ಬಳ್ಳಾರಿ / ಕಂಪ್ಲಿ : ಬೀದರ್ ನಗರದಲ್ಲಿ ಸೋಮವಾರ ನಡೆದ ಕಲಬುರ್ಗಿ ವಿಭಾಗದ ಮಟ್ಟದ ದಸರಾ ಸಿ. ಎಂ. ಕಪ್ ಕ್ರೀಡಾಕೂಟದ ಯೋಗ ಸ್ಪರ್ಧೆಯಲ್ಲಿ ಕಂಪ್ಲಿ ವಿದ್ಯಾರ್ಥಿನಿ ಎಸ್. ಪೂಜಾ ಇವರು ದ್ವಿತೀಯ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಗೊಳ್ಳುವ ಮೂಲಕ ಕೀರ್ತಿ ಪತಾಕೆ ಹಾರಿಸಿದ್ದಾಳೆ. ಇಲ್ಲಿನ ಜಿಲ್ಲಾಡಳಿತ, ಜಿ. ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೀದರ್ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಸಹಯೋಗದಲ್ಲಿ ಬೀದರ್ನ ನಂದಿ ನಗರದ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕಲಬುರ್ಗಿ ವಿಭಾಗದ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕಂಪ್ಲಿ ಯಕ್ಷ ಯೋಗ ಅಕಾಡೆಮಿ ಕೇಂದ್ರದ ವಿದ್ಯಾರ್ಥಿನಿ ಹಾಗೂ ಹೊಸಪೇಟೆಯ ಎಪಿಜೆ ಅಬ್ದುಲ್ ಕಲಾಂ ಸಿ.ಬಿ.ಎಸ್.ಸಿ ವಸತಿ ಶಾಲೆಯಲ್ಲಿ 7ನೇತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಸ್.ಪೂಜಾ. ಸಾಧನೆಗೈದು, ಕಂಪ್ಲಿ ತಾಲೂಕಿಗೆ ಕೀರ್ತಿ ತರುವ ಜೊತೆಗೆ ಯೋಗಾಭಿಮಾನಿಗಳ ಗಮನ ಸೆಳೆದಿದ್ದಾಳೆ. ಸಿಲ್ವರ್ ಮೆಡಲ್ ಮತ್ತು ಚಾಂಪಿಯನ್ ಶಿಪ್ ಕಪ್ ಪಡೆದುಕೊಳ್ಳುವ ಮೂಲಕ ಪ್ರಶಸ್ತಿ ಪತ್ರ ಸ್ವೀಕರಿಸಿದಳು. ವಿಭಾಗ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದು, ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಜಯಿಸಿ ಬರಲೆಂದು ಆಶಿಸಲಾಗಿದೆ. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀಕ್ಷಕಿ ಪದ್ಮಾವತಿ, ತರಬೇತಿದಾರಿ ಖುದ್ದೂಸ್, ಕಂಪ್ಲಿ ಯಕ್ಷ ಯೋಗ ಅಕಾಡೆಮಿ ಕೇಂದ್ರದ ಸಂಸ್ಥಾಪಕಿ ಎಂ. ಶಾಮಲಮ್ಮ, ಯೋಗ ಶಿಕ್ಷಕ ಚಂದ್ರಶೇಖರ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















