
ಕೊಪ್ಪಳ :ಮಹಿಳೆಯರು ಇಂದು ಕೂಡಾ ಶೋಷಣೆಗೆ ಒಳಪಟ್ಟಿದ್ದಾರೆ. ಹೆಣ್ಣುಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಯವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರ ಕೊಪ್ಪಳದ ಸರಕಾರಿ ಪ್ರಥಮ ಮಹಿಳಾ ಕಾಲೇಜು ಮತ್ತು ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲಿಂಗ್ ವತಿಯಿಂದ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರು ಸಬಲೀಕರಣವಾಗಬೇಕು, ಮಹಿಳೆಯರು ಆರ್ಥಿಕವಾಗಿ ಶಕ್ತರಾಗಬೇಕು ಪದವಿ ಜೊತೆಗೆ ಕೌಶಲ್ಯಗಳು ಬೆಳೆಸಿಕೊಳ್ಳಬೇಕು ಮಹಿಳೆಯರು ಸ್ವಾವಲಂಬನೆಯ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲಿಂಗ್ ನ ಡೆಪ್ಯೂಟಿ ಮ್ಯಾನೇಜರ್ ಸೂರನ್ನ ಮಾತನಾಡಿ ನಿಮ್ಮ ಮಕ್ಕಳು ಏನು ಕಲಿಯುತ್ತಾರೆ ಎಂಬುದು ಪಾಲಕರು ತಿಳಿದುಕೊಳ್ಳಬೇಕು. ಇಂದು ವಿದ್ಯಾರ್ಥಿಗಳು ತಮ್ಮ ಕಾಲು ಮೇಲೆ ತಾವು ನಿಂತುಕೊಳ್ಳಬೇಕು ಪ್ರಸ್ತುತ ಮಾರುಕಟ್ಟೆ ಕನ್ನಡ ಭಾಷೆ ಜತೆ ಇಂಗ್ಲಿಷ್ ಭಾಷೆ ಅಗತ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಬೇಕು ಪಾಲಕರು ಮತ್ತು ತರಬೇತಿ ನೀಡುವ ಮಾರ್ಗದರ್ಶಕರು ಇಬ್ಬರೂ ಕೈ ಜೋಡಿಸಿದರೆ ಮಕ್ಕಳ ಜೀವನ ಉತ್ತಮವಾಗುತ್ತದೆ ಎಂದರು.
ವಿದ್ಯಾರ್ಥಿಗಳು ದೇಶಪಾಂಡೆ ಸ್ಕಿಲಿಂಗ್ ತರಬೇತಿ ಕುರಿತು ಅನುಭವದ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಲೇಜಿನ ಉದ್ಯೋಗ ಕೋಶದ ಸಂಚಾಲಕರಾದ ಡಾ.ಪ್ರದೀಪ್ ಕುಮಾರ ಅವರು ಮಾತನಾಡುತ್ತಾ ವಿದ್ಯೆಯು ನಿಮ್ಮ ಸಾಧನೆಗೆ ಮೆಟ್ಟಿಲು ಆಗುತ್ತದೆ, ದುಡ್ಡಿಗಿಂತ ಜ್ಞಾನ ಮುಖ್ಯ, ಮಕ್ಕಳು ಶ್ರಮ ಪಡಬೇಕು ಪಾಲಕರು ಕೂಡ ತಮ್ಮ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬದನ್ನು ತಿಳಿದುಕೊಳ್ಳಬೇಕು. ಪಾಲಕರು ಮಕ್ಕಳನ್ನು ವಿದ್ಯಾಭ್ಯಾಸದಿಂದ ಅರ್ಧಕ್ಕೆ ಮೊಟಕುಗೊಳಿಸಬಾರದು ಹಾಗೂ ಪೋಷಕರು ಮಕ್ಕಳಿಗೆ ಆಸ್ತಿಯನ್ನು ಮಾಡುವುದರ ಬದಲು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದರ ಮೂಲಕ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದರು.
ವೇದಿಕೆಯಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲಿಂಗ್ ನ ತರಬೇತಿದಾರ ಅಖಿಲ ಬೇಗಂ, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಅಶೋಕ ಕುಮಾರ್, ಡಾ. ನರಸಿಂಹ ಮತ್ತು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಕ್ಷತಾ ಸ್ವಾಗತಿಸಿದರು. ಮಹಾದೇವಿ ಮತ್ತು ದುರಗಮ್ಮ ಪ್ರಾರ್ಥನೆ ಗೀತೆ ಹಾಡಿದರು. ದುರಗಮ್ಮ ನಿರೂಪಿಸಿ, ವಂದಿಸಿದರು.
- ಕರುನಾಡ ಕಂದ ಪತ್ರಿಕೆ



















