ಬಳ್ಳಾರಿ/ ಕುಡತಿನಿ : ಗ್ರಾಮ ಠಾಣೆಯಲ್ಲಿ ನೆಲೆಸಿರುವ ಕುಟುಂಬಗಳಿಗೆ ಎ ಖಾತಾ ನೀಡದೆ, ರಿಯಲ್ ಎಸ್ಟೇಟ್‌ದಾರರಿಗೆ ಬಿ ಖಾತಾ ನೀಡುತ್ತಿದ್ದು, ಇದರಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ಕೂಡಲೇ ತನಿಖೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮವಹಿಸಲು, ಮೂಲ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಪ. ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ ಹೇಳಿದರು.
ಕುಡತಿನಿ ಪಟ್ಟಣ ಪಂಚಾಯಿತಿ ಕಛೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಬಂಗಾರಪ್ಪ ಸರ್ಕಾರದ ಅವಧಿ ವೇಳೆ ಕುಡತಿನಿ ಪಟ್ಟಣದಲ್ಲಿದ್ದ 10 ಎಕರೆ ಜಮೀನಿನಲ್ಲಿ ಎಸ್ ಸಿ, ಎಸ್ ಟಿ ಯ ಬಡ ಕುಟುಂಬಗಳಿಗೆ 30-40 ಅಳತೆಯ ಸೈಟ್ ಹಂಚಿಕೆ ಮಾಡಿಕೊಟ್ಟಿದ್ದರು. ಅದರಂತೆ ಇಲ್ಲಿನ ಸಾಕಷ್ಟು ಕುಟುಂಬಗಳು ಪ. ಪಂ. ಗೆ ತೆರಿಗೆ ಕಟ್ಟುವ ಮೂಲಕ ಜೀವನ ನಡೆಸುತ್ತಿದ್ದಾರೆ. ಆದರೆ, ಇಲ್ಲಿನ ಕುಟುಂಬಗಳಿಗೆ ನಮೂನೆ-3 ನೀಡಲು ಮೀನಾಮೇಷ ಎಣಿಸಲಾಗುತ್ತಿದೆ ಗ್ರಾಮ ಠಾಣೆಯಲ್ಲಿ ಬರೀ 782 ಜನರಿಗೆ ಎ ಖಾತಾ ಇದ್ದು, ಬರೀ ಆರು ತಿಂಗಳಲ್ಲಿ 1240 ಜನರಿಗೆ ಬಿ ಖಾತಾ ಮಾಡಿದ್ದಾರೆ. ಇವರಿಗೆ ಬಡವರ ಕಾಳಜಿ ಇಲ್ಲ ಬದಲಾಗಿ ರಿಯಲ್ ಎಸ್ಟೇಟ್ ದಾರರಿಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ಇದರಲ್ಲಿ ಕಂದಾಯ ಇಲಾಖೆಯೂ ನೇರ ಹೊಣೆಯಾಗಿದೆ. ಮೂಲ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು 14, 15ನೇ ವಾರ್ಡಿನಲ್ಲಿರುವ ಕುಟುಂಬಗಳಿಗೆ ಫಾರಂ-3 ನೀಡಬೇಕು ಎಂದರು.
ಜನರಿಗೋಸ್ಕರ ಕೆಲಸ ಮಾಡಲು ಪ.ಪಂ. ಗೆ ಬಂದಿದ್ದೇವೆ. ಜನ ಸೇವೆಯೇ ಜನಾರ್ದನ ಸೇವೆ ಎಂಬ ನಿಲುವನ್ನು ಹೊಂದಿದ್ದು, ಜನರ ಸೇವೆಗೆ ಸದಾ ಶ್ರಮಿಸುವೆ. ಕುಡತನಿ ಪ. ಪಂ. ಯಲ್ಲಿ 2020ರ ಅಕ್ಟೋಬರ್ 27ರಂದು ನಮಗೆ ಅಧ್ಯಕ್ಷ ಸ್ಥಾನ ಲಭಿಸಿತ್ತು. ಅದರಂತೆಯೇ 30 ತಿಂಗಳು ಅಧ್ಯಕ್ಷ ಸ್ಥಾನವನ್ನು ಸಂಪೂರ್ಣವಾಗಿ ನಿಭಾಯಿಸಿದ ಅನುಭವವಿದೆ. ಆದರೆ, ನಮ್ಮ ಅವಧಿ ನಂತರ ಅಧ್ಯಕ್ಷ ಸ್ಥಾನದ ಮೀಸಲಾತಿಯು ತಡವಾಗಿ ಬಂದಿದ್ದರಿಂದ 16 ತಿಂಗಳು ತಹಶೀಲ್ದಾರರು ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಹೀಗಾಗಿ ಸಂಪೂರ್ಣವಾಗಿ ಐದು ವರ್ಷದ ಅವಧಿ ಪೂರ್ಣಗೊಂಡಿಲ್ಲ. ಆದ್ದರಿಂದ ಮುಂದಿನ 16 ತಿಂಗಳು ಕಾಲಾವಕಾಶ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದು, ಅವಕಾಶ ನೀಡುವ ಆಶಾಭಾವನೆ ಇದೆ ಎಂದರು.
ಇಲ್ಲಿನ ಸಭೆಯಲ್ಲಿ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಆರ್. ಸುಜಾತ ಸತ್ಯಪ್ಪ, ಉಪಾಧ್ಯಕ್ಷ ಪಂಪಾಪತಿ ಕನಕೇರಿ, ಮುಖ್ಯಾಧಿಕಾರಿ ತೀರ್ಥಪ್ರಸಾದ್, ಕಂದಾಯ ನಿರೀಕ್ಷಕಿ ತಾಯಮ್ಮ, ಸದಸ್ಯರು, ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















