
ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದೇಶಪಾಂಡೆ ಸ್ಕಿಲ್ಲಿಂಗ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ‘ಸ್ಕಿಲ್‌ಪ್ಲಸ್-4’ ತರಬೇತಿ ಕಾರ್ಯಕ್ರಮದ ಮೊದಲನೇ ಬ್ಯಾಚ್‌ಗೆ ಯಶಸ್ವಿಯಾಗಿ ಚಾಲನೆ ನೀಡಲಾಯಿತು.
ವಿದ್ಯಾರ್ಥಿನಿಯರಲ್ಲಿ ಅಗತ್ಯ ಕೌಶಲ್ಯಗಳನ್ನು ಬೆಳೆಸಿ, ಅವರಿಗೆ ಮೊದಲ ಉದ್ಯೋಗವನ್ನು ದೊರಕಿಸಿಕೊಡುವ ಮಹತ್ತರ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಕೆ. ಲಮಾಣಿ, “ವಿದ್ಯಾರ್ಥಿನಿಯರು ಕೇವಲ ಪದವಿಗೆ ಸೀಮಿತರಾಗದೆ, ಜೀವನದಲ್ಲಿ ಸ್ವಾವಲಂಬಿಗಳಾಗಲು ಅಗತ್ಯ ಕೌಶಲ್ಯಗಳನ್ನು ಕಲಿಯಬೇಕು ಮತ್ತು ಆದಷ್ಟು ಬೇಗ ಗಳಿಕೆಯನ್ನು ಪ್ರಾರಂಭಿಸಬೇಕು,” ಎಂದು ಕರೆ ನೀಡಿದರು. ದೇಶಪಾಂಡೆ ಸ್ಕಿಲ್ಲಿಂಗ್ ಸಂಸ್ಥೆಯ ಈ ಕಾರ್ಯವನ್ನು ಅವರು ಶ್ಲಾಘಿಸಿದರು.
ದೇಶಪಾಂಡೆ ಸ್ಕಿಲ್ಲಿಂಗ್ ಸಂಸ್ಥೆಯ ಉಪ ವ್ಯವಸ್ಥಾಪಕರಾದ ಶ್ರೀ ಸೂರಣ್ಣ ಕೆ, ಅವರು ಮಾತನಾಡಿ, ಕಾಲೇಜು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಕುರಿತು ಮಾಹಿತಿ ನೀಡುತ್ತಾ, “ವಿದ್ಯಾರ್ಥಿನಿಯರು ಕೌಶಲ್ಯಗಳನ್ನು ಕಲಿತು ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗ ಗಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದು ಉದ್ಯೋಗಸ್ಥರಾಗುವ ಮೂಲಕ ತಮ್ಮ ಕಾಲೇಜು ಮತ್ತು ಪೋಷಕರಿಗೆ ಕೀರ್ತಿ ತರಬೇಕು,” ಎಂದು ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಕೆ. ಲಮಾಣಿ, ಉದ್ಯೋಗ ಕೋಶದ ಸಂಯೋಜಕರಾದ ಡಾ. ಪ್ರದೀಪ್ ಕುಮಾರ್, ಐಕ್ಯೂಎಸಿ ಸಂಯೋಜಕರಾದ ಡಾ. ಅಶೋಕ್ ಕುಮಾರ್ ಹಾಗೂ ಕಾಲೇಜಿನ ಸರ್ವ ಸಿಬ್ಬಂದಿ ವರ್ಗದವರಿಗೆ ದೇಶಪಾಂಡೆ ಸ್ಕಿಲ್ಲಿಂಗ್ ಸಂಸ್ಥೆಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ.
ಸಂಸ್ಥೆಯ ತಂಡದ ಸದಸ್ಯರಾದ ಶ್ರೀ ಸೂರಣ್ಣ ಕೆ., ಶ್ರೀಮತಿ ಶಾರದಮ್ಮ ಎಸ್., ಶ್ರೀ ನಾಗರಾಜ್ ಹುಲಿಕಟ್ಟಿ, ಕುಮಾರಿ ಸಾನಿಯಾ ಎಚ್., ಶ್ರೀ ಸಂತೋಷ್ ಬಾಬು ಹಾಗೂ ಕುಮಾರಿ ಅಖಿಲಾ ಬೇಗಂ ಅವರ ಶ್ರಮವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಅಲ್ಲದೆ, ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಅಚ್ಚುಕಟ್ಟಾಗಿ ನಿರೂಪಣೆ, ಪ್ರಾರ್ಥನೆ ಹಾಗೂ ವಂದನಾರ್ಪಣೆಯವರೆಗೆ ಎಲ್ಲವನ್ನೂ ನಿರ್ವಹಿಸಿದ ವಿದ್ಯಾರ್ಥಿನಿಯರಿಗೆ ವಿಶೇಷ ಪ್ರಶಂಸೆ ವ್ಯಕ್ತಪಡಿಸಲಾಯಿತು.
- ಕರುನಾಡ ಕಂದ



















