ಶಿವಮೊಗ್ಗ: ಆರೋಗ್ಯ ಎನ್ನುವುದು ಕೇವಲ ದೈಹಿಕ ಸುಸ್ಥಿತಿ ಎನ್ನುವುದಕ್ಕಿಂತ ವಿಸ್ತಾರ ಅರ್ಥ ಹೊಂದಿದೆ. ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸಮತೋಲನ ಸಾಧಿಸುವುದು ಬಹಳ ಮುಖ್ಯ ಎಂದು ಖ್ಯಾತ ವೈದ್ಯರೂ ಬರಹಗಾರರೂ ಆದ ಡಾ.ಎಚ್.ಎಸ್. ಅನುಪಮಾ ಅವರು ತಿಳಿಸಿದರು.
ಅವರು ಕಾಲೇಜಿನ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ದೈಹಿಕ ಶಿಕ್ಷಣ ವಿಭಾಗಗಳ ಸಂಯುಕ್ತ ಅಶ್ರಯದಲ್ಲಿ ಆಯೋಜಿಸಲಾದ ‘ ಆರೋಗ್ಯ ಮತ್ತು ಸ್ವಾಸ್ಥ್ಯ ‘ ಕುರಿತ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.
ಸರಿಯಾದ ಸಮಯದಲ್ಲಿ ನಿದ್ದೆ ಮತ್ತು ಆಹಾರ ಸೇವನೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಇಂದಿನ ಯುವಜನರು ಇವುಗಳನ್ನು ಪಾಲಿಸದೇ ಜಂಕ್ ಆಹಾರ ಸೇವನೆ, ನಿದ್ರಾಹೀನತೆಗೆ ಪಕ್ಕಾಗಿದ್ದಾರೆ ಎಂದು ನುಡಿದ ಅವರು ದೈಹಿಕ ಶ್ರಮದ ಮಹತ್ವವನ್ನು ತಿಳಿಯಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಐಕ್ಯೂಎಸಿ ಸಂಚಾಲಕಿ ಡಾ. ಭಾರತಿ ದೇವಿ ಅವರು ರೋಗ ಬಂದ ಮೇಲೆ ಔಷಧಿ ಸೇವಿಸುವುದಕ್ಕಿಂತ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮಹಳ ಮುಖ್ಯ ಎನ್ನುತ್ತಾ ಈ ಕೋರ್ಸಿನ ಮಹತ್ವವನ್ನು ತಿಳಿಯಪಡಿಸಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲರಾದ ಡಾ.ಪ್ರತಿಭಾ.ಕೆ.ಆರ್ ಅವರು ಸದೃಢ ಯುವಜನತೆಯಿಂದ ಮಾತ್ರ ದೇಶ ಸದೃಢಗೊಳ್ಳುವುದು ಸಾಧ್ಯ, ಇಂದು ದೊಡ್ಡತನದ ದ್ಯೋತಕ ಸಂಪತ್ತಲ್ಲ, ಬದಲಿಗೆ ಒಳ್ಳೆಯ ಆರೋಗ್ಯವೇ ಶ್ರೀಮಂತಿಕೆ ಎಂದು ವಿವರಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನಾಗರಾಜ ನಾಯ್ಕ್. ಎಸ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಚಂದ್ರಪ್ಪ.ಸಿ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ತ್ರಿಶೂಲ್.ಜಿ.ಎಸ್ ನಿರೂಪಿಸಿದರು. ಅನುವಾದಕರೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಕ್ರಿಯ ಕಾರ್ಯಕರ್ತರೂ ಆದ ರೇಖಾಂಬಾ.ಟಿ.ಎಲ್, ದೈಹಿಕ ಶಿಕ್ಷಣ ನಿರ್ದೇಶಕರಾದ ವಿಶ್ವನಾಥ.ಎಂ.ಡಿ ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್



















