ಬಾಗಲಕೋಟೆ – ಮುಧೋಳ : ಶಿವನು ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿ ದಿನದಂದು ನಾಡಿನಾದ್ಯಂತ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದಲ್ಲಿ ಶಿವಾವತಾರಿ ಸಿದ್ಧ ಪುರುಷ, ಪರಮಾನಂದ ದೇವರ ಜಾತ್ರೆ-ಮಹಾಶಿವರಾತ್ರಿ ಮಹಾ ಮಹೋತ್ಸವವು ಇದೆ ರವಿವಾರ ದಿ .15 ರಿಂದ ಗುರುವಾರ 19 ರ ವರೆಗೆ 5 ದಿನ ವಿಜ್ರಂಭಣೆಯಿಂದ ಜರುಗಲಿದೆ.
ರವಿವಾರ ದಿ. 15ರಂದು ಕತೃ೯ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಶಿವರಾತ್ರಿ, ಶಿವಯೋಗ ಆಚರಣೆ ಜರುಗುವುದು.
ಇಲ್ಲಿಯ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಸಿದ್ಧಾರೂಢರ ಪಾರಾಯಣ, ಸಿದ್ಧಾರೂಢರ ಕಥಾಮೃತ, ಓಂ ನಮಃ ಶಿವಾಯ ಮಹಾಮಂತ್ರ ಪಠಣ, ಭಜನೆ ಇಡೀ ದಿನ ಜರುಗುವುದು. ಸೋಮವಾರ ದಿ. 16ರಂದು ಶ್ರೀ ಪರಮಾನಂದನ ಆಲಯದಲ್ಲಿ ಮುಂಜಾನೆ 7 ಗಂಟೆಗೆ ಕರಿ ಕಟ್ಟುವುದು. ಅಮಾವಾಸ್ಯೆಯ ದಿನ ಮಹಾ ನೈವೇದ್ಯ ನಡೆಯುವದು. ಸಂಜೆಗೆ ದೇವರುಗಳನ್ನು ಬರಮಾಡಿಕೊಳ್ಳುವದು. ನಂತರ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳವಾರ ದಿ .17 ರಂದು ದೇವರ ಶುಭ ನುಡಿ [ಭವಿಷ್ಯ ವಾಣಿ ] ಟಗರಿನ ಕಾಳಗ, ತೆರೆಬಂಡಿ ಸ್ಪರ್ಧೆಗಳು ನಡೆಯುವವು. ಸಂಜೆಗೆ ಸಹಸ್ರ ದೀಪೋತ್ಸವ, ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯುವದು ಬುಧವಾರ ದಿ.18ರಂದು ಪಲ್ಲಕ್ಕಿ ಉತ್ಸವ, ಮದ್ದು ಸುಡುವುದು ರಾತ್ರಿ 10.30ಕ್ಕೆ “ಮಾರಿ ಕಣ್ಣು ಹೋರಿ ಮ್ಯಾಲೆ ” ಸಂಗ್ಯಾ -ಬಾಳ್ಯಾ, ಬಡವ ಸಾಕಿದ ಬಹದ್ದೂರ್ ಹುಲಿ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಗುರುವಾರ ದಿ.19 ರಂದು ಉಡಿ ತುಂಬುವ ಕಾರ್ಯಕ್ರಮ ನಡೆಯುವುದು.
ಸಂಜೆ 4 ಪರಸ್ಥಳದಿಂದ ಬಂದ ದೇವರುಗಳನ್ನು ಬೀಳ್ಕೊಡುವುದರೊಂದಿಗೆ ಮಹಾಶಿವರಾತ್ರಿ ಸಂಪನ್ನಗೊಳ್ಳುವುದು.
ಪ್ರತಿ ದಿನ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಬೆಳಿಗ್ಗೆ ಧಾರ್ಮಿಕ ಚಿಂತನ ಕಾರ್ಯಕ್ರಮ ಜರುಗುವುದು ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಎಲ್ ಶ್ರೀನಿವಾಸ ಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















