ಬಳ್ಳಾರಿ / ಕಂಪ್ಲಿ : ದೇಶದ ಪ್ರಥಮ ಪ್ರಧಾನಿ ದೇಶಕ್ಕೆ ದಕ್ಷ ಆಡಳಿತ ಒದಗಿಸಿ, ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಮೂಲಕ ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕಿದ ಜವಹರಲಾಲ್ ನೆಹರು ರವರಿಗೆ ಮಕ್ಕಳೆಂದರೆ ಬಹಳಷ್ಟು ಪ್ರೀತಿ. ಆದ್ದರಿಂದ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದು
ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ. ರಾಮು ತಿಳಿಸಿದರು.
ಅವರು ಪಟ್ಟಣದ ಶ್ರೀ ಮಾತಾ ಮೊಂಟೆಸರಿ ವಿದ್ಯಾ ಸಂಸ್ಥೆ (ರಿ.) ಯ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,
ದೀಪ ಹಚ್ಚುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ದುರಭ್ಯಾಸಗಳಿಗೆ ದಾಸರಾಗದೇ ಉತ್ತಮ ನಡೆ, ನುಡಿ ಆಚಾರ, ವಿಚಾರಗಳನ್ನು ಬೆಳೆಸಿಕೊಂಡು ಭವ್ಯ ಭಾರತದ ಕೀರ್ತಿ ಪತಾಕೆ ಹರಿಸಬೇಕು. ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡದೇ, ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.
ಮುಖ್ಯಗುರು ಹೆಚ್. ಮರಿಯಪ್ಪ ಮಾತನಾಡಿ , ಆಧುನಿಕತೆಯ ಭರಾಟೆಯಲ್ಲಿ ನಾವು ನಮ್ಮ ಮಕ್ಕಳಿಗೆ ಕಲೆ,ಸಾಹಿತ್ಯ,ಸಂಸ್ಕೃತಿಯ ಪರಿಚಯ ಮಾಡಿಸದೇ ಇರುವುದು ದುರಂತವೇ ಸರಿ. ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿದ್ದು, ಪೋಷಕರು ಎಚ್ಚರಿಕೆ ವಹಿಸಿ ಮೊಬೈಲ್ ಬಳಕೆಯಿಂದ ದೂರವಿರುವಂತೆ ನೋಡಿಕೊಳ್ಳಬೇಕು.
ಮಕ್ಕಳು ದೇವರ ಪ್ರತಿರೂಪವಾಗಿದ್ದು ಒಳ್ಳೆಯ ಸನ್ನಡತೆಯನ್ನು ಅವರಿಗೆ ಬಾಲ್ಯದಲ್ಲಿಯೇ ಕಲಿಸಬೇಕು.
ಈ ಕೆಲಸ ಮನೆಯ ಪೋಷಕರು ಹಾಗೂ ಶಿಕ್ಷಕರು ಜವಾಬ್ದಾರಿಯಿಂದ ನಿರ್ವಹಿಸಿದ್ದೇ ಆದರೆ ಭವ್ಯ ಭಾರತದ ಭವಿಷ್ಯದ ಪ್ರಜೆಗಳನ್ನು ರೂಪಿಸಬಹುದು ಎಂದರು.
ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆ ಮಾಡಲಾಯಿತು.
ಇದೇ ವೇಳೆ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಹಾಗೂ ಸಾಮೂಹಿಕ ನೃತ್ಯಗಳು ನೋಡುಗರ ಕಣ್ಮನ ಸೆಳೆದವು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎಂ ಪುಷ್ಪ, ಸೇರಿದಂತೆ ಎಲ್ಲಾ ಸಹ ಶಿಕ್ಷಕರು/ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















