಅವರ ಸಲಹೆ ಮೇರೆಗೆ ಈ ಲೇಖನವನ್ನು ಸಿದ್ಧಪಡಿಸಿದ್ದೇನೆ.


 
– ಡಾ. ಮಹಾಂತೇಶ ನೆಲಾಗಣಿ
ಪ್ರಧಾನ ಕಾರ್ಯದರ್ಶಿ
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್
ಕೊಪ್ಪಳ ೫೮೩ ೨೩೧
ಮೊ.ನಂ. ೯೯೬೪೮೧೧೧೯೮.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!