ಡಿಎಸ್ಪಿ ವಿರುದ್ಧ ಲೋಕಾಯುಕ್ತದಲ್ಲಿ ಕೇಸು ದಾಖಲು..!
ಶಿವಮೊಗ್ಗ: ನಗರದಲ್ಲಿ ರಿಕ್ರಿಯೆಷನ್ಸ್ ಕ್ಲಬ್ಗಳ ಹೆಸರಿನಲ್ಲಿ ಜೂಜು ಅಡ್ಡೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಅವುಗಳನ್ನು ನಿಯಂತ್ರಿಸಿ ನಾಗರೀಕರ ನೆಮ್ಮದಿಯ ಬದುಕಿಗೆ ಅನುಕೂಲ ಮಾಡಿಕೊಡಬೇಕಿದ್ದ ಪೊಲೀಸ್ ಇಲಾಖೆ ತಟಸ್ಥವಾಗಿದೆ.
ಈ ಬಗ್ಗೆ ಹಲವಾರು ಬಾರಿ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. ಅದೇ ರೀತಿ ಹಲವು ಸಂಘಟನೆಗಳವರು ಇಸ್ಪೀಟ್ ಕ್ಲಬ್ಗಳನ್ನು ಬಂದ್ ಮಾಡಿಸುವಂತೆ ಮನವಿಯನ್ನೂ ಸಲ್ಲಿಸುತ್ತಲೇ ಬಂದಿವೆ.
ಆದರೆ, ಕ್ಲಬ್ಗಳನ್ನು ಬಂದ್ ಮಾಡಿಸುವ ಬದಲು ಪೊಲೀಸ್ ಇಲಾಖೆಯೇ ಕ್ಲಬ್ಗಳಿಗೆ ಕಣ್ಗಾವಲಾಗಿ ಕೆಲಸ ಮಾಡುತ್ತಿದ್ದು, ಶಿವಮೊಗ್ಗ ‘ಎ’ ಉಪವಿಭಾಗದ ಡಿಎಸ್ಪಿ ಬಾಬು ಅಂಜನಪ್ಪ ನೇರವಾಗಿಯೇ ಈ ಕ್ಲಬ್ಗಳನ್ನು ನಡೆಸುತ್ತಿರುವವರಿಂದ ಲಕ್ಷಾಂತರ ರೂಪಾಯಿಗಳ ಮಾಮೂಲಿ ಪಡೆದು ಕ್ಲಬ್ ನಡೆಸಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಬಾಬು ಅಂಜನಪ್ಪ ವಿರುದ್ಧ ಲೋಕಾಯುಕ್ತರಲ್ಲಿ ಕೇಸು ದಾಖಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಚಿತ್ರಪ್ಪ ಯರಬಾಳ ಎಂಬುವವರು ಡಿ.23ರಂದು ಕರ್ನಾಟಕ ಲೋಕಾಯುಕ್ತರಲ್ಲಿ ಇಸ್ಪೀಟ್ ಕ್ಲಬ್ಗಳಿಂದ ಮಾಮೂಲಿ ಪಡೆದು ಭ್ರಷ್ಟಾಚಾರದಲ್ಲಿ ತೊಡಗಿರುವ ಶಿವಮೊಗ್ಗ ‘ಎ’ ಉಪವಿಭಾಗದ ಡಿಎಸ್ಪಿ ಬಾಬು ಅಂಜನಪ್ಪ ಅವರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕೇಸು ದಾಖಲಿಸಿದ್ದಾರೆ.
ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಶಿವಮೊಗ್ಗ ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಜುಗಾರಿ ಅಡ್ಡೆಗಳನ್ನು ಬಂದ್ ಮಾಡಿಸುವರೋ ಕಾದು ನೋಡಬೇಕು.
ವರದಿ: ಕೊಡಕ್ಕಲ್ ಶಿವಪ್ರಸಾದ್.



















