ಪ್ರತಿಯೊಬ್ಬ ಪಾಲಕರು, ಪೋಷಕರು ಅಗತ್ಯವಾಗಿ ಓದಲೇಬೇಕಾದ ವಿಚಾರ. ಹಾಗೂ ವಿದ್ಯಾರ್ಥಿಗಳೂ ಉತ್ತಮ ತಿಳುವಳಿಕೆಯಿಂದ ಸಮಾಜದಲ್ಲಿ ಜೀವನ ಮಾಡಲು ಬೇಕಾದ ತಿಳಿಯೆಲೇ ಬೇಕಾದ ವಿಚಾರ…
” ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ | ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ ‘ || ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲಾ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ ! ಎಂಬ ನುಡಿಯಂತೆ ಸ್ತ್ರೀಯನ್ನು ಗೌರವಿಸುವ ನಾಡಿನಲ್ಲಿ ನಾವಿಂದು ಹೆಣ್ಣುಮಕ್ಕಳ ಬಾಲ್ಯದ ಜೀವನದ ಬಗ್ಗೆ ಒಂದು ಆತಂಕಗೊಳ್ಳಬೇಕಾದ ವಿಚಾರ ಬೆಳಕಿಗೆ ಬರುತ್ತಿದೆ.
ಶಾಲಾ ಹಂತದಲ್ಲೇ ವಿದ್ಯಾರ್ಥಿನಿಯರು ಗರ್ಭಿಣಿಯಾಗುತ್ತಿರುವ ಅನೇಕ ಸುದ್ದಿಗಳು ದಿನನಿತ್ಯ ಹೆಚ್ಚಾಗಿವೆ. ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ಅಪ್ರಾಪ್ತ ಹೆಣ್ಮಕ್ಕಳು ಗರ್ಭಿಣಿಯರಾಗಿ ದುರಂತ ಸಮಸ್ಯೆಗಳಿಗೆ ಸಿಲುಕುತ್ತಿರುವುದು ದೈನಂದಿನ ವಿಚಾರಗಳಲ್ಲೊಂದಾಗಿದೆ”. ಇಂತಹ ಅಸಹಜ, ಅಸ್ವಾಭಾವಿಕ ಕೃತ್ಯಗಳು ಈ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತಿದೆ. ಅಷ್ಟೇ ಅಲ್ಲದೆ ಪೋಷಕರನ್ನು ಚಿಂತೆಗೀಡು ಮಾಡುತ್ತಿರುವುದಲ್ಲದೆ. ಸಮಾಜದ ಸ್ವಾಸ್ತ್ಯದ ದಿಕ್ಕು ಭಯಾನಕ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಮಕ್ಕಳಿಗೇ ಮಕ್ಕಳು ‘ ಜನಿಸುವ ದುಷ್ಟ ಕ್ಷಣ ಹೆತ್ತವರನ್ನು ವಿಚಲಿತರನ್ನಾಗಿಸುತ್ತಿದೆ. ಬದಲಾದ ಬದುಕಿನ ಶೈಲಿಯಲ್ಲಿ ಮಕ್ಕಳ ತೀವ್ರಗತಿ ಬೆಳವಣಿಗೆ ಜತೆ ಬದುಕಿನ ಅಮೂಲ್ಯ ಕ್ಷಣಗಳು ಕೂಡಾ ಅಷ್ಟೇ ಬೇಗ ಮುಗಿಯುತ್ತಿವೆ.
ಮಕ್ಕಳು ಹಾದಿ ತಪ್ಪದಂತೆ ಬದುಕಬೇಕು, ಹೆತ್ತವರು ಎಚ್ಚರಿಕೆಯ ಕಣ್ಣಿಡಬೇಕು. ಶಿಕ್ಷಕರು ತಮ್ಮ ಹೊಣೆಗಾರಿಕೆ ನಿಭಾಯಿಸಬೇಕು. ಅರಳುವ ವಯಸ್ಸಲ್ಲಿ ಮುದುಡಬಾರದು ಎಂಬುದು ಕಾಳಜಿ. ಈ ಹಿನ್ನೆಲೆಯಲ್ಲಿ ಮಕ್ಕಳು, ಹೆತ್ತವರು, ಶಿಕ್ಷಕರು, ಸಮಾಜದ ಹೊಣೆಗಾರಿಕೆ ಜತೆಗೆ ಎಚ್ಚರಿಕೆ ಪಾಠ ಇಲ್ಲಿದೆ.
ಪ್ರೌಢಾವಸ್ಥೆಯಲ್ಲಿ ಹಾದಿ ತಪ್ಪುತ್ತಿರುವ ಮಕ್ಕಳು
ಕರ್ನಾಟಕದಲ್ಲಿ ಕಳೆದ 3 ವರ್ಷದಲ್ಲಿ 80,813ಕ್ಕೂ
ಅಧಿಕ ಬಾಲ ಗರ್ಭಣಿಯರ ಪ್ರಕರಣಗಳು ವರದಿಯಾಗಿವೆ.
ಇದು ಆತಂಕಕಾರಿ ಬೆಳವಣಿಗೆಯಾಗಿದೆ.
ಮಕ್ಕಳು 12 ರಿಂದ 18 ನೇ ವಯಸ್ಸಿನಲ್ಲೇ
ಹಾದಿ ತಪ್ಪುವುದು ಹೆಚ್ಚು. ಏಕೆಂದರೆ ಇದು ದೈಹಿಕ,
ಮಾನಸಿಕ ಬದಲಾವಣೆ ಹಂತ.
ಸೂಕ್ತ ತಿಳಿವಳಿಕೆ ಕೊರತೆ, ಪ್ರೀತಿ ಪ್ರೇಮ ಎಂಬ ಪ್ರಭಾವ, ಪರಸ್ಪರ ಆಕರ್ಷಣೆ ಮಕ್ಕಳ ಮನಸ್ಸನ್ನು ಕದಡುತ್ತದೆ.
ಒಮ್ಮೆ ಎಡವಿದರೆ ಹೆಣ್ಣು ಮಕ್ಕಳ ಬದುಕು ಸುಲಭವಲ್ಲ.
ಸಮಾಜ ನೋಡುವ ದೃಷ್ಟಿಕೋನ, ಹೆತ್ತವರ ಸಂಕಟ
ಅವರನ್ನು ಇನ್ನಷ್ಟು ಕುಂದಿಸುತ್ತದೆ.
ಎಚ್ಚರಿಕೆ ವಹಿಸುವ ಕಾಲದಲ್ಲಿ ಅವಘಡಕ್ಕೆ ಸಿಲುಕಿ
ಬದುಕು ಹಾಳು ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಪ್ರಾಯಕ್ಕೆಬರುತ್ತಿದ್ದಂತೆ ಹೆಣ್ಣು-ಗಂಡಿಗೆ ಲೈಂಗಿಕ ಆಸಕ್ತಿ ಬೆಳೆಯುತ್ತದೆ. ಆದರೆ ದೈಹಿಕ ಸಾಮರ್ಥ್ಯ ಇರುವುದಿಲ್ಲ.
ಅದಕ್ಕಾಗಿಯೇ ಮದುವೆಗೆ ಹೆಣ್ಣಿಗೆ 18, ಗಂಡಿಗೆ 21 ವಯಸ್ಸು ನಿಗದಿ ಮಾಡಲಾಗಿದೆ. ಬಾಲ್ಯವಿವಾಹ ನಿಷೇಧವೂ ಇದೆ. ಆದರೂ ತಿಳಿದವರಿಂದಲೇ ಇದನ್ನು
ಉಲ್ಲಂಘಿಸುತ್ತಿರುವುದು ವಿಪರ್ಯಾಸ.
ಬಾಲ್ಯದಲ್ಲೇ ಗರ್ಭ ಧರಿಸಿದರೆ ಪ್ರಾಣಕ್ಕೆ ಅಪಾಯ.
ಸಣ್ಣ ವಯಸ್ಸಲ್ಲೇ ಮಕ್ಕಳನ್ನು ಸಲಹುವ ಹೊಣೆ ಕಷ್ಟವಾಗುತ್ತದೆ.
ಮೊಬೈಲ್ ಬಳಕೆಯ ಪ್ರಭಾವ
ಮಕ್ಕಳ ಬದುಕಿನ ಮೇಲೆ ಮೊಬೈಲ್ ಬಹಳ ಪ್ರಭಾವ ಬೀರುತ್ತಿದೆ. ಅಶ್ಲೀಲ ಚಿತ್ರಗಳು, ವೀಡಿಯೋಗಳು ಮಕ್ಕಳಿಗೆ ತುದಿ ಬೆರಳಿನಲ್ಲಿ ಸಿಗುತ್ತಿವೆ. ಇದನ್ನು ನೋಡುವ ಕಾಮೋದ್ರೇಕ ಹೆಚ್ಚಾಗಿ ಅತ್ಯಾಚಾರ, ಬಾಲಗರ್ಭಿಣಿಯಂಥ ಪ್ರಕರಣಗಳು ನಡೆಯುತ್ತಿವೆ ಎನ್ನುವುದು ತಜ್ಞರ ಅಭಿಪ್ರಾಯ. ಮೊಬೈಲ್ನಿಂದ ಮಕ್ಕಳನ್ನು ದೂರವಿಡುವ ಹಾಗಿಲ್ಲ. ಏಕೆಂದರೆ ಶಾಲಾ-ಕಾಲೇಜಿನ ಮಾಹಿತಿ-ಪಾಠ ಇದರಲ್ಲೇ ಬರುವುದರಿಂದ ಕೊಡಲೇಬೇಕು. ಆದರೆ ಹೆತ್ತವರು ಮಕ್ಕಳ ಓದಿಗೆ ಅಗತ್ಯವಿರುವಷ್ಟೇ ಮೊಬೈಲ್ ಬಳಸುವಂತೆ ನೋಡಿಕೊಳ್ಳಬೇಕು. ಅವರು ಸರ್ಚ್ ಮಾಡುವ ವೆಬ್ ಇತಿಹಾಸ ಗಮನಿಸುತ್ತಿರಬೇಕು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಶ್ಲೀಲ ವೆಬ್ಸೈಟ್ಗಳು ಓಪನ್ ಆಗದಂತೆ ಸೆಟ್ ಕೂಡಾ ಮಾಡಬಹುದು.
ನೈತಿಕ ವಿಜ್ಞಾನ ಪಾಠಗಳ ಕೊರತೆ
ಮೊದಲು ಪ್ರಾಥಮಿಕ, ಮಾಧ್ಯಮಿಕ ಹಂತದಲ್ಲೇ ಮಕ್ಕಳಿಗೆ ನೈತಿಕ ವಿಜ್ಞಾನ ವಿಷಯದ ಪಾಠ ಮಾಡಲಾಗುತ್ತಿತ್ತು. ಇದರಲ್ಲಿ ಲೈಂಗಿಕ ಶಿಕ್ಷಣದ ಅಧ್ಯಾಯವೂ ಇತ್ತು. ಕಾಲಕ್ರಮೇಣ ಅದು ಮಾಯವಾಗಿದೆ. ಅಲ್ಲದೇ ಶಿಕ್ಷಕರು ಬಿಡುವಿನ ವೇಳೆಯಲ್ಲಿ ಕಾರ್ಯಾಗಾರಗಳನ್ನು ನಡೆಸಿ ಜಾಗೃತಿ ಮೂಡಿಸುತ್ತಿದ್ದರು. ಆದರೆ ಇತ್ತೀಚೆಗೆ ಶಿಕ್ಷಕರಿಗೆ ಇತರ ಕೆಲಸಗಳ ಹೊರೆಯೂ ಹೆಚ್ಚಾಗಿ ಮಕ್ಕಳಿಗೆ ನೈತಿಕ ಶಿಕ್ಷಣ ಬೋಧಿಸುವುದನ್ನೇ ಬಿಟ್ಟಿದ್ದಾರೆ.
ಲೈಂಗಿಕ ಶಿಕ್ಷಣದ ಕಥೆ ಏನು?
ಮಕ್ಕಳಿಗೆ ಪಾಠದ ಜತೆಗೆ ಬದುಕುವ ಕಲೆಯನ್ನೂ ಹೇಳಿ ಕೊಡಬೇಕು, ಇಂಥ ಘಟನೆಗಳು ಹೆಚ್ಚುತ್ತಿರುವುದರಿಂದ ಲೈಂಗಿಕ ಶಿಕ್ಷಣದ ಮಹತ್ವವವೂ ಪ್ರಾಮುಖ್ಯವಾಗಿದೆ. ಶಾಲಾ ಹಂತದಲ್ಲೇ ಲೈಂಗಿಕ ಶಿಕ್ಷಣದ ಅರಿವು ಮೂಡಿಸಿದರೆ ಬಾಲ್ಯವಿವಾಹ, ಬಾಲ ಗರ್ಭಿಣಿ, ಅತ್ಯಾಚಾರದಂಥ ಪ್ರಕರಣಗಳು ತಗ್ಗಬಹುದು. ಸಮಾಜದಲ್ಲಿ ಅಹಿತಕರ ಘಟನೆಗಳಿಗೂ ಕಡಿವಾಣ ಹಾಕಬಹುದು ಎನ್ನುತ್ತಾರೆ ಧಾರವಾಡ ಐಐಟಿ ಡೀನ್ ಪ್ರೊ. ಶಿವಪ್ರಸಾದ ಮಠ.
ಗಂಡು ಮಕ್ಕಳಿಗೂ ಬೇಕಿದೆ ಪಾಠ
ಕೇವಲ ಹೆಣ್ಣು ಮಕ್ಕಳಿಗೆ ಜಾಗೃತಿ ಪಾಠ ಮಾಡಿದರೆ ಸಾಲದು ಗಂಡು ಮಕ್ಕಳಿಗೂ ನೈತಿಕತೆ ಪಾಠ ಮಾಡಬೇಕಿದೆ. ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ, ಅವಳಿಗಿರುವ ಗೌರವ, ಸ್ಥಾನಮಾನ, ಸೋದರತೆ ಸಂಬಂಧಗಳ ಬಗ್ಗೆ ತಿಳಿಹೇಳಬೇಕು. ಲೈಂಗಿಕತೆ ಅಂದರೇನು, ಯಾವ ವಯಸ್ಸಲ್ಲಿ ಮಾಡಿದರೆ ಸೂಕ್ತ ಎಂಬುದನ್ನು ಸೂಚ್ಯವಾಗಿ ತಂದೆ, ಇಲ್ಲವೇ ಶಿಕ್ಷಕರು ಎಚ್ಚರಿಕೆಯ ಪಾಠ ಮಾಡಬೇಕು. ಶಾಲೆ-ಅಥವಾ ಮನೆಯಲ್ಲಿ ಹೆಣ್ಣು-ಗಂಡು ಎಂಬ ಭೇದ ಮಾಡಬಾರದು. ಕೋ- ಎಜುಕೇಶನ್ನಲ್ಲಿ ಶಿಕ್ಷಕರು ಹೀಯಾಳಿಸುವ, ಬೈಯ್ಯುವ ಕೆಲಸ ಮಾಡಬಾರದು, ಮನೆಯಲ್ಲಿ ಹೆತ್ತವರು ಗಂಡು ಮಗುವಿಗೆ ಕೊಟ್ಟ ಸ್ವಾತಂತ್ರ್ಯ, ಅಧಿಕಾರ ಹೆಣ್ಣು ಮಗುವಿಗೂ ಕೊಡಬೇಕು. ಆಗ ಸಮ ಸಮಾಜ, ಸಮಾನತೆ ಸಾಧ್ಯ. ಆದರೆ ಇದು ದುರ್ಬಳಕೆ ಆಗದಂತೆ ಎಚ್ಚರಿಕೆಯ ಕಣ್ಣು ನೆಟ್ಟಿರಬೇಕು.
ಸಕಾರಾತ್ಮಕ ಭಾವನೆ ಬೆಳೆಸುವ ಅಗತ್ಯ
ಪ್ರೌಢಾವಸ್ಥೆಯಲ್ಲಿ ಮಕ್ಕಳು ಮಾತು ಕೇಳುವುದು ಕಡಿಮೆ. ಆದರೆ ಅವರನ್ನು ಗೆಳೆಯ ಅಥವಾ ಗೆಳತಿ ರೀತಿ ನೋಡುವ ಪ್ರಮೇಯ ಬೆಳೆಸಿಕೊಳ್ಳಬೇಕು. ಅವರ ಭಾವನೆಗಳಿಗೆ ಸ್ಪಂದಿಸಿ ತಿದ್ದಿ ಬುದ್ಧಿ ಹೇಳಬೇಕು. ಮಕ್ಕಳಲ್ಲಿ ಆತುರದ ನಿರ್ಧಾರವೂ ಹೆಚ್ಚುತ್ತಿದೆ. ಕ್ಷಣಿಕ ಸುಖಕ್ಕೆ ಹಾತೊರೆಯುವ ಪ್ರವೃತ್ತಿ ಬೆಳೆಯುತ್ತಿದೆ. ಇದೆಲ್ಲವನ್ನೂ ನಿಯಂತ್ರಿಸುವ ಕಲೆಗಾರಿಕೆ ಹೆತ್ತವರಲ್ಲಿರಬೇಕು. ಮಕ್ಕಳ ಮನಸ್ಸು ಅರಿತು ತಿದ್ದಬೇಕು ಎನ್ನುತ್ತಾರೆ ಧಾರವಾಡದ ಡಿಮ್ಹಾನ್ಸ್ ಮಾನಸಿಕ ಆರೋಗ್ಯ ತಜ್ಞ ಡಾ. ಆನಂದ ಪಾಂಡುರಂಗಿ.
ಶಾಲಾ ಶಿಕ್ಷಕರ ಹೊಣೆಗಾರಿಕೆ ದೊಡ್ಡದು
- ಮಕ್ಕಳು ಶಾಲೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಶಿಕ್ಷಕರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಬದುಕುವ, ಹೆಣ್ಣು- ಗಂಡು ಮಕ್ಕಳಿಗೆ ಬುದ್ಧಿ ಹೇಳಬೇಕು.
- ಶಿಕ್ಷಕಿಯರು ಪ್ರೌಢಾವಸ್ಥೆಗೆ ಬಂದ ಹೆಣ್ಣು ಮಕ್ಕಳಿಗೆ ಶುಚಿತ್ವ, ಪ್ರೀತಿ- ಪ್ರೇಮ ಎಂಬ ಬಲೆಗೆ ಬೀಳದಂತೆ ನೈತಿಕತೆಯ ಪಾಠ ಮಾಡಬೇಕು.
3.ಸಮಾಜದಲ್ಲಿ ಕಾಮಾಂಧರು, ಪ್ರೀತಿ ಹೆಸರಲ್ಲಿ ದುರ್ಬಳಕೆ ಮಾಡಿಕೊಳ್ಳುವವರ ಬಗ್ಗೆ ಎಚ್ಚರಿಸಬೇಕು. - ಹೆಣ್ಣು ಮಕ್ಕಳನ್ನು ಪ್ರತಿದಿನ ನೋಡುವ ಶಿಕ್ಷಕರು ಅವರಲ್ಲಿನ ಬದಲಾವಣೆಗಳು, ನಡವಳಿಕೆ ಬಗ್ಗೆ ಗಮನಿಸಿ ತಿಳಿ ಹೇಳಬೇಕು ಇಲ್ಲವೇ ಅವರ ಹೆತ್ತವರ ಗಮನಕ್ಕೆ ತರಬೇಕು.
- ಶಾಲೆಯಲ್ಲಿನ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ನಡೆದುಕೊಳ್ಳದಂತೆ ತಿಳಿ ಹೇಳಬೇಕು. ಬೇಕಾಬಿಟ್ಟಿ ಬದುಕುವ ಮಕ್ಕಳನ್ನು ದಂಡಿಸಿ ಸರಿ ದಾರಿಗೆ ತರಬೇಕು.
ಹೆಣ್ಣು ಮಕ್ಕಳು ವಹಿಸಬೇಕಾದ ಮುನ್ನೆಚ್ಚರಿಕೆ ಏನು?
- ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಹೆಣ್ಣು ಮಕ್ಕಳು ಶುಚಿತ್ವ, ಸುರಕ್ಷಿತ ಲೈಂಗಿಕತೆ ಬಗ್ಗೆ ಅರಿಯಬೇಕು. ಗುಡ್ ಟಚ್ ಮತ್ತು ಬ್ಯಾಡ್ ಟಚ್ಗಳ ಬಗ್ಗೆ ಅರಿತುಕೊಳ್ಳಬೇಕು
- ಯಾವುದೇ ಒಬ್ಬ ವ್ಯಕ್ತಿ ಅಂದರೆ ತಂದೆ, ಸಹೋದರರು, ನೆರೆಹೊರೆಯವರು, ಸಂಬಂಧಿಕರು, ಶಿಕ್ಷಕರು ಇಲ್ಲವೇ ಗೆಳೆಯನೇ ಆಗಿರಬಹುದು ಅವರು ನಿಮ್ಮನ್ನು ನೋಡುವ, ಮುಟ್ಟುವ ದೃಷ್ಟಿಕೋನ ಅರಿಯಬೇಕು. ನೋಟ, ನಡತೆ ಕೆಟ್ಟದ್ದಾಗಿದ್ದರೆ ಸಹಿಸಿಕೊಳ್ಳದೆ ತತ್ಕ್ಷಣ ವಿರೋಧಿಸಬೇಕು.
- 12ರಿಂದ 18ನೇ ವಯಸ್ಸಿನಲ್ಲಿ (ಟೀನ್ ಏಜ್) ಹೆಣ್ಣು-ಗಂಡು ಮಕ್ಕಳಲ್ಲಿ ದೈಹಿಕ ಬದಲಾವಣೆ ಸಹಜ. ಪರಸ್ಪರ ವಿರುದ್ಧ ಲಿಂಗಗಳ ಮೇಲೆ ಸೆಳೆತವೂ ಉಂಟಾಗುತ್ತದೆ. ಆದರೆ, ಇದು ಎಚ್ಚರಿಕೆಯ ಕಾಲ ಎಂದು ಅರಿಯಬೇಕು. ಮನಸ್ಸು ಜಾರದಂತೆ, ಹಾದಿ ತಪ್ಪದಂತೆ ಹತೋಟಿಯಲ್ಲಿಟ್ಟುಕೊಳ್ಳಬೇಕು.
- ಹದಿಹರೆಯದಲ್ಲಿ ಬಾಲಕ-ಬಾಲಕಿ ಇಬ್ಬರೂ ಆಕರ್ಷಣೆಯನ್ನೇ ಪ್ರೀತಿ ಎನ್ನುವ ನಿರ್ಧಾರ ಮಾಡಬಾರದರು. ಅಷ್ಟಕ್ಕೂ ಅದು ಪ್ರೀತಿ ಮಾಡುವ ವಯಸ್ಸೂ ಅಲ್ಲ. ಓದಿನ ಕಡೆ ಗಮನ ನೀಡುವ ಕಾಲ ಎಂದು ತಮ್ಮನ್ನು ತಾವೇ ಎಚ್ಚರಿಸಿಕೊಳ್ಳಬೇಕು.
- ಕಹಿ ಘಟನೆ ಆದಾಗ ಹೆದರದೆ ತಾಯಿ ಬಳಿ ಹೇಳಿಕೊಳ್ಳಬೇಕು. ಮಕ್ಕಳ ಸಹಾಯವಾಣಿ (1098)ಗೂ ಕರೆ ಮಾಡಿ ಹೇಳಬಹುದು.
ಹೆತ್ತವರ ಏನು ಮಾಡಬೇಕು?
ಎಷ್ಟೇ ಒತ್ತಡ ಇದ್ದರೂ ಹೆತ್ತವರು ಮಕ್ಕಳ ಜತೆ ಕೆಲವು ಕಾಲ ಬೆರೆಯಬೇಕು. ಅವರೊಂದಿಗೆ ನಕ್ಕು ನಲಿಯಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು.
ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ತಾಯಿ ಶುಚಿತ್ವ, ಲೈಂಗಿಕ ಬದುಕಿನ ಬಗ್ಗೆ ಸೂಚ್ಯವಾಗಿ ಹೇಳಿಕೊಡಬೇಕು. ಗುಡ್ ಟಚ್, ಬ್ಯಾಡ್ ಟಚ್ ಕುರಿತು ಮನವರಿಕೆ ಮಾಡಿಕೊಡಬೇಕು.
ತಾಯಿಯಾದವಳು ಹೆಣ್ಣು ಮಗಳ ಮುಟ್ಟಿನ ಬಗ್ಗೆ ಗಮನಿಸುತ್ತಿರಬೇಕು. ಹೆಚ್ಚು ಕಡಿಮೆ ಆಗುತ್ತಿದ್ದರೆ ಕುಳಿತು ಸಮಾಧಾನದಿಂದ ಕೇಳಬೇಕು. ಅವಳ ನೋವನ್ನು ಅರಿಯಬೇಕು.
ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಿರಬೇಕು. ಹೆಚ್ಚು ಕಡಿಮೆ ಆಗುತ್ತಿದ್ದರೆ ತತ್ಕ್ಷಣವೇ ವಿಚಾರಿಸಬೇಕು.
ಹೆತ್ತವರು ಕೇವಲ ಹೆಣ್ಣು ಮಗುವಿಗೆ ಮಾತ್ರವಲ್ಲ ಗಂಡು ಮಗುವಿಗೂ ಪಾಠ ಮಾಡಬೇಕು. ಹೆಣ್ಣು ಮಕ್ಕಳ ಜತೆ ಹೇಗೆ ವರ್ತಿಸಬೇಕು, ನೋಡುವ ದೃಷ್ಟಿಕೋನ ಹೇಗಿರಬೇಕು, ಸಮಾಜದಲ್ಲಿ ಹೆಣ್ಣಿಗಿರುವ ಗೌರವ, ಅವಳೊಂದಿಗೆ ನಡೆದುಕೊಳ್ಳುವ ರೀತಿ, ನೀತಿ ಬಗ್ಗೆ ವಿವರಿಸಬೇಕು.
ತಮ್ಮ ಮಕ್ಕಳು ಏನು ಓದುತ್ತಿದ್ದಾರೆ, ಎಲ್ಲಿ ಹೋಗುತ್ತಾರೆ, ಯಾರೊಂದಿಗೆ ಗೆಳೆತನವಿದೆ, ಹೆಚ್ಚು ಹೊತ್ತು ಯಾರ ಜತೆ ತಿರುಗಾಡುತ್ತಾರೆ ಎನ್ನುವ ಮಾಹಿತಿ ಇರಲೇಬೇಕು. ಸೂಕ್ಷ್ಮ ದೃಷ್ಟಿಕೋನ ನೆಟ್ಟಿರಲೇ ಬೇಕು.
” ನನ್ನ ಮಗ-ಮಗಳು ಬೇರೆಯವರ ಥರ ಅಲ್ಲ ” ಎನ್ನುವ ಅತಿಯಾದ ನಂಬಿಕೆ ಒಳ್ಳೆಯದಲ್ಲ.
26436 ಪ್ರಕರಣ: 2024 ಏಪ್ರಿಲ್ನಿಂದ 2025 ಫೆಬ್ರವರಿಗೆ ಪತ್ತೆಯಾದ ಹದಿಹರೆಯದವರ ಗರ್ಭಿಣಿ ಪ್ರಕರಣಗಳು.
4255 ಕೇಸ್: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಗರ್ಭಿಣಿಯಾಗಿರುವ ಪ್ರಕರಣಗಳು (2024 ಎಪ್ರಿಲ್ನಿಂದ 2025ರ ಫೆಬ್ರವರಿಗೆ)
42120ಕೇಸ್: 2020-21ರ ಸಾಲಿನಲ್ಲಿ ಪತ್ತೆಯಾದ ಹದಿಹರೆಯದವರು ಗರ್ಭಿಣಿಯಾದ ಪ್ರಕರಣಗಳು
44631ಕೇಸ್: 2021-22ರ ಸಾಲಿನಲ್ಲಿ ಪತ್ತೆಯಾದ ಹದಿಹರೆಯದವರು ಗರ್ಭಿಣಿಯಾದ ಪ್ರಕರಣಗಳು
49875ಕೇಸ್: 2022-23ರ ಸಾಲಿನಲ್ಲಿ ಪತ್ತೆಯಾದ ಹದಿಹರೆಯದವರು ಗರ್ಭಿಣಿಯಾದ ಕೇಸ್ಗಳು
- ಚನ್ನು ಮೂಲಿಮನಿಯವರಯವರ ಲೇಖನದಿಂದ… ಪ್ರೇರಣೆ



















