ಗುರುಮಠಕಲ್/ಯದ್ಲಾಪುರ ತಾಂಡಾ: ತಾಲೂಕಿನ ಯದ್ಲಾಪುರ ಕಮಲ್ ನಗರ ತಾಂಡಾದಲ್ಲಿ ಬಂಜಾರ ಸಮಾಜದವರು ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.
ಹಬ್ಬದ ಪೂರ್ವದಲ್ಲಿ ಸುಮಾರು 15 ದಿನಗಳ ಕಾಲ ಊರಿನ ತರುಣಿಯರು ಪ್ರತಿ ದಿನ ರಾತ್ರಿ ತೆರಳಿ ನಾಯಕರ ಮನೆಗಳ ಮುಂದೆ ಸಾಂಪ್ರದಾಯಿಕ ಜನಪದ ನೃತ್ಯ ಮಾಡುತ್ತಾರೆ ಮತ್ತು ಪಾರಂಪರಿಕ ಬಂಜಾರ ಹಾಡುಗಳನ್ನು ಹಾಡುತ್ತಾರೆ. ಈ ಸಂದರ್ಭದಲ್ಲಿ “ದಾಡೆರ ಕೊರ ದವಾಳಿ ಸೇವಾಲಾಲ್ ಬಾಪು ತೂನ ಮೇರಾ ಮರೀಯ್ಯಮ್ಮ ಯಡಿ ತೂನ್ ಮೇರಾ” ಎಂಬಂತೆ ಬಂಜಾರ ಪದಗಳಲ್ಲಿ ಹಾಡುಗಳನ್ನು ಹಾಡಿ ಉತ್ಸಾಹ ತುಂಬುತ್ತಾರೆ.
ದೀಪಾವಳಿಯಂದು ಪ್ರತಿಯೊಂದು ಮನೆಗೆ ತೆರಳಿ ಆರತಿ ಬೆಳಗಿಸುವ ಮೂಲಕ ಮತ್ತು ಹಾಡಿನ ಮೂಲಕ “ದೀಪಾವಳಿ ಹಬ್ಬದ ನಿಮಗೆ ಶುಭವಾಗಲಿ” ಎಂದು ಹಾರೈಸುವ ಪರಂಪರೆ ಇಲ್ಲಿನ ವಿಶಿಷ್ಟತೆ. ಈ ಸಾಂಪ್ರದಾಯಿಕ ಆಚರಣೆ ತಾಂಡಾದ ಬಂಜಾರರ ಲೋಕಗೀತೆಯ ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿದೆ ಎಂದು ಸ್ಥಳೀಯ ನಿವಾಸಿ ಭೂಪಾಲ್ ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















