ಬಳ್ಳಾರಿ / ಕಂಪ್ಲಿ : ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀ ಮುನಿಸುವ್ರತ ಸ್ವಾಮಿ ಮಂದಿರದಿಂದ ಆದೋನಿ ಪೆದ್ದತುಂಭಳಂ ಪಾರ್ಶ್ವನಾಥ ತೀರ್ಥಕ್ಷೇತ್ರದವರೆಗೆ ಜೈನರ ಪಾದಯಾತ್ರೆ ಮಂಗಳವಾರ ವಿಜೃಂಭಣೆಯಿಂದ ಆರಂಭಗೊಂಡಿತು.
ಪಾದಯಾತ್ರೆಯಲ್ಲಿ ಬೆಳ್ಳಿರಥದಲ್ಲಿ ಆದಿತೀರ್ಥಂಕರ ಪಾರ್ಶ್ವನಾಥ ಸ್ವಾಮಿ ಪ್ರತಿಮೆ ಮೆರವಣಿಗೆಯಾಗಿ ಸಾಗಿತು. ನಂದಿಕೋಲು, ಸಮಾಳ, ಕುದುರೆ, ತಾಸಾರಾಂಡೋಲ್, ರಾಜಸ್ಥಾನಿ ಬ್ಯಾಂಡ್ ಕಲಾವಿದರು ಮೆರವಣಿಗೆಗೆ ವೈಭವ ನೀಡಿದರು.
ಜೈನ ಸಂತರಾದ ಮನೀಷಪ್ರಭಸಾಗರಶ್ರೀ, ಮತೀಷಪ್ರಭಸಾಗರಶ್ರೀ, ಪಾರ್ಶ್ವನಾಥ ತೀರ್ಥಪ್ರದೀಪಕ, ಸುಲೋಚನಾಶ್ರೀ, ಸುಲಕ್ಷಣಾಶ್ರೀ ಸೇರಿದಂತೆ ಒಟ್ಟು 28 ಮಂದಿ ಜೈನ ಸಂತರು ಪಾಲ್ಗೊಂಡಿದ್ದರು.ಪಾದಯಾತ್ರಿಕರಿಗಾಗಿ ಇಟಗಿ ಬಳಿಯಲ್ಲೇ ಧರ್ಮ ಜಾಗೃತಿ ಸಭೆ ಆಯೋಜಿಸಲಾಗಿತ್ತು.
ಈ ವೇಳೆ ಆಶೀರ್ವಚನ ನೀಡಿದ ಜೈನ ಸಂತ ಮನೀಷಪ್ರಭಸಾಗರಶ್ರೀ ಅವರು, ಜೀವನದಲ್ಲಿ ಹಣ, ಅಧಿಕಾರ ಮತ್ತು ಐಶಾರಾಮಿಗಿಂತ ಸತ್ಯ, ಶಾಂತಿ, ಅಹಿಂಸೆ ಹಾಗೂ ಪರೋಪಕಾರವೇ ಶ್ರೇಷ್ಠ ಮೌಲ್ಯಗಳು ಎಂದು ಹೇಳಿದರು. ದೇವರ ಭಜನೆ, ಜಪ ಮತ್ತು ಭಕ್ತಿ ಗೀತೆಗಳ ಗಾಯನ ನಡೆಯಿತು.
ಜೈನ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೆಚಾ, ಪದಾಧಿಕಾರಿಗಳಾದ ಪಾರಸ್ಮಲ್ ಹುಂಡಿಯಾ, ಶಾಂತಿಲಾಲ್ ಬಾಲರ್, ಶಾಂತಿಲಾಲ್ ಸಿಂಘಿ, ಫತೇಕುಮಾರ್ ಭಾಫ್ನಾ ಸೇರಿದಂತೆ ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗುಜರಾತ್, ರಾಜಸ್ಥಾನ್, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಸುಮಾರು 350 ಮಂದಿ ಜೈನ ಪಾದಯಾತ್ರಿಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















