ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ : ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಬಾಗಲಕೋಟೆ/ ಹುನಗುಂದ:ಶಿಕ್ಷಣದಿಂದಲೇ ಸಾಮಾಜಿಕ ಅಭಿವೃದ್ಧಿ ಸಾಧ್ಯ, ಅದಕ್ಕಾಗಿ ಕ್ಷೇತ್ರದಾದ್ಯಂತ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಗುರುವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಯಾವ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಮ್ಮ ಸರ್ಕಾರದ ಉದೇಶದಿಂದ ಕೇತ್ರದಾದ್ಯಂತ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಬೋಧನಾ ಕೋಠಡಿಗಳನ್ನು ನಿರ್ಮಿಸಲಾಗಿದ್ದು. ಜಿಲ್ಲೆಯಲ್ಲಿಯೇ ಅತ್ಯುತ್ತಮ ಕಾಲೇಜು ಎಂದು ಹೆಗ್ಗಳಿಕೆ ಗಳಿಸಿರುವ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸ್ನೇಹಿ ವಾತಾವರಣದ ಜೊತೆಗೆ ಗುಣಮಟ್ಟದ ವಿಷಯದಲ್ಲಿ ರಾಜ್ಯದ ಯಾವುದೇ ಕಾಲೇಜಿಗೂ ಸ್ಪರ್ಧೆ ನೀಡಬಲ್ಲ ಎಲ್ಲ ಸೌಕರ್ಯಗಳನ್ನು ಹೊಂದಿದೆ. ಇದಕ್ಕೆ ಕಾಲೇಜು ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ರಾಜ್ಯಾಭಿಮಾನ ಮತ್ತು ದೇಶಾಭಿಮಾನವನ್ನು ಮೂಡಿಸುವುದೇ ಶಿಕ್ಷಣದ ಉದೇಶವಾಗಿದೆ. ಆ ದಿಸಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮ ಕಾಲೇಜು ಪ್ರಾಧ್ಯಾಪಕ ಮತ್ತು ಸಿಬ್ಬಂದಿ ವೃಂದ ಸ್ತುತ್ಯಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಮದುರ್ಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಮ್. ಡಿ. ಕಮತಗಿ ಮಾತನಾಡಿ ಶಾಸಕರ ನೇತೃತ್ವದಲ್ಲಿ ಕಾಲೇಜು ಅಭಿವೃದ್ಧಿ ಹೊಂದಿದ್ದು ಅವರ ಶೈಕ್ಷಣಿಕ ದೂರದೃಷ್ಟಿಗೆ ನಿದರ್ಶನವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬ್ಯಾಂಡ್ಮಿಂಟನ್ ಮೈದಾನವನ್ನು ಶಾಸಕರು ಉದ್ಘಾಟಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸಿ.ಜಿ.ಹವಾಲ್ದಾರ, ದೇವು ಡಂಬಳ, ಎ.ಜಿ,ಹುಚನೂರ, ರಾಣಿ ತೋಪಲಕಟ್ಟಿ, ಸಾವಿತ್ರ ತಪೇಲಿ ಹಾಗೂ ಡಾ.ಎ.ಬಿ. ವಗ್ಗರ, ಡಾ.ಕೆ.ಎಮ್.ಸಾರವಾನ ಹಾಗೂ ಕಾಲೇಜಿನ ಸರ್ವ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದ್ದರು. ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಪ್ರೊ.ಬಿ.ವಾಯ್. ಅಲೂರ ಅತಿಥಿಗಳ ಪರಿಚಯ ಹಾಗೂ ಸ್ವಾಗತಿಸಿದರು. ಪ್ರಾಧ್ಯಾಪಕ ಪ್ರೊ.ಸುರೇಶ ಎಚ್. ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐ. ಕ್ಯು. ಎ. ಸಿ ಸಂಚಾಲಕ ರುದ್ರೇಶ ಅಳ್ಳಿ ಅತಿಥಿ ಮತ್ತು ಮತ್ತು ಸಾಧಕರಿಗೆ ಸನ್ಮಾನ ಕಾರ್ಯ ನೆರವೇರಿಸಿದರು. ಡಾ. ಎಂ. ಬಿ ಒಂಟಿ ನಿರೂಪಿಸಿದರು. ಪ್ರೊ. ದಾನಮ್ಮ ಮಠದ ವಂದಿಸಿದರು.ನಂತರ ವಿದ್ಯಾರ್ಥಿಗಳಿಂದ ನಡೆದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಸಕರಾದಿಯಾಗಿ ಸಭಿಕರು ವೀಕ್ಷಿಸಿದರು.
- ಕರುನಾಡ ಕಂದ ಪತ್ರಿಕೆ



















