
ಬಳ್ಳಾರಿ / ಕಂಪ್ಲಿ : ತಾಲ್ಲೂಕಿನಾದ್ಯಂತ ಹಿಂದೂಗಳ ಪವಿತ್ರ ಹಬ್ಬವಾಗಿರುವ ಮಹಾಶಿವರಾತ್ರಿಯನ್ನು ಸಡಗರ,ಸಂಭ್ರಮ,ಶ್ರದ್ದೆ,ಭಕ್ತಿಗಳಿಂದ ಆಚರಿಸಿದರು. ಪಟ್ಟಣದ ಕೋಟೆ ಪ್ರದೇಶದ ಹತ್ತಿರದ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.
ಪಟ್ಟಣದ ಕೋಟೆ ಪ್ರದೇಶದ ಐತಿಹಾಸಿಕ ಪಂಪಾಪತಿ, ಮಡ್ಡಿಕಟ್ಟೆಯ ಉಳ್ಳಿ ಬಸಪ್ಪ, ದೇವಾಂಗಪೇಟೆಯ ರಾಮಲಿಂಗ ಚೌಡೇಶ್ವರಿ, ಜಡೇಶಂಕರಲಿಂಗ, ನೀಲಕಂಠೇಶ್ವರ, ಶ್ರೀಪೇಟೆ ಬಸವೇಶ್ವರ, ಸನಾಪೇಟೆಯ ಮಲ್ಲಿಕಾರ್ಜುನ ಸ್ವಾಮಿ, ಸಕ್ಕರೆ ಕಾರ್ಖಾನೆಯ ಮುಕ್ತಿನಾಥೇಶ್ವರ, ಕೊಟ್ಟಾಲ್ ಗ್ರಾಮದ ಕಾಶೀವಿಶ್ವನಾಥ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಈಶ್ವರ, ಪಂಪಾಪತಿ, ರಾಮಲಿಂಗೇಶ್ವರ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಸಂಜೆ ಶಿವಲಿಂಗಗಳನ್ನು ಚಿನ್ನ ಹಾಗೂ ಬೆಳ್ಳಿಯ ಆಭರಣಗಳಿಂದ ಬಿಲ್ವಪತ್ರೆ ಹಾರಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಉತ್ತರಾಣಿ ಕಡ್ಡಿಗಳನ್ನು ಬೆಳಗಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ವಿವಿಧ ದೇವಸ್ಥಾನಗಳಲ್ಲಿ ರಾತ್ರಿಯಿಡಿ ಭಜನಾ ಕಾರ್ಯಕ್ರಮ ನಡೆಸಿದರು.
ಶಿವನ ದೇವಸ್ಥಾನಗಳನ್ನು ವರ್ಣರಂಜಿಯ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ದೇವಸ್ಥಾನಕ್ಕೆ ಆಗಮಿಸಿದ ಸಕಲ ಸದ್ಬಕ್ತರಿಗೆ ಸಕ್ಕರೆ ಕಾರ್ಖಾನೆ ಮುಕ್ತಿನಾಥೇಶ್ವರ ದೇವಸ್ಥಾನದಲ್ಲಿ ಬೆಲ್ಲದ ಪಾನಕ ಮತ್ತು ಮಂಡಕ್ಕಿ ವಗ್ಗರಣೆ, ಮಿರ್ಚಿ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















