ಮೂಡಣದ ಮನೆಯೆದುರು ಕುಂಕುಮದ ರಂಗೋಲಿ
ನೇಸರನ ಮೊಗದೊಳಗೆ ಶಾಂತ ಭಾವ
ಜಡತನದ ಜಾಡ್ಯವದೋ ಕಳಚುತಿದೆ ಕರಗುತಿದೆ
ದಿನಕರನ ತಂಪುನಗೆ ನಿತ್ಯೋತ್ಸವ II೧II
ಕತ್ತಲೆಯ ಕಸಗುಡಿಸಿ ಮುನ್ನಡೆದ ದಿನಮಣಿಯು
ಜೀವಸಂಕುಲ ಬಾಳ ಕೊಳಲೂದಿದ
ಅರಿವು-ಆನಂದಗಳ ಕಿರಣಗಳ ಹೊಳೆ ಹರಿಸಿ
ಪಡುವಣಕೆ ಪಯಣಿಸಲು ರಥವೇರಿದ II೨II
ಬಾನಿನಲಿ ಭಾಸ್ಕರನ…ನಿತ್ಯ ಸಾವಿರ ಲೀಲೆ
ಭುವಿಯೊಳಗೆ ಹೊಸತನದ ರಸಸಿಂಚನಾ
ಚಲಿಸುತಿದೆ ಈ ಬದುಕು ಕತ್ತಲೆಯ ಗಡಿದಾಟಿ
ಕೆಲವೆಡೆಗೆ ರಣಬಿಸಿಲು ಆರ್ತ ಗಾನ II೩II
ಕೈಮುಗಿದು ಶರಣಾದೆ..ಶಕ್ತಿಸಂಚಯದೇವ
ಉದಯ- ಅಸ್ತದಿ ಮನದಿ ನೂರು ಭಾವ
ಹೊಂಗಿರಣ – ಸುಡು ಕಿರಣ ಅನುಭವವು ನೂರಾರು
ನಿನ್ನಿಂದಲೇ ಉಳಿವು ಸಕಲ ಜೀವ II೪II
ದೇವನೆಲ್ಲಿಹನೆಂದು ನಾಸ್ತಿಕರು ಕೇಳಿದರೆ
ಪ್ರಭು ಭಾಸ್ಕರನ ತೋರಿ ಕೈ ಮುಗಿವೆನು
ಮುಚ್ಚಿರುವ ಕಂಗಳಿಗೆ ಜಗವೇ ಕತ್ತಲೆ ಕೂಪ
ಕಣ್ದೆರೆದು ನೋಡಿರೋ ಕರೆ ಕೊಡುವೆನು II೫II
ನೇಸರನ ಕಾಯಕದಿ ಬೇಸರವು ಇನಿತಿಲ್ಲ
ಸರ್ವರಿಗೂ ಸಮಬಾಳು ಸಾರುವವನು
ಸರ್ವರಿಗೂ ಸಮಕೂಳು ಪಡೆಯಲಿಕೆ ಚೈತನ್ಯ
ಮಳೆ ಸುರಿಸಿ ಪಡುವಣದಿ ಮರೆಯಾದನು
(ಬಾಳ ಪ್ರೀತಿಯ ಕಲಿಸಿ ಗುರುವಾದನು) II೬II
- ರಮೇಶ ಹೆಗಡೆ ಕೆರೆಕೋಣ
ಶಿಕ್ಷಕರು ತೆರಕನಹಳ್ಳಿ (ಶಿರಸಿ).




















