ಬಳ್ಳಾರಿ / ಕಂಪ್ಲಿ : ಆತ್ಮವಿಶ್ವಾಸ ದೃಢವಾಗಿ ಇದ್ದರೆ ಉನ್ನತ ಮಟ್ಟದ ಸಾಧನೆ ಸುಲಭವಾಗಲಿದೆ ಎಂದು ತಹಶೀಲ್ದಾರ್ ಜೂಗಲ ಮಂಜುನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಮದರ್ ತೆರೇಸಾ ಪದವಿ ಪೂರ್ವ ಕಾಲೇಜು, ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 2025-26ನೇ ಸಾಲಿನ ಕಂಪ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಕ್ರೀಡೆ ಪ್ರತಿಯೊಬ್ಬರಲ್ಲಿಯೂ ವಿಶ್ವಾಸ ಮೂಡಿಸುವ ಸಾಧನವಾಗಿದೆ. ಅಚಲ ವಿಶ್ವಾಸದಿಂದ ಮಾತ್ರ ಸಾಧನೆ ಸಾಧ್ಯವೆನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಇವರು ಕಬಡ್ಡಿ ಆಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಶಿಸ್ತು, ಗುರಿ ಮತ್ತು ಶ್ರದ್ದೆ ಮೈಗೂಡಿಸಿಕೊಳ್ಳುವ ಮೂಲಕ ಕಾರ್ಯಸಾಧನೆಗೆ ಅಡಿಗಲ್ಲಾಗಲಿದೆ. ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಅವಕಾಶವಿದೆ. ನಮ್ಮ ನಮ್ಮ ದೈಹಿಕ ಶಕ್ತಿ ಮೇಲೆ ಮೊದಲು ನಾವು ವಿಶ್ವಾಸವಿಡಬೇಕು, ನಂತರದಲ್ಲಿ ವಿಶ್ವಾಸಾರ್ಹ ಕ್ಷೇತ್ರವನ್ನು ರೂಪಿಸುವ ವೇದಿಕೆ ತಾನಾಗಿಯೇ ನಮ್ಮ ಹತ್ತಿರ ಬರುತ್ತದೆ ಎಂದರು.
ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜಿ. ಮಹಾಬಲೇಶ್ವರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯ. ಪ್ರತಿಯೊಬ್ಬರೂ ಕಾಲೇಜು ಶಿಕ್ಷಣದಲ್ಲಿ ಕ್ರೀಡೆಯೊಂದಿಗೆ ಪಠ್ಯ ಚಟುವಟಿಕೆಗೂ ಆದ್ಯತೆ ನೀಡುವುದು ಉತ್ತಮ ಎಂದರು. ವಿ ವಿ ಎಸ್ ಎಸ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪ್ರಕಾಶ ಜಿ. ನಾಯಕ ಇವರು ಪ್ರತಿಜ್ಞಾವಿಧಿ ಬೋಧಿಸಿದರು.
ಇಲ್ಲಿನ ಕ್ರೀಡೆಯಲ್ಲಿ ಏಳು ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಸ್ಪೂರ್ತಿ ಮೆರೆದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಕಾಲೇಜು ಪ್ರಾಚಾರ್ಯರಾದ ಮದ್ದಾನಪ್ಪ ಬಿಡಿನಾಳ್, ಮಹಮ್ಮದ್ ಶಫಿ, ತಾರಾ ನಂದ್ಯಾಲ, ಸಿದ್ದಪ್ಪ ಪರಮೇಶ್ವರ, ಬಸವರಾಜ ನಾಯಕ, ಬಸವರಾಜಸ್ವಾಮಿ, ಪಿ.ಕೆ.ಅಜೀಜ್ ಉಲ್ ಹಕ್, ಶಿಕ್ಷಣ ಸಂಯೋಜಕ ಟಿ.ಎಂ.ಬಸವರಾಜ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕರೆಡ್ಡಿ, ಹಾಗೂ ಆಟೋ ರಘು, ಬಸವರಾಜ, ಬೀರಲಿಂಗೇಶ್ವರ, ಸಂತೋಷ, ವಿಜಯಶಂಕರ, ಲಕ್ಷ್ಮಿನಾಯಕ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















