ಕಲಬುರಗಿ: ಜಿಲ್ಲೆಯ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿನ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿಯ ವಕ್ತಾರ ಆನಂದ ತೆಗನೂರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಕಿಡಿಗೇಡಿಗಳು ಅಂಬಿಗರ ಚೌಡಯ್ಯನವರ ಮೂರ್ತಿಯ ಎಡಗೈ ಒಡೆದು ಹಾಕಿ, ಬಲಗೈಯಲ್ಲಿದ್ದ ವಚನ ಪುಸ್ತಕದ ಭಾಗ ಕಟ್ ಮಾಡಿ ಮೂರ್ತಿಯ ಮುಖ ಭಾಗಕ್ಕೆ ಕೆಸರು ಸಿಡಿಸಿ ಅಂಬಿಗ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಸಮಾಜ ಘಾತುಕ ಶಕ್ತಿಯನ್ನು ತಕ್ಷಣವೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಂಡು ಸರಕಾರದಿಂದ ಕೂಡಲೇ ಮತ್ತೆ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಕಂಚಿನ ಮೂರ್ತಿ ಸ್ಥಾಪಿಸಬೇಕೆಂದು ಅವರು ಮನವಿ ಮಾಡಿದರು.
ಅಂಬಿಗರ ಚೌಡಯ್ಯನವರ ಮೂರ್ತಿ ಹಾನಿಗೊಳಿಸಿ ಸಮಾಜದಲ್ಲಿ ಶಾಂತಿ ಸೃಷ್ಠಿಸಲು ಮುಂದಾಗಿರುವ ಕಿಡಗೇಡಿಗಳನ್ನು ಬಂಧಿಸಿ ಕೂಡಲೇ ಗಡಿಪಾರು ಮಾಡುವಂತೆ ಆಗ್ರಹಿಸಿದರು. ಈ ಘಟನೆ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ನಮ್ಮ ಭಾವನೆಗೆ ನೋವುಂಟು ಮಾಡಿದೆ. ಆದ್ದರಿಂದ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
- ಕರುನಾಡ ಕಂದ ಪತ್ರಿಕೆ



















