
ಬಳ್ಳಾರಿ / ಕಂಪ್ಲಿ: ಗ್ರ್ರಾಮೀಣ ಪ್ರದೇಶದ ಜನರಿಗಾಗಿ ಸರಕಾರ ಲಕ್ಷಾಂತರ ರೂ. ವೆಚ್ಚ ಮಾಡಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಿದೆ. ಆದರೆ, ಸ್ಥಳೀಯ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಗ್ರಾಮೀಣ ಭಾಗದ ಜನರಿಗೆ ಅಶುದ್ಧ ನೀರೇ ಗತಿಯಾಗಿದೆ.
ಗ್ರಾಮೀಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ವಿವಿಧ ಯೋಜನೆಗಳಡಿ ಸರ್ಕಾರ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಸಾರ್ವಜನಿಕ ಬಳಕೆಗೆ ಬಾರದೆ ನಿರುಪಯುಕ್ತವಾಗಿದ್ದು, ಸರ್ಕಾರದ ಲಕ್ಷ ಲಕ್ಷ ಹಣ ಪೋಲಾದಂತಾಗಿದೆ.
ತಾಲೂಕಿನ ಹಂಪಾದೇವನಹಳ್ಳಿ ಗ್ರಾಪಂಯ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ, ಜನರಿಗೆ ಶುದ್ಧ ನೀರು ಇಲ್ಲದಿರುವುದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ದುರಸ್ತಿ ಭಾಗ್ಯ ಕಾಣದ ಘಟಕಗಳು:
ಗ್ರಾಮದಲ್ಲಿ ಸುಮಾರು 3ರಿಂದ 4ಸಾವಿರ ಜನ ವಾಸಿಸುತ್ತಿದ್ದಾರೆ. ಗ್ರಾಮಸ್ಥರ ಆರೋಗ್ಯದ ಅನೂಕೂಲಕ್ಕಾಗಿ ಸರ್ಕಾರದ ವಿವಿಧ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮದ 1ನೇ ವಾರ್ಡಿನ ಸುಂಕ್ಲಮ್ಮ ಗುಡಿ ಬಳಿಯಲ್ಲಿ ನಿರ್ಮಿಸಲಾಗಿದೆ. ಘಟಕ ಕೆಟ್ಟು ಸುಮಾರು 6-7 ತಿಂಗಳು ಕಳೆದರೂ ದುರಸ್ತಿ ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿನ ಘಟಕದ ಹಿಂಬದಿಯಲ್ಲಿ ಗ್ರಾಪಂಯ ಬಿಲ್ ಕಲೆಕ್ಟರ್ (ಕರ ವಸೂಲಿಗಾರ) ವಾಸಿಸುತ್ತಿದ್ದು, ಅವರು ಕೂಡ ಗ್ರಾಮದ ಜನತೆಗೆ ಶುದ್ಧ ನೀರು ಒದಗಿಸಲು ಆಸಕ್ತಿ ತೋರಿಸುತ್ತಿಲ್ಲ ಎಂಬ ಅಳಲು ಇಲ್ಲಿನ ನಿವಾಸಿಗಳದ್ದಾಗಿದೆ. ಘಟಕಗಳು ಚಾಲ್ತಿಯಲ್ಲಿದರೆ, ಯಂತ್ರೋಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸಲಿವೆ. ಆದರೆ, ಘಟಕವೇ ದುರಸ್ಥಿಗೆ ಒಳಪಟ್ಟರೆ, ಸರಿಯಾದ ನಿರ್ವಹಣೆ ಇಲ್ಲದೆ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗುವ ಸ್ಥಿತಿಗೆ ತಲುವುದು ಅನಿವಾರ್ಯವಾಗಿದೆ.
ದೂರದಿಂದ ನೀರು ತರಬೇಕು:
ದಿನನಿತ್ಯ ಕುಡಿಯಲು ಹಾಗೂ ಸಭೆ ಸಮಾರಂಭಗಳಿಗೆ ಶುದ್ಧ ಕುಡಿಯುವ ನೀರು ತರಲು ದ್ವಿಚಕ್ರ ಹಾಗೂ ಇತರೆ ವಾಹನ ಇರುವವರು ದೂರದ ಬಳ್ಳಾಪುರ ಸೇರಿದಂತೆ ಇತರೆ ಗ್ರಾಮಗಳಿಗೆ ತೆರಳಿ, ದುಡ್ಡು ಕೊಟ್ಟು ನೀರು ತರುತ್ತಿದ್ದು, ಅನುಭವಿಸುವಂತಾಗಿದೆ. ಬಡವರು ಹಾಗೂ ವಾಹನ ಸೌಲಭ್ಯ ಇಲ್ಲದವರಿಗೆ ಕೈಪಂಪಿನ ಪ್ಲೋರೈಡ್ಯುಕ್ತ ನೀರೇ ಗತಿ ಎನ್ನುವಂತಾಗಿದೆ. ಇಲ್ಲಿನ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಹಾಕಿದ ಮನೆ ಮನೆಗೆ ಜಲ ಎಂಬುದು ಹಳ್ಳ ಹಿಡಿದಂತಾಗಿದೆ. ಇಲ್ಲಿ ಮನೆಗಳಿಗೆ ಹಾಕಿದ ಪೈಪ್, ಮೀಟರ್ ಪಾಳು ಬಿದ್ದಂತಹ ಸ್ಥಿತಿಯಲ್ಲಿವೇ ಮಾತ್ರ ನೀರು ಹರಿಯುತ್ತಿಲ್ಲ.
ಮಂಡಿ ನೋವು : ಇಲ್ಲಿನ ಅಶುದ್ಧ ಮತ್ತು ಪ್ಲೋರೈಡ್ ಮಿಶ್ರಿತ ನೀರು ಸೇವನೆಯಿಂದ ಸಾರ್ವಜನಿಕರಲ್ಲಿ ಮಂಡಿ ನೋವು, ಕೈಕಾಲು, ಮೂಳೆ ಸವೆತ, ಬೆನ್ನು, ಮಂಡಿ ನೋವು, ಹಲ್ಲು ನೋವು, ಮಾಸಖಂಡಗಳಲ್ಲಿ ನೋವು, ಜೀರ್ಣಾಂಗ ಸಮಸ್ಯೆ ಸೇರಿದಂತೆ ಇತರೆ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯ ಕೊರತೆ : ಇಲ್ಲಿನ 1ನೇ ಅಂಗನವಾಡಿ ಕೇಂದ್ರದಲ್ಲಿ ಶೌಚಾಗೃಹ ಇಲ್ಲದ ಹಿನ್ನಲೆ ಮಕ್ಕಳು ಬಯಲು ಬಹಿರ್ದೆಸೆಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಇಲ್ಲಿ ನೀರಿಲ್ಲ, ಚರಂಡಿ ಇಲ್ಲ. ಇದರ ನಡುವೆ ಮಕ್ಕಳು ಕಲಿಯಬೇಕಾದ ಸ್ಥಿತಿ ಎದುರಾಗಿದೆ.
ಬೀದಿ ದೀಪದ ಸಂಕಷ್ಟ :
ಇಲ್ಲಿನ ವಾರ್ಡಿನಲ್ಲಿ ಬೀದಿ ದೀಪದ ವ್ಯತ್ಯಯದಿಂದ ಕತ್ತಲಿನಲ್ಲೇ ಜನರು ವಾಸ ಮಾಡುತ್ತಿದ್ದಾರೆ. ಇದರಿಂದ ಹೇಗಪ್ಪಾ ಜೀವನ ಮಾಡೋದು ಎನ್ನುತ್ತಿದ್ದಾರೆ ನಿವಾಸಿಗಳು.
ಒಟ್ಟಾರೆ ಚಿಕ್ಕಜಾಯಿಗನೂರು ಗ್ರಾಮದಲ್ಲಿ ನಾನಾ ಸಮಸ್ಯೆಗಳು ತಾಂಡವವಾಡುತ್ತಿದ್ದು, ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮೂಲಸೌಕರ್ಯ ಒದಗಿಸುವ ಮೂಲಕ ಇಲ್ಲಿನ ಜನರ ನೆಮ್ಮದಿಯ ಬದುಕಿಗೆ ಅನುವು ಮಾಡಿಕೊಡಬೇಕೆಂಬು ಸ್ಥಳೀಯ ನಿವಾಸಿಗಳಾದ ಪೂಜಾರಿ ಅಂಜಿನಿ, ಈಶ್ವರಮ್ಮ, ನಾಗಲಕ್ಷ್ಮೀ, ನಾಗಮ್ಮ, ಯಂಕಮ್ಮ, ದೊಡ್ಡಬಸಮ್ಮ, ಅಂಜಿನಮ್ಮ ಹಕ್ಕೊತ್ತಾಯವಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಪೂರೈಸಿ ಅನುಕೂಲ ಮಾಡಿಕೊಡಬೇಕು. ಜನಸಾಮಾನ್ಯರು ವಿವಿಧ ರೋಗಗಳಿಗೆ ತುತ್ತಾಗದಂತೆ ತಡೆಯಲು ಶೀಘ್ರದಲ್ಲಿ ಸಂಬಂಧಿಸಿದವರು ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಶುದ್ಧ ನೀರು ನೀಡಬೇಕು.
- ಪೂಜಾರಿ ಅಂಜಿನಿ, ನಿವಾಸಿ. ಚಿಕ್ಕಜಾಯಿಗನೂರು.
ವರದಿ : ಜಿಲಾನಸಾಬ್ ಬಡಿಗೇರ್



















