ಸಜ್ಜನರ ಸಂಗವಿದ್ದಾಗ ಮಾತ್ರ ಸುಖಿ ಜೀವನ ನಡೆಸಲು ಸಾಧ್ಯ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಬೀದರ/ಬಸವಕಲ್ಯಾಣ : ಪವಿತ್ರ ಶ್ರಾವಣ ಮಾಸದ ಅಂಗವಾಗಿ ಪ್ರತಿವರ್ಷದಂತೆ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ದುಃಖಮಯ ಜೀವನವನ್ನು ಸುಖಮಯ ಮಾಡಿಕೊಳ್ಳಲು ಐದು ಅಮೂಲ್ಯ ರತ್ನಗಳಾದ ಸಜ್ಜನರ ಸಂಗ, ಶಾಸ್ತ್ರಗಳ ಶ್ರವಣ, ಭಗವಂತನ ಭಜನೆ, ದಯೆ, ಧರ್ಮಪಾಲನೆ ಮಾಡಬೇಕು ಎಂದು ಉಪದೇಶಿಸಿದರು.
ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕಿ ಡಾ. ಭುವನೇಶ್ವರಿ ಶ್ರಿವಾತ್ಸವ ಮಾತನಾಡಿ ಈ ಆಧುನಿಕ ಯುಗದಲ್ಲಿ ಗುರುಗಳ ಮೂಲಕ ಧರ್ಮ ಸಂಸ್ಕಾರ ಪಡೆಯುವುದು ಅವಶ್ಯಕ. ಗವಿಮಠದ ಪೂಜ್ಯ ಶ್ರೀ ಡಾ. ಅಭಿನವ ಘನಲಿಂಗ ಗುರುಗಳು ನಮ್ಮೆಲ್ಲರಿಗೆ ಅಂಥ ಧರ್ಮ ಸಂಸ್ಕಾರ ಸದಾ ಕೊಡುತ್ತಿರುವುದು ನಮ್ಮೆಲ್ಲರ ಸುದೈವ. ಪೂಜ್ಯ ಗುರುಗಳ ಅನೇಕ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾಗಿವೆ. ಪೂಜ್ಯ ಗುರುಗಳು ಚಿಕ್ಕ ವಯಸ್ಸಿನಲ್ಲಿಯೇ ಗವಿಮಠದ ಗುರುಗಳಾಗಿ ಕೆಲವೇ ವರ್ಷಗಲ್ಲಿ ಗವಿಮಠವನ್ನು ಅಭಿವೃದ್ಧಿ ಮಾಡಿದ್ದು ಸಾಧನೆಯಾಗಿದೆ ಎಂದು ಬಣ್ಣಿಸಿ ಗವಿಮಠ ಗುರುವಿನ ಮಹಿಮೆ, ಗವಿಮಠದ ಚರಿತ್ರೆಯನ್ನು ತಿಳಿಸಿದರು.
ವಿಶೇಷ ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕಿ ಶ್ರೀಮತಿ ಸರಸ್ವತಿ ಬೆಂಬಳಿ ಅವರು ಮಾತನಾಡುತ್ತಾ ಶ್ರಾವಣ ಮಾಸ ಗುರುಗಳ ಉಪದೇಶ ಕೇಳುವ ಪವಿತ್ರ ಮಾಸ. ಎಲ್ಲರೂ ಪೂಜ್ಯ ಗುರುಗಳ ಉಪದೇಶ ಕೇಳಿ ಪುಣ್ಯ ಸಂಪಾದಿಸಬೇಕು ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಅತಿಥಿಯಾಗಿದ್ದ ತಾಲೂಕಾ ಟೋಕರಿ ಕೋಳಿ ಸಮಾಜದ ಮಹಿಳಾ ಘಟಕದ ತಾಲೂಕಾ ಅಧ್ಯಕ್ಷರಾದ ಶ್ರೀಮತಿ ರೇಖಾ ಹೊಸಮನಿ ತಾಯಿ ಮಮತೆ ಕುರಿತು ಕವನ ವಾಚನ ಮಾಡಿ ಮಾತನಾಡುತ್ತ ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳನ್ನು ಗುರುಗಳ ಬಳಿಗೆ ಕರೆತಂದು ಗುರುಗಳಿಂದ ಧರ್ಮ ಸಂಸ್ಕಾರ ಕೊಡಿಸುವುದು ಅವಶ್ಯಕ ಎಂದು ನುಡಿದರು.
ಶ್ರೀಗುರು ಮಹಾಲಿಂಗೇಶ್ವರ ಶಾಲೆಯ ಶ್ರೀಮತಿ ಸವಿತಾ ರಮೇಶ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಸುರೇಖಾ ಸಜ್ಜನಶೆಟ್ಟಿ ವೇದಿಕೆ ಮೇಲಿದ್ದರು.
ಭಜನೆ : ಹಣಮಂತ ವಾಡಿಯ ಭಜನಾ ಮಂಡಳಿಯಿಂದ ಭಜನೆ ಜರುಗಿತು.
ಅಕ್ಷತಾ ಮಠಪತಿ ಸ್ವಾಗತಿಸಿದರು. ಶರಣಬಸಪ್ಪ ಅಲಗುಡೆ ಮಂಗಲ ಗೀತೆ ಹಾಡಿದರು.
ಈ ಕಾರ್ಯಕ್ರಮದಲ್ಲಿ ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ಅಲುಗಡೆ, ವೆಂಕಟೇಶ ಕಮ್ಮಾ, ಮಾದಣ್ಣ ಸಿತಳಗೆರೆ, ರಾಕೇಶ ಪುರವಂತ, ಪ್ರಭು ಗಾದಾ, ಗೋವಿಂದ ಅಯ್ಯಣ್ಣೋರ, ನರಸಮ್ಮ ತಮ್ಮಾಣಿ, ಸುಶೀಲಾ ಬಾಯಿ ಹತ್ತೆ, ಜ್ಯೋತಿ ನಾಯ್ಡು, ತುಕ್ಕಮ್ಮಾ ನಿರ್ಣಾ ಮೊದಲಾದ ಭಕ್ತರು ಪಾಲ್ಗೊಂಡು ಗುರುಗಳ ದರ್ಶನ, ಆಶೀರ್ವಾದ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು.
ವರದಿ : ಶ್ರೀನಿವಾಸ ಬಿರಾದಾರ



















