ಬಳ್ಳಾರಿ / ಕಂಪ್ಲಿ : ಪಟ್ಟಣದ ಸಾಹಿತ್ಯ ಸಿರಿ ಪ್ರತಿಷ್ಠಾನವು ಗಂಗಾ ಸಂಕೀರ್ಣದಲ್ಲಿ ಹಮ್ಮಿಕೊಂಡ ಕುವೆಂಪು ಸಂಸ್ಮರಣೋತ್ಸವ ನಿಮಿತ್ತ ಭಾನುವಾರ ‘ಕುವೆಂಪು ವಿಚಾರಧಾರೆ’ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಷಾ. ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಜೀರು ಮಲ್ಲಿಕಾರ್ಜುನ ಉಪನ್ಯಾಸ ನೀಡಿ, ಕುವೆಂಪು ಸಾಹಿತ್ಯದ ತತ್ವ ಆದರ್ಶಗಳು ಸದಾ ಪ್ರಸ್ತುತವಾಗಿರುತ್ತವೆ. ವಿಶ್ವಮಾನವ, ನಿರಂಕುಶಮತಿ, ನಾಡಪ್ರೇಮ, ಕನ್ನಡ ನುಡಿ ಪ್ರೇಮ, ದಾಂಪತ್ಯ, ಪ್ರಕೃತಿ, ಆಧ್ಯಾತ್ಮ, ನಿಸರ್ಗ, ಮೌಢ್ಯವಿರೋಧಿ ಭಾವನೆಗಳನ್ನು ಕುವೆಂಪು ಕವಿತೆಗಳಲ್ಲಿ ಕಾಣಬಹುದಾಗಿದೆ. ಮನುಜಮತ ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣತೆ, ನಿರಂಕುಶಮತಿ ಮೊದಲಾದ ತತ್ವ ಆದರ್ಶಗಳು ತ್ರಿಕಾಲವು ಪ್ರಸ್ತುತವಾಗಿರುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ಕನ್ನಡಿಗರ ಸಂಘಟನೆಯಲ್ಲಿ ಕುವೆಂಪು ಸಾಹಿತ್ಯ ಮಹತ್ವದಪಾತ್ರವಹಿಸಿತ್ತು ಎಂದರು.
ನಿವೃತ್ತ ಮುಖ್ಯಶಿಕ್ಷಕ ಕೆ.ಚಂದ್ರಶೇಖರ್ ಅಧ್ಯಕ್ಷತೆವಹಿಸಿ ಮಾತನಾಡಿ, ಕುವೆಂಪು ಕವಿತೆಗಳು ಮನುಜರಲ್ಲಿ ಸಾಮರಸ್ಯ, ಸಹಿಷ್ಣುತೆ, ಸಹೋದರತೆ ಮನೋಭಾವನೆಗಳನ್ನು ಬೆಳಸಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದರು.
ಶಿಕ್ಷಕಿ ವೀರಮ್ಮನಾಗರಾಜ, ಉಪನ್ಯಾಸಕ ಜೀರು ಮಲ್ಲಿಕಾರ್ಜುನ ಕುವೆಂಪು ಗೀತೆಗಳನ್ನು ಹಾಡಿದರು.
ಈಚೆಗೆ ನಿಧನರಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕಳ ಆತ್ಮಕ್ಕೆ ಶಾಂತಿಕೋರಿ ಮೌನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪೋಡಿ ನಾರಾಯಣಪ್ಪ, ಎಲಿಗಾರ ವೆಂಕಟರೆಡ್ಡಿ, ಪ್ರತಿಷ್ಠಾನದ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಬಂಗಿ ದೊಡ್ಡ ಮಂಜುನಾಥ, ಎಸ್.ಶಾಮಸುಂದರರಾವ್, ಅಂಬಿಗರ ಮಂಜುನಾಥ, ಚಂದ್ರಯ್ಯ ಸೊಪ್ಪಿಮಠ, ವೀರಮ್ಮನಾಗರಾಜ, ಎಚ್.ನಾಗರಾಜ, ಮುದುಕಪ್ಪ ನೆಲಜೇರಿ, ಯು.ಎಂ.ವಿದ್ಯಾಶಂಕರ್, ಕೆ.ಯಂಕಾರೆಡ್ಡಿ, ಗಂಡಿ ಗಣೇಶ, ರಾಮಚಂದ್ರ ಚಿತ್ರಗಾರ, ಪೀರಸಾಬ್ ಹಂಚಿನಾಳ, ಗುರುಬಸಮ್ಮ ಸೇರಿ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















