ಗೆಳೆಯರೇ,
ಇವತ್ತಿನ ಈ ಕಲುಷಿತ ಸಮಾಜದಲ್ಲಿ ವೃದ್ದಾಪ್ಯದಲ್ಲಿ ಅಜ್ಜ, ಅಜ್ಜಿ , ತಂದೆ , ತಾಯಿ, ತಮ್ಮ ಜನ್ಮ ಪೂರ್ತಿ ಮಕ್ಕಳ ಪಾಲನೆ, ಪೋಷಣೆ, ವಿದ್ಯೆ, ವಯಸ್ಸಿಗೆ ಬಂದಾಗ ಮಕ್ಕಳ ಮದುವೆ ಮಾಡಿಸಿ ಸಂಸಾರದ ಉದ್ದಾರಕ್ಕೆ ಶ್ರಮಿಸುವ ಅದೆಷ್ಟೋ ಕುಟುಂಬಗಳನ್ನು ನಾವೆಲ್ಲಾ ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಕೊನೆ ಕಾಲದಲ್ಲಿ ಇಂಥ ಮಾತಾ ಪಿತರನ್ನು ವೃದ್ಧಾಶ್ರಮದಲ್ಲಿ ಸೇರಿಸಿ ಮಕ್ಕಳು ದೇಶ , ವಿದೇಶಗಳಲ್ಲಿ ದೊಡ್ಡ , ದೊಡ್ಡ ನಗರಗಳಲ್ಲಿ ದುಡಿಯಲು ಹೋಗಿ, ತಮ್ಮನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು , ಜನ್ಮ ಕೊಟ್ಟು ಬೆಳೆಸಿದ ತಂದೆ ,ತಾಯಿಯನ್ನು ಮರೆತು ವೈಭವೀ ಜೀವನವನ್ನು ಸಾಗಿಸುವ ಅಸಂಖ್ಯಾತ ಕುಟುಂಬ ನಮ್ಮ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಇಷ್ಟು ಮಾತ್ರವಲ್ಲದೆ ಈ ಅಸಾಮಾನ್ಯ ಮಕ್ಕಳು, ತಮ್ಮ ತಂದೆ ತಾಯಿ ಮೃತರಾದಾಗ ಚಿತೆಗೆ ಬೆಂಕಿ ಕೊಡುವ ಮೊದಲು, ತಂದೆ ತಾಯಿ ಬರೆದ ಆಸ್ತಿಯ ಹಕ್ಕು, ಚಿನ್ನಾಭರಣ, ಬ್ಯಾಂಕ್ ನಲ್ಲಿರುವ ಠೇವಣಿ ಯಾರ ಹೆಸರಿಗೆ ಬರೆದಿದ್ದಾರೆ ಎಂದು ಖಚಿತ ಪಡಿಸಿದ ನಂತರ ಅಂತ್ಯ ಸಂಸ್ಕಾರ, ಉತ್ತರ ಕ್ರಿಯೆ ಜರುಗುವಂಥ ಕಾಲಘಟ್ಟವಿದು.
ಆದರೆ ಇಷ್ಟೆಲ್ಲಾ ಗೊಂದಲಮಯ ಸಮಾಜದಲ್ಲಿ ಒಂದು ಆಶಾಬೆಳಕು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿ ಬೆಟ್ಟು ಪ್ರದೇಶದಲ್ಲಿ ಮೂಡಿ ಬಂದಿದೆ.
ಸನ್ನಿವೇಶ : ಒಂದು ಆದರ್ಶ ಕುಟುಂಬದಲ್ಲಿ ಎಂಬತ್ತನಾಲ್ಕು ವಯಸ್ಸಿನ ಹಿರಿಯ ಗೃಹಣಿಯ ದೈವಾಧೀನ. ಮೃತರು ತಮ್ಮ ಪತಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದರು. ವಯೋ ಸಹಜ ಮೃತ್ಯು ಬಂದಿದ್ದರೂ ಶೋಕ ಸಹಜ. ವೃದ್ದಾಪ್ಯದಲ್ಲಿ ತಂದೆ , ತಾಯಿಯನ್ನು ಆಶ್ರಮ ಬಿಡುವ ಈ ಕಾಲ ಘಟ್ಟದಲ್ಲಿ ಒಬ್ಬನೇ ಮಗ, ತನ್ನ ಬೆಂಗಳೂರಿನ ವ್ಯವಹಾರಗಳನ್ನು ಬಿಟ್ಟು, ಕಳೆದ ಕೆಲ ವರ್ಷಗಳಿಂದ ಮಾತ, ಪಿತರ ಸೇವೆಗಾಗಿ ಸ್ವಂತ ಊರಲ್ಲೇ ನೆಲೆಸಿದ್ದರು. ತನ್ನ ತಾಯಿ ಮೃತ ಹೊಂದಿದಾಗ, ತನ್ನ ಕರ್ತವ್ಯ ಪೂರೈಸಲು ಕಟಿ ಬದ್ಧರಾಗಿದ್ದರು. ಮಾತೆಯ ಅಂತ್ಯಕ್ರಿಯೆಗೆ ಎಲ್ಲಾ ತಯಾರಿ ಮಾಡಿ, ಪರ ಊರಲ್ಲಿ ನೆಲೆಸಿರುವ ಸಹೋದರಿಯರು, ಭಾವಂದಿರು ಮತ್ತು ಮೊಮ್ಮಕ್ಕಳಿಗೆ ಅಂತಿಮ ದರ್ಶನ ಮಾಡುವ ಅವಕಾಶ ಕಲ್ಪಿಸಲು, ಶೀತಲ ಆಗರದಲ್ಲಿ ತಾಯಿಯ ದೇಹವನ್ನು ಇರಿಸಲಾಗಿತ್ತು. ಮಾರನೇ ದಿನ ಸಂಜೆ ಅಂತ್ಯಕ್ರಿಯೆ ಮಾಡಲಾಯಿತು.
ಮಾರನೇ ದಿನ ಉತ್ತರ ಕ್ರಿಯೆಯ ತಯಾರಿಯ ಬಗ್ಗೆ ಮನೆ ಮಂದಿ ಸಮಾಲೋಚನೆಯಲ್ಲಿ ತೊಡಗಿದರು, ಆಗ ಉತ್ತರ ಕ್ರಿಯೆ ಮಾಡಲು ನಾ ಮುಂದು , ತಾ ಮುಂದು ಎಂಬಂತೆ ಮೊಮ್ಮಕ್ಕಳು ತಮ್ಮ ದಾವೆಯನ್ನು ಮಾವನಲ್ಲಿಟ್ಟು, ಅಜ್ಜಿಯ ಉತ್ತರ ಕ್ರಿಯೆಯ ಜವಾಬ್ದಾರಿ ತಾವು ವಹಿಸುವುದಾಗಿ ದುಂಬಾಲು ಬಿದ್ದರು, ಸಾಮಾನ್ಯವಾಗಿ ಈ ಜವಾಬ್ದಾರಿ ಮಕ್ಕಳದ್ದಾಗಿದೆ, ಆದರೂ ಮೊಮ್ಮಕ್ಕಳು ಯಾವುದೇ ಫಲಾಪಕ್ಷೆ ಇಲ್ಲದೆ ಅಜ್ಜಿಯ ಉತ್ತರ ಕ್ರಿಯೆಯ ಸಂಪೂರ್ಣ ಖರ್ಚು ವೆಚ್ಚವನ್ನು ತಾವು ಭರಿಸುವುದಾಗಿ ಹೇಳಿ ತಮ್ಮ ಹಿರಿಮೆ ತೋರಿದರು.
ಇನ್ನು ಅಜ್ಜಿಯ ಚಿನ್ನಾಭರಣ, ಬ್ಯಾಂಕ್ ಠೇವಣಿ ಬಗ್ಗೆ ಚರ್ಚಿಸಲಾಗಿ, ಅದನ್ನು ಸಮವಾಗಿ ಹಂಚಿಕೊಳ್ಳುವ ಬದಲು ಎಲ್ಲಾ ಹೆಣ್ಣು ಮಕ್ಕಳು, ಸಹೋದರ ಮತ್ತು ಅವರ ಪತ್ನಿಗೆ ಹಸ್ತಾಂತರಿಸುವ ನಿರ್ಧಾರಕ್ಕೆ ಬಂದಿದ್ದರು, ಕಾರಣ ತಾಯಿಯನ್ನು ವೃದ್ದಾಪ್ಯದಲ್ಲಿ ಚೆನ್ನಾಗಿ ಆರೈಕೆ ಮಾಡಿದ್ದು ಇದೇ ಮಗ ಮತ್ತು ಸೊಸೆ, ಆದುದರಿಂದ ಅದರ ಫಲ ಅವರಿಗೇ ಸೇರಬೇಕು ಎಂಬುದು ಎಲ್ಲರ ಅಭಿಪ್ರಾಯ. ಆದರೆ ಈ ಮಗ ಮತ್ತು ಸೊಸೆ ಎಷ್ಟು ಉದಾರಿ ಎಂದರೆ, ಆ ಎಲ್ಲ ಬ್ಯಾಂಕ್ ಠೇವಣಿ ಮತ್ತು ಆಭರಣಗಳು ತನ್ನ ಸಹೋದರಿಯ ಮಗಳಿಗೆ ಸಂದಬೇಕು, ಮುಂದೆ ಆ ಹೆಣ್ಣು ಮಗಳ ವಿವಾಹಕ್ಕೆ ಈ ಸಂಪತ್ತು ಉಪಯೋಗ ಆಗಬೇಕೆಂಬ ಸದ್ವಿಚಾರದಂತೆ, ಯಾವುದೇ ಕಲಹ ವಿಲ್ಲದೆ, ನನಗೆ ಬೇಡ ನಿನಗೆ, ನನಗೂ ಬೇಡ , ನಿನಗೂ ಬೇಡ ಮೊಮ್ಮಗಳಿಗೆ ಎಂಬ ನಿರ್ಧಾರದೊಂದಿಗೆ ಖುಷಿ ಖುಷಿಯಾಗಿ ಹಿರಿಯರ ಆಸ್ತಿ , ಸಂಪತ್ತಿನ ವಿಲೇವಾರಿ ಮಾಡಿದುದು ನಮ್ಮ ಈಗಿನ ಕಲುಷಿತ ಸಮಾಜಕ್ಕೊಂದು ಆಶಾಕಿರಣ.
ನಮ್ಮ ಜಿಲ್ಲೆ , ರಾಜ್ಯ ಮತ್ತು ದೇಶಕ್ಕೆ ಮಾದರಿ.



















