ಬಳ್ಳಾರಿ/ಕಂಪ್ಲಿ :ಬ್ರಹ್ಮರ್ಷಿ ನಾರಾಯಣ ಗುರುಗಳು 19ನೇ ಶತಮಾನದ ಕೇರಳದ ಮಹಾನ್ ಸಂತ ಹಾಗೂ ಸಮಾಜ ಸುಧಾರಕರಾಗಿದ್ದು, ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ಗ್ರೇಡ್-2 ತಹಸಿಲ್ದಾರ್ ಎಂ.ಆರ್.ಷಣ್ಮುಖ ತಿಳಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ರಹ್ಮರ್ಷಿ ನಾರಾಯಣಗುರು ಅವರ ಜಯಂತಿಯನ್ನು ಆಚರಿಸಿ ಮಾತನಾಡಿ ನಾರಾಯಣಗುರು ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶ ತತ್ವಗಳೊಂದಿಗೆ ಉತ್ತಮ ಜೀವನ ನಡೆಸಬೇಕು. ನಾರಾಯಣಗುರು ಪ್ರತಿಯೊಬ್ಬರಿಗೂ ದಾರಿ ದೀಪವಾಗಿದ್ದಾರೆ. ಆರ್ಯ ಈಡಿಗರ ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಆರ್ಯ ಈಡಿಗರ ಸಮಾಜದ ಅಧ್ಯಕ್ಷ ಈ.ನರಸಪ್ಪ ಮಾತನಾಡಿ, ನಾರಾಯಣ ಗುರುಗಳು ಸಮಾಜದಲ್ಲಿ ಮೇಲು-ಕೀಳು ಬಿಟ್ಟು ಒಂದೇ ಜಾತಿ, ಒಂದೇ ಮತ, ಒಂದೇ ದೈವ ಎಂಬ ಸಂದೇಶವನ್ನು ನಾಡಿಗೆ ಸಾರಿದ್ದಾರೆ. ಎಲ್ಲಾ ರಂಗಗಳಲ್ಲಿ ಹಿಂದುಳಿದ ಆರ್ಯ ಈಡಿಗರ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಸಮಾಜದ ಹಿತದೃಷ್ಠಿಯಿಂದ ಸರ್ಕಾರ ಮುತುವರ್ಜಿವಹಿಸಿ ಕೂಡಲೇ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಛೇರಿಯ ಮಾಲತೇಶ್ ದೇಶಪಾಂಡೆ, ಗ್ರಾಮಾಡಳಿತಾಧಿಕಾರಿ ಲಕ್ಷ್ಮಣ ನಾಯಕ, ಆರ್ಯ ಈಡಿಗರ ಸಂಘದ ಪದಾಧಿಕಾರಿಗಳಾದ ಈ. ಬಸವರಾಜ, ಶ್ರೀನಿವಾಸ, ಧನರಾಜ್, ಗಂಗಾಧರಗೌಡ, ಚಿನ್ನಪ್ಪ, ಮಂಜುನಾಥ್, ಕೆಇಬಿ ಸಿದ್ದಪ್ಪ, ಇ. ಶಿವಕುಮಾರ್, ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಸೇರಿದಂತೆ ಆರ್ಯ ಈಡಿಗರ ಸಮಾಜದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















