ಭಗತ್ ಸಿಂಗ್ ಹೆಸರು ಕೇಳಿದಾಕ್ಷಣ ನರನಾಡಿಯಲ್ಲಿ ವಿದ್ಯುತ್ ಸಂಚರಿಸುತ್ತದೆ. ಮೈಯೆಲ್ಲಾ ರೋಮಾಂಚನವಾಗುತ್ತದೆ. ಭಗತ್ ಎಂದರೆ ಆತ ಸ್ವಾತಂತ್ರ್ಯ ಹೋರಾಟಗಾರನಷ್ಟೇ ಅಲ್ಲ ಆತನಲ್ಲಿ ಒಬ್ಬ ಮಹಾನ್ ಮಹಾನ್ ವ್ಯಕ್ತಿಯಿದ್ದ 20ನೇ ಶತಮಾನ ಕಂಡ ಭಾರತದ ಧೀರೋದ್ದಾತ ವ್ಯಕ್ತಿಗಳಲ್ಲಿ ಆತನೂ ಒಬ್ಬ.
ನಮ್ಮ ಅರಿವಿನ ಪ್ರಕಾರ ಭಗತ್ ಸಿಂಗ್ ಸೆಪ್ಟಂಬರ್ 28 1907 ರಲ್ಲಿ ಅಂದಿನ ಭಾರತದ (ಇಂದಿನ ಪಾಕಿಸ್ತಾನದ) ಪಂಜಾಬ್ ರಾಜ್ಯದ ಲೈಲಾಪುರ ಜಿಲ್ಲೆಯಲ್ಲಿ ಬಂಗಾ ಎನ್ನುವ ಹಳ್ಳಿಯಲ್ಲಿ ವಿದ್ಯಾವತಿ ಮತ್ತು ಸರ್ದಾರ್ ಕಿಶನ್ ಸಿಂಗ್ ಅವರ ಮಗನಾಗಿ ಶಿಖ್ ಸಮುದಾಯದಲ್ಲಿ ಹುಟ್ಟಿದ. ಹುಟ್ಟಿನಿಂದಲೇ ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದ, ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ ಆತನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಮುಂದೆ ಆತ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ನನನ್ನು ಸುಖದೇವ್ ಮತ್ತು ರಾಜಗುರು ಜೊತೆ ಸೇರಿ ಕೊಲೆ ಮಾಡಿದರು, ನಂತರ ಗಲ್ಲಿಗೇರಿದರು ಅಂತ. ಆದರೆ ಭಗತ್ ಸಿಂಗ್ ಕೇವಲ ಕ್ರಾಂತಿಕಾರಿ ಅಷ್ಟೇ ಆಗಿರಲಿಲ್ಲ ಆತನಲ್ಲಿ ಹಲವಾರು ವಿಚಾರಗಳು ಅಡಕವಾಗಿದ್ದವು ರಾಷ್ಟ್ರೀಯ ಪತ್ರಗಾರದಲ್ಲಿ ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಬರೆದ ದಿನಚರಿಯನ್ನು ಸಂರಕ್ಷಿಸಿದ್ದಾರೆ ಅದೇ “ಭಗತ್ ಸಿಂಗ್ – ಜೈಲ್ ಡೈರಿ” ಈ ಪುಸ್ತಕವನ್ನು ಅಥವಾ ದಿನಚರಿಯನ್ನು ಓದುತ್ತಾ ಹೋದಂತೆ ಭಗತನ ವಿಚಾರಗಳ ದರ್ಶನವಾಗುತ್ತದೆ. ಭಗತ್ ಜೈಲಿನಲ್ಲಿದ್ದಾಗ ಜೈಲುಹಕ್ಕಿಯಾಗಲಿಲ್ಲ ಅಲ್ಲಿಯೂ ಸಹ ಅನೇಕ ತೆರನಾದ ಹೋರಾಟ ಮಾಡಿದ, ಜೈಲಿನಲ್ಲಿ ಇರುವ ಕೈದಿಗಳಿಗೆ ಗುಣಮಟ್ಟದ ಊಟ ನೀಡುವುದರ ಸಲುವಾಗಿ ಹೋರಾಟ ಮಾಡಿದ್ದ. ಅಲ್ಲದೆ ಆತ ಅಲ್ಲಿಯೂ ಸ್ವತಂತ್ರನಾಗಿದ್ದ ಅವನೇ ಹೇಳುವಂತೆ “ಬೂದಿಯ ಪ್ರತಿ ಕಣವು ನನ್ನ ಬೆಂಕಿಯ ಜೊತೆ ಚಲಿಸುತ್ತಿರುತ್ತದೆ. ನಾನೆಂಥ ಹುಚ್ಚ ಎಂದರೆ ಬಂದೀಖಾನೆಯಲ್ಲಿ ಸ್ವತಂತ್ರನಾಗಿರುವೆ.” ಆತ ಜ್ಞಾನಕ್ಕಾಗಿ ಹಪಹಪಿಸುವನಾಗಿದ್ದ. ಆತನಿಗೆ ಗೊತ್ತಿತ್ತು
” ನನ್ನನ್ನೂ ಖಂಡಿತ ನೇಣಿಗೆ ಏರಿಸುತ್ತಾರೆ” ಎಂದು ಆದರೆ ಆತನ ಜ್ಞಾನದಾಹಕ್ಕೆ ಮಿತಿಯೇ ಇರಲಿಲ್ಲ. ಭಗತಗೆ ತಿಳಿಯಬೇಕು ಇನ್ನೂ ತಿಳಿಯಬೇಕು ಮತ್ತೂ ತಿಳಿಯಬೇಕು ಎಂಬ ಅವನ ಲಾಲಸೆಗೆ ಮಿತಿಯೇ ಇರಲಿಲ್ಲ.
ಅವನ ಗೆಳೆಯರ ಪ್ರಕಾರ ಭಗತನ ಓದಿನ ಹಸಿವು ಅಪಾರ ಅವನು ಜೈಲಿನಲ್ಲಿದ್ದಾಗ ನಾಲ್ಕು ಪುಸ್ತಕಗಳನ್ನು ಬರೆಯುವ ತಯಾರಿ ನಡೆಸಿದ್ದ. ಅದಕ್ಕಾಗಿ ಸೂಕ್ತ, ಸುದೀರ್ಘ ಟಿಪ್ಪಣಿ ಮಾಡಿಕೊಂಡಿದ್ದ ಅವನು ಒಳ್ಳೆಯ ಓದುಗನ ಅಷ್ಟೇ ಅಲ್ಲ, ಮಾತುಗಾರ ಹಾಗೂ ಬರಹಗಾರನೂ ಆಗಿದ್ದ. ಅವನಿಗೆ ತನ್ನ ವಿಚಾರಗಳ ಬಗೆಗೆ ಸ್ಪಷ್ಟತೆ ಇತ್ತು ನೇರವಾದ ಹರಿತವಾದ ಶೈಲಿಯಿತ್ತು; ಎಲ್ಲಕ್ಕಿಂತ ಮೇಲಾಗಿ ತನ್ನ ಅನಿಸಿಕೆಗಳನ್ನು ಸಹಚರರೊಂದಿಗೆ ಹಂಚಿಕೊಳ್ಳುವ ಹುರಿದುಂಬಿಸುವ ತುಡಿತವಿತ್ತು . ಅವನು ಬರೆದ ಕೆಲವೇ ಪ್ರಬಂಧ, ಪತ್ರ ಲೇಖನಗಳು ಲಭ್ಯವಿದ್ದರೂ ಅವು ಭಗತನ ವಿಚಾರ ಒಲವುಗಳನ್ನು ತಿಳಿಸುವಂತಿದೆ.
ಭಗತನಲ್ಲಿ ಸಾಮಾಜಿಕ ಕಳಕಳಿಯಿರುವ ಒಂದು ಗುಣವಿತ್ತು. ಅವನ ಒಂದು ಲೇಖನದಲ್ಲಿ ಅಸ್ಪೃಶ್ಯತೆ ಸಮಸ್ಯೆಗಳನ್ನು ಪರಿಶೀಲಿಸಿದ್ದ. ಅಸ್ಪೃಶ್ಯರು ಸಂಘಟಿತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದ. ಬಾಬಾಸಾಹೇಬ ಅಂಬೇಡ್ಕರರು “ನಾನು ಹಿಂದೂ ಆಗಿ ಹುಟ್ಟಿರುವೆ ಆದರೆ , ಹಿಂದುವಾಗಿ ಸಾಯಲಾರೆ” ಎಂಬ ಘೋಷಣೆಗಿಂತ ಮೊದಲೇ ಭಗತ್ ಸಿಂಗ್ ಅಸ್ಪೃಶ್ಯರು ಮತಾಂತರ ಆಗುವುದು ತುಂಬಾ ಸಹಜ ಎಂದು ಹೇಳಿದ್ದ. ಭಗತ್ ಸಿಂಗ್ ಯೋಚನೆಗಳು ತೀವ್ರಗಾಮಿಯಾಗಿ ಅಂಬೇಡ್ಕರರಿಗೆ ಪೂರಕವಾಗಿದ್ದವು . ಅವರ ಮಾತುಗಳು ಅಸ್ಪೃಶ್ಯರು ಅನ್ಯಾಯದ ವಿರುದ್ಧ ಸಿಡಿದೇಳುವಂತೆ ಇದ್ದವು
“ಲಾತದ ಭೂತ ಮಾತಿಗೆ ಹೆದರುವುದಿಲ್ಲ. ಅಸ್ಪೃಶ್ಯವೆನಿಸಿಕೊಂಡ ಸಮುದಾಯದ ಬಂಧುಗಳೇ, ಒಂದಾಗಿ , ಸ್ವಾವಲಂಬಿಗಳಾಗಿ ಆಗ ಇಡೀ ಸಮಾಜಕ್ಕೆ ಸವಾಲು ಹಾಕಿ ನೀವು ನಿಲ್ಲಬಲ್ಲಿರಿ. ಆಗ ಯಾರು ನಿಮ್ಮ ಹಕ್ಕುಗಳನ್ನು ನಿಮಗೆ ನಿರಾಕರಿಸಲಾರರು. ಬೇರೆಯವರು ನಿಮ್ಮನ್ನು ಮೋಸಗೊಳಿಸಲು ಬಿಡಬೇಡಿ. ಬೇರೆಯವರಿಂದ ಏನನ್ನೂ ನಿರೀಕ್ಷಿಸಲೂಬೇಡಿ . ಅಸ್ಪೃಶ್ಯರೆನಿಸಿಕೊಂಡ ಬಂಧುಗಳೇ, ಏಳಿ ನಿಮ್ಮ ಚರಿತ್ರೆ ತಿಳಿಯಿರಿ. ಶಿವಾಜಿ , ಗುರು ಗೋವಿಂದಸಿಂಗರ ತೋಳ್ಬಲ ನೀವೇ ಆಗಿದ್ದೀರಿ. ನಿಮ್ಮ ತ್ಯಾಗ ಬಂಗಾರದ ಅಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ ಏಳಿ , ಯಾರು ಬಿಡುಗಡೆ ಹೊಂದಲಿದ್ದಾರೋ ಅವರೇ ಎದ್ದು ಹೊಡೆತ ಕೊಡಬೇಕು.”
ಭಗತ್ ಸಿಂಗ್ ಜೈಲುವಾಸ ಸಹಿಸುವಂತದ್ದಾಗಿರಲಿಲ್ಲ ತುಂಬಾ ಅಮಾನವೀಯವಾಗಿತ್ತು. ತನ್ನ ಸಾವಿನ ಕೊನೆಯ ಗಳಿಗೆಯವರೆಗೂ ಯಾವ ಉದ್ವೇಗಕ್ಕೆ ಒಳಗಾಗದೆ , ದೌರ್ಬಲ್ಯ ತೋರದೆ , ಆತ್ಮಮರುಕ ಅನುಭವಿಸದೆ ಅಸೀಮ ದೈರ್ಯ ಮೆರೆದನು . ಜೈಲಿನಲ್ಲಿದ್ದ ಎರಡು ವರ್ಷ ಕಾಲದಲ್ಲಿ ಅವನೆಂದೂ ಮಾನವ ದೌರ್ಬಲ್ಯ ಕೀಳಾಗಿ ತನ್ನನ್ನು ಬಿಡುಗಡೆಗೊಳಿಸುವಂತೆ ಕೋರಲಿಲ್ಲ. ಸಹಿಸಲಾರದ ಹಿಂಸೆಯ ಜೈಲುವಾಸದ ನಡುವೆಯೇ ಗೆಳೆಯರಿಗೆ ಪತ್ರ ಬರೆದ ತನ್ನ ನಡೆಗಳಿಂದ ಜೈಲೊಳಗಿದ್ದು ಹೊರಗಿನವರಿಗೆ ಸ್ಪೂರ್ತಿ ತುಂಬಿದ. ಇಂದಿನ ನಮ್ಮಂಥವರಿಗೂ ಸ್ಪೂರ್ತಿದಾಯಕ ಭಗತ್. ಭಗತ್ ಅಂದು ಗಲ್ಲಿಗೆ ಏರದೇ ಇದ್ದಿದ್ದರೆ ಒಂದು ಅಮೂಲ್ಯ ಜ್ಞಾನ ನಿಧಿ ನಮ್ಮದಾಗುತ್ತಿತ್ತು . ಆದರೆ ಅಂದು ಯಾರೂ ಕೂಡಾ ಭಗತ್ ನನ್ನು ಬಿಡುಗಡೆಗೊಳಿಸಲು ಪ್ರಯತ್ನ ಪಡಲಿಲ್ಲವೇ ? ಎಂಬುದು ನಮ್ಮಲ್ಲಿ ಏಳುವ ಸಹಜ ಪ್ರಶ್ನೆ. 1930ರಲ್ಲಿ ಗಾಂಧಿ ಇರ್ವಿನ್ ಒಪ್ಪಂದದಲ್ಲಿ ಗಾಂಧಿ ಭಗತ್ನನ್ನು ಬಿಡುಗಡೆಗೊಳಿಸುವ ಒಂದು ಷರತ್ತು ವಿಧಿಸಿದ್ದರೆ ಖಂಡಿತಾ ಭಗತ್ ಬಿಡುಗಡೆಯಾಗುತ್ತಿದ್ದ. ಇರ್ವಿನ್ ಜೊತೆ ಔಪಚಾರಿಕವಾಗಿಯಾದರೂ ಗಾಂಧೀಜಿ ಈ ಮಹಾನ್ ಯುವಕನ ಜೀವ ಉಳಿಯಬೇಕೆಂಬ ಆಶಯ ವ್ಯಕ್ತಪಡಿಸಲಿಲ್ಲ. ಕೇವಲ 24ರ ಹರೆಯದ ಯುವ ಪ್ರತಿಭೆ ನಂದಿ ಹೋಯಿತು ಆದರೆ ಅಂದು ನಂದಿದ ಕ್ರಾಂತಿ ಜ್ಯೋತಿಯ ಕ್ರಾಂತಿಯ ಕಿಡಿಗಳು ನಾವಾಗಬೇಕಿದೆ . ಭಗತ್ ಹೇಳುವಂತೆ “ಮನುಷ್ಯನನ್ನು ನೀವು ಕೊಲ್ಲಬಹುದು ಆದರೆ ಅವನ ವಿಚಾರಗಳನ್ನಲ್ಲ” ಹಾಗೆಯೇ ಭಗತ್ ಪ್ರತಿಪಾದಿಸಿದ ವಿಚಾರಗಳು ಅವನಿಗಿಂತ ಮೊದಲು ಇದ್ದವು, ಅಂದಿಗೂ ಪ್ರಸ್ತುತವಾಗಿದ್ದವು , ಇಂದಿಗೂ ಪ್ರಸ್ತುತವಾಗಿವೆ. ಇಂದಿನ ಯುವ ಪೀಳಿಗೆ ಅಂದಿನ ಕ್ರಾಂತಿಕಾರಿ ವ್ಯಕ್ತಿಗಳ ಮಾರ್ಗದಲ್ಲಿ ಸಾಗಬೇಕಿದೆ.
“ಕ್ರಾಂತಿ ಚಿರಾಯುವಾಗಲಿ.”
✍🏻 -ಚಿರಂಜೀವಿ ರೋಡಕರ್.
ಮೂಲ ಲೇಖನ :-ಡಾ!! ಎಚ್ ಎಸ್ ಅನುಪಮಾ (ಖ್ಯಾತ ವೈದ್ಯರು, ಲೇಖಕಿ, ಚಿಂತಕಿ )



















