ಡಾ. ವಿಕ್ರಮ್ ಆಚಾರ್ಯ – ಬೆಂಗಳೂರಿನ ಪ್ರಸಿದ್ಧ ವಿಜ್ಞಾನಿ. ಅವರ ಕನಸು – ಕಾಲವನ್ನು ಮುರಿದು ಭವಿಷ್ಯವನ್ನು ನೋಡುವುದು. ಹಲವು ವರ್ಷಗಳ ಪರಿಶ್ರಮದ ಫಲವಾಗಿ ಅವರು “ಟೈಮ್ ಸಿಗ್ನೆಚರ್ ರೆಸೋನೇಟರ್” ಯಂತ್ರವನ್ನು ನಿರ್ಮಿಸಿದರು. ಅವರ ಸಹಾಯಕಿ ಅಕ್ಷತಾ, ಈ ಪ್ರಯೋಗದ ಸಾಕ್ಷಿಯಾಗಿದ್ದಳು. ಆದರೆ ಯಂತ್ರವು ಕೇವಲ ನೆನಪುಗಳನ್ನಷ್ಟೇ ಅಲ್ಲ, ಸ್ಪಷ್ಟವಿಲ್ಲದ ಭವಿಷ್ಯದ ಚಿತ್ರಣಗಳನ್ನೂ ತೋರಿಸುತ್ತಿತ್ತು.
ಒಂದು ದಿನ, ಬೆಳಕು ಸ್ಫೋಟದೊಂದಿಗೆ ಅವರು ಇಬ್ಬರೂ 250 ವರ್ಷ ಹಿಂದಿನ ಹಳ್ಳಿಗೆ ಎಸೆಯಲ್ಪಟ್ಟರು. ಆ ಹಳ್ಳಿ ಶಾಂತವಾಗಿದ್ದರೂ, ಯಂತ್ರ ತೋರಿಸಿದ ಭವಿಷ್ಯದಲ್ಲಿ ಅಲ್ಲಿ ಭೀಕರವಾದ ರೋಗ ಹರಡುತ್ತಿತ್ತು. ಜನರ ಮುಖಗಳು ಕರಗುವಂತೆ, ಶರೀರ ನಾಶವಾಗುವಂತೆ… ಆ ದೃಶ್ಯ ವಿಕ್ರಮ್‌ನ ಮನಸ್ಸಿನಲ್ಲಿ ಹೂರಿಕೊಂಡಿತ್ತು.
ಅವರು ರೋಗ ತಡೆಯಲು ಪ್ರಯತ್ನಿಸಿದರು. ಆಯುರ್ವೇದ + ಆಧುನಿಕ ತಂತ್ರಜ್ಞಾನ ಮಿಶ್ರಣ ಮಾಡಿ ಪರಿಹಾರ ಕಂಡುಕೊಂಡರು. ಹಳ್ಳಿ ಉಳಿಯಿತು. ಆದರೆ ಯಂತ್ರದಲ್ಲಿ ಹೊಸ ದೃಶ್ಯ ಬೆಳಗಿತು. ಈ ಬಾರಿ ಭವಿಷ್ಯದ ದೃಶ್ಯ – ಬೆಂಗಳೂರು ನಗರ. ಅದೇ ರೋಗ, ಅದೇ ನಾಶ ಲಕ್ಷಾಂತರ ಜನರು ಬೀದಿಗಳಲ್ಲಿ ಬಿದ್ದು ಸಾಯುತ್ತಿದ್ದರು.
ವಿಕ್ರಮ್ ಬೆಚ್ಚಿಬಿದ್ದರು, ಅವರಿಗೆ ಅರ್ಥವಾಯಿತು ಅವರು ರೋಗವನ್ನು ತಡೆದಿಲ್ಲ. ಕೇವಲ ಅದು ಹಳ್ಳಿಯಿಂದ ನಗರಕ್ಕೆ ಸಾಗುವ ದಾರಿಯನ್ನು ತಡೆದಿದ್ದರು.
ಅವರು ಅಕ್ಷತಾಳ ಕಡೆ ತಿರುಗಿದರು. ಆಕೆ ಅಸಹಜವಾಗಿ ನಗುತ್ತಾಳೆ. ವಿಕ್ರಮ್, ಈ ಎಲ್ಲವೂ ನಿನ್ನ ಕಲ್ಪನೆ ಅಲ್ಲ. ನಾನು ಈ ಯಂತ್ರವನ್ನು ಪರೀಕ್ಷಿಸಲು ಬಂದ ಸಹಾಯಕಿ ಅಲ್ಲ ನಾನು ಭವಿಷ್ಯದಿಂದ ಬಂದವಳು. ನಿನ್ನ ಆವಿಷ್ಕಾರವೇ ನನ್ನ ಕಾಲದಲ್ಲಿ ಲಕ್ಷಾಂತರ ಜನರ ನಾಶಕ್ಕೆ ಕಾರಣವಾಯಿತು. ನಾನು ಹಿಂದಕ್ಕೆ ಬಂದು ನಿನ್ನನ್ನು ತಡೆಯಬೇಕಾಗಿತ್ತು. ಆದರೆ ನೀನು ಈಗಾಗಲೇ ಬಾಗಿಲು ತೆರೆದಿದ್ದೀಯ.”
ವಿಕ್ರಮ್ ನಡುಗಿದರು. ಅಂದರೆ…? ಅಕ್ಷತಾ ಕಣ್ಣಲ್ಲಿ ವಿಚಿತ್ರ ಕಿರಣ ಮಿನುಗಿತು. ಅಂದರೆ ಈ ರೋಗ ಈಗ ಆರಂಭವಾಗಿದೆ.
ಆಕೆಯ ಶರೀರ ನಿಧಾನವಾಗಿ ಹೊಳೆಯಲು ಶುರುವಾಯಿತು. ಕ್ಷಣಾರ್ಧದಲ್ಲಿ ಆಕೆ ಧೂಳಾಗಿ ಅಳಿದು ಹೋದಳು.
ವಿಕ್ರಮ್ ಒಬ್ಬನೇ ಉಳಿದರು – ಕೈಯಲ್ಲಿ ನಾಶವಾದ ಯಂತ್ರದ ಅವಶೇಷ, ಮನಸ್ಸಿನಲ್ಲಿ ಭೀತಿಯ ಪ್ರಶ್ನೆ?
ನಾನು ಕಾಲವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೆ. ಆದರೆ ಕಾಲವೇ ನನ್ನನ್ನು ನಿಯಂತ್ರಿಸುತ್ತಿದೆಯಾ?
- ಸಂದೀಪ್ ಜೋಶಿ, ಗಂಗಾವತಿ




















