ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಂಪಿಯಲ್ಲಿ ರಾಮಾಯಣ ಪುಸ್ತಕ ಬಿಡುಗಡೆ

ಭಾರತದಲ್ಲಿಯೇ ಪ್ರಮುಖವಾದ ಕಾಶಿ ಕ್ಷೇತ್ರ ಮುಕ್ತಿ ಕ್ಷೇತ್ರವಾಗಿದ್ದು ಭಾರತವನ್ನಾಳಿದ ಎರಡು ಪ್ರಮುಖ ವಂಶಗಳಾದ ಸೂರ್ಯವಂಶ ಮತ್ತು ಚಂದ್ರ ವಂಶದವರು ಅಯೋಧ್ಯ ಮತ್ತು ಮಥುರಾವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದರು ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ನುಡಿದರು. ಅವರು ಇತ್ತೀಚಿಗೆ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ, ಕವಿಪ್ರನಿನಿ ನಿವೃತ್ತ ಲೆಕ್ಕನಿಯಂತ್ರಣಾಧಿಕಾರಿ ಬಿ. ಸತ್ಯನಾರಾಯಣ ಅವರ ಹಂಪಿಯಲ್ಲಿ ರಾಮಾಯಣ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಮುಂದುವರಿದು ಕ್ರಿಸ್ತಶಕ ಒಂದು -ಎರಡನೇ ಶತಮಾನದಲ್ಲೇ ಕನಿಷ್ಕನ ತಮ್ಮನ ಆಡಳಿತದಲ್ಲಿ ಶ್ರೀರಾಮನ ಪ್ರತಿಮೆ ಇರುವ ನಾಣ್ಯ ಇತ್ತಾದರೂ, ರಾಮ ಮತ್ತು ಕೃಷ್ಣರ ಪೂಜೆಯ ಕುರಿತು 15 ಮತ್ತು 16ನೇ ಶತಮಾನಂದ ಈಚೆಗೆ ನಾವು ಕಾಣಬಹುದಾಗಿದೆ; ಶ್ರೀ ರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಇಟ್ಟು ಪೂಜೆ ಮಾಡಿರುವುದನ್ನು ನಾವು ಇತಿಹಾಸದಲ್ಲಿ ಕಂಡಿರದಿದ್ದರೂ ಸಮರ್ಥರಾಮದಾಸರ, ತ್ಯಾಗರಾಜರ ಕೀರ್ತನೆ ಹಾಡುಗಳಿಂದ ಪ್ರಭಾವಿತರಾಗಿ ಶ್ರೀರಾಮನ, ಶ್ರೀ ಕೃಷ್ಣನ ಮೂರ್ತಿಗಳ ಪೂಜೆ ಹಾಗೂ ಗುಡಿಗಳನ್ನು ಕಂಡಿದ್ದೇವೆ ಎಂದು ಹೇಳಿದರು. ವಿಜಯನಗರ ಸಾಮ್ರಾಜ್ಯದ ನಂತರ ಶ್ರೀರಾಮನ ಮೂರ್ತಿ ಪೂಜೆ ಮುಂತಾದವು ವ್ಯಾಪಕವಾದವು ಎಂದು ಹೇಳಿ, ಭಾರತದಲ್ಲಿ ಶ್ರೀ ಕೃಷ್ಣನ ವಂಶದವರು ಇದ್ದಾರೆ ಎಂದು ಬಹಳ ಜನ ಹೇಳಿಕೊಂಡು ಬರುತ್ತಿದ್ದರೂ, ನಾವು ಶ್ರೀರಾಮನ ವಂಶಜರು ಎಂದು ಯಾರು ಹೇಳುತ್ತಾ ಮುಂದುವರಿಯದಿರುವುದನ್ನು ನಾವು ಕಾಣುತ್ತೇವೆ. ವಿಜಯನಗರದ ಹಜಾರಾರಾಮರ ದೇವಸ್ಥಾನದಲ್ಲಿ ಇರುವ ಶಿಲ್ಪಗಳನ್ನು ಆಸಕ್ತಿಯಿಂದ ಅಭ್ಯಾಸ ಮಾಡಿ, ಅವುಗಳ ಫೋಟೋಗಳನ್ನು ತೆಗೆದು ಅಂತಹ ಜ್ಞಾನವನ್ನು ನಮ್ಮೆಲ್ಲರಿಗೂ ಬಿ. ಸತ್ಯನಾರಾಯಣ ಅವರ ಹಂಪಿಯಲ್ಲಿ ರಾಮಾಯಣ ಪುಸ್ತಕದಿಂದ ವಿವರವಾಗಿ ಸಿಗುವಂತಾಗಿದೆ, ಇದು ದಾಖಲೆಯಾಗಬಲ್ಲ ಅತ್ಯುತ್ತಮ ಕೆಲಸವೆಂದು ಶ್ಲಾಘಿಸಿದರು. ಹಂಪಿಯಲ್ಲಿ ಋಶ್ಯಶೃಂಗನ ಕಥೆ ಸಾರುವ ಗುಡಿ ಇದೆ, ಅದು ಕೂಡ ಅಭ್ಯಾಸ ಯೋಗ್ಯವಾಗಿದೆ ಎಂದು ಹೇಳಿದರು. ಇತ್ತೀಚೆಗೆ ಟೆಕ್ನಾಲಜಿ ವೃದ್ಧಿ ಆಗಿರುವುದರಿಂದ ಇತಿಹಾಸ ಪ್ರಸಿದ್ಧವಾದ ಇಂತಹ ಸಂಗತಿಗಳ ಕುರಿತ ಪುಸ್ತಕಗಳು ಬರುತ್ತಿರುವುದು ಸಂತೋಷದ ವಿಷಯ ಎಂದು ಹೇಳಿ, ಬಿ ಸತ್ಯನಾರಾಯಣ ಅವರ ಪರಿಶ್ರಮವನ್ನು ಶ್ಲಾಘಿಸಿ, ಪುಸ್ತಕ ಕೊಂಡು ಓದುವಂತೆ ವಿನಂತಿಸಿದರು.
ಇದಕ್ಕೂ ಮೊದಲು ಹಂಪಿಯಲ್ಲಿ ರಾಮಾಯಣ ಪುಸ್ತಕದ ಅವಲೋಕನ ಮಾಡಿದ ವಿದ್ವಾಂಸ ಡಾ. ಚಿಂತಾಮಣಿ ಕೊಡ್ಲೆಕೆರೆಯವರು ಬಿ ಸತ್ಯನಾರಾಯಣ ಅವರು ವಿದ್ಯಾರ್ಥಿ ಇದ್ದಾಗ ಸ್ವಯಂ ಸೇವೆಗೆಂದು ಹಂಪಿ ಉತ್ಸವಕ್ಕೆ ಬಂದಾಗ ಹಜಾರಾರಾಮರ ದೇವಾಲಯದಲ್ಲಿರುವ ಶಿಲ್ಪಗಳನ್ನು ಆಶ್ಚರ್ಯದಿಂದ ನೋಡಿ, ಕುತೂಹಲದಿಂದ ಗಮನಿಸಿ ಇವುಗಳ ಕುರಿತು ಹೆಚ್ಚು ತಿಳಿಯಬೇಕೆಂದು ಚಿಕ್ಕವರಿದ್ದಾಗಲೇ ಯೋಚಿಸಿ, ತಮ್ಮ ನಿವೃತ್ತಿಯ ನಂತರ ಈ ಎಲ್ಲ ಶಿಲ್ಪ ಕಲೆಗಳ ಫೋಟೋಗಳನ್ನು ತೆಗೆದು ವಿಶ್ಲೇಷಿಸುವ ಈ ಸಾಹಸದಲ್ಲಿ ತೊಡಗಿಕೊಂಡಿರುವುದು ವಿಶೇಷ ಎಂದು ಹೇಳಿದರು. ಅವರ ಹಲವು ವರ್ಷಗಳ ಪ್ರಯತ್ನದಿಂದಲೂ ಅವರಿಗೆ, ಅವರಿಷ್ಟದಂತೆ ಪುಸ್ತಕ ಸಿದ್ಧಪಡಿಸಲು ಸಾಧ್ಯವಾಗದಿರುವುದನ್ನು ಗಮನಿಸಿ, ಅವರ ಮಗನು ಉತ್ತಮ ಡಿಜಿಟಲ್ ಕ್ಯಾಮೆರಾ ಒದಗಿಸಿ ತಂದೆಯವರ ಸಾಹಸಕ್ಕೆ ಕೈಜೋಡಿಸಿದ್ದಾರೆ ಎಂದು ಕೊಂಡಾಡಿದರು. ಮೂಲತಃ ಸಾಹಿತಿ ಅಲ್ಲದಿದ್ದರೂ ಎಲ್ಲರ ಸಹಕಾರ ಪಡೆದು ಶ್ರೀರಾಮನ ಪ್ರೇರಣೆಯಿಂದ ಹಂಪಿಯಲ್ಲಿರುವ ಹಜಾರಾರಾಮರ ದೇವಸ್ಥಾನದಲ್ಲಿ ಶಿಲ್ಪ ಚಿತ್ರಗಳನ್ನೆಲ್ಲಾ ಉತ್ತಮವಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಅವುಗಳನ್ನು ಸರಿಯಾಗಿ ಹೊಂದಿಸಿ, ಅವಕ್ಕೆ ವಿವರಣೆ ನೀಡಿ ಇಂತಹ ಒಂದು ಅದ್ಭುತ ಪುಸ್ತಕ ಹೊರತಂದಿರುವುದು ಆಶ್ಚರ್ಯವೆನಿಸುತ್ತಿದೆ. ತುಂಬು ಜೀವನ ಅಂದರೇನೇ ರಾಮಾಯಣ ಎನ್ನುವುದನ್ನು ಈ ಕುಟುಂಬ ಸಾಬೀತು ಮಾಡಿದೆ ಎಂದು ಹೇಳಿದರು. ಸರಯೂ ನದಿ ಸಜ್ಜನರ ಮನಸ್ಸಿನ ಹಾಗೆ, ರಾಮಾಯಣ ಭಾವನಾತ್ಮಕವಾಗಿ ನಮ್ಮೆಲ್ಲರ ಜೀವನದಲ್ಲಿ ನಿತ್ಯ ಸತ್ಯವಾಗಿ ಹಾಸು ಹೊಕ್ಕಾಗಿ ಕಾಣಿಸುತ್ತಿದೆ ಎಂದು ನುಡಿದರು.
ಯು ಆರ್ ಅನಂತಮೂರ್ತಿ ಅವರು ಹೇಳಿದಂತೆ ನಮ್ಮ ದೇಶದಲ್ಲಿ ರಾಮಾಯಣ ಅಂದರೇನೇ ಒಂದು ಭಾಷೆ; ಭಾರತೀಯರಾದ ಯಾರಿಗೂ ರಾಮನನ್ನು ಹೊಸದಾಗಿ ಪರಿಚಯಿಸುವುದೇ ಬೇಡ; ಪ್ರತಿಯೊಬ್ಬರಲ್ಲೂ ರಾಮನಿದ್ದಾನೆ ಎಂದು ಮಾರ್ಮಿಕವಾಗಿ ನುಡಿದರು.
ಈ ಪುಸ್ತಕದಲ್ಲಿ ಓದುವುದಕ್ಕಿಂತ ನೋಡುವುದರಲ್ಲೇ ಹೆಚ್ಚು ಪ್ರಾಮುಖ್ಯತೆ ಇದೆ, ಎಲ್ಲರೂ ಪುಸ್ತಕ ಕೊಂಡು ಓದಿ ಎಂದು ಸಲಹೆ ನೀಡಿದರು.
ಪುಸ್ತಕವನ್ನು ರಚಿಸಿದ ಬಿ ಸತ್ಯನಾರಾಯಣ ಅವರು ಪುಸ್ತಕ ಸಿದ್ಧಗೊಳ್ಳುವಲ್ಲಿ ಸಹಕರಿಸಿದ ಸರ್ವರನ್ನೂ ಸ್ಮರಿಸಿದರು.
ಇದೇ ಸಂದರ್ಭದಲ್ಲಿ,
ಕಥೆಗಾರ ಕಾದಂಬರಿಕಾರ ರಾಜಶೇಖರ ಜೋಗಿನ್ಮನೆ ಅವರ ಕೇಳು ಧನಂಜಯ.. ಕಾದಂಬರಿಯ ಸಂವಾದದಲ್ಲಿ ಖ್ಯಾತ ವಿಮರ್ಶಕರುಗಳಾದ ಹೆಚ್ ದಂಡಪ್ಪ, ಕೆ ಸತ್ಯನಾರಾಯಣ, ಶರತ್ ಭಟ್ ಸೇರಾಜೆ, ಸಮನ್ವಿತ ಪ್ರಕಾಶನದ ರಾಧಾಕೃಷ್ಣ ಭಾಗವಹಿಸಿದ್ದರು. ಕಾದಂಬರಿಯ ಕುರಿತು ಮಾತನಾಡುತ್ತಾ ಹೆಚ್. ದಂಡಪ್ಪ ಅವರು ಮನುಷ್ಯನ ಸಂಕೀರ್ಣತೆಯನ್ನು ಈ ಕಾದಂಬರಿಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ, ಅವರು ಪತ್ರಕರ್ತರೂ ಆಗಿರುವುದರಿಂದ ಹಲವಾರು ವಿಷಯಗಳನ್ನು ಸಾಂಕೇತಿಕವಾಗಿ ಚಿಕ್ಕದಾಗಿ ತಿಳಿಸಿದ್ದಾರೆ, ಹಲವಾರು ಪಾತ್ರಗಳು ಕಾದಂಬರಿಯ ಆಕೃತಿಯನ್ನು ರೂಪಿಸಿವೆ, ಇದು ಮನುಕುಲದ ಕಥನ, ಇದರಲ್ಲಿ ಪುರಾಣ ಕಥೆಯೂ ಇದೆ, ಚರಿತ್ರೆಯ ಭಾಗವೂ ಇದೆ ಎಂದು ಕಾದಂಬರಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಮುಂದುವರಿದು, ಅಂದಿನ ಬದುಕು ಹೇಗಿತ್ತು? ನಂಬಿಕೆಗಳು ಹೇಗಿದ್ದವು? ಎಂಬುದನ್ನು ಸಾಂಕೇತಿಕವಾಗಿ ತಿಳಿಸಿರುವುದು ಈ ಕಾದಂಬರಿಯ ವೈಶಿಷ್ಠ್ಯ.
ಸಾಹಿತ್ಯ ಜ್ಞಾನವನ್ನೂ, ಆನಂದವನ್ನೂ ಕೊಡುವಂತಹದು. ಜೀವನಾನುಭವವನ್ನು ರಾಜಶೇಖರ್ ಜೋಗಿನ್ಮನೆ ಅವರು ಈ ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ ಎಂದು ಹೇಳಿದರು.
ಇನ್ನೊಬ್ಬ ಶ್ರೇಷ್ಠ ವಿಮರ್ಶಕ ಕೆ. ಸತ್ಯನಾರಾಯಣ ಅವರು ಮಾತನಾಡಿ, ಕಾದಂಬರಿ ಸಣ್ಣ ಕಥೆ ಪರಂಪರೆ ಕುರಿತು ತಿಳಿಸುತ್ತಾ, ಕೇಳು ಧನಂಜಯ ಕಾದಂಬರಿ, ಇರುವ ಕಥೆಯೊಂದು ಇರದ ಕಥೆಯೊಂದಿಗೆ ಹೇಗೆ ಬೆರೆತು ಕಥಾನಕವಾಗಿದೆ? ಅದರ ಸ್ವರೂಪವೇನು? ಎಂಬುದನ್ನು ವಿವರವಾಗಿ ತಿಳಿಸಿದರು.
ಸಂವಾದದಲ್ಲಿ ಭಾಗವಹಿಸಿದ ಶರತ್ ಭಟ್ ಸೇರಾಜೆಯವರು ಕಾದಂಬರಿಯ ಸ್ಥೂಲ ಸ್ವರೂಪವನ್ನು ಪುಟ್ಟ ಪುಟ್ಟ ಕಥೆಗಳ ಮೂಲಕ, ಮನಸ್ಸನ್ನು ತಲುಪುವಂತೆ ಕಾದಂಬರಿಯ ವೈಶಿಷ್ಟ್ಯತೆಯನ್ನು ತಿಳಿಸಿಕೊಟ್ಟರು.
ಕಾಲಗಳು ಬದಲಾದಂತೆ ಜೀವನ ಕ್ರಮವೂ ಬದಲಾಗುತ್ತದೆ, ನುಡಿಗಟ್ಟು, ಗಾದೆ ಮಾತು, ಸ್ವಾರಸ್ಯಕರವಾದ ಹೋಲಿಕೆ ಬದಲಾಗುವುದನ್ನು ಕಾದಂಬರಿ ತೋರಿಸಿದೆ ಎಂದರು.
ಆ ಕಾಲದಲ್ಲಿ ಘಟಿಸಿದ ಘಟನೆಗಳು ಏನು? ಹೇಗೆ ಎಂಬುದು ಈ ಕಾದಂಬರಿಯಲ್ಲಿ ಸೂಕ್ಷ್ಮವಾಗಿ ಬಂದಿದೆ ಎಂದು ಹೇಳಿದರು.
ಜೀವನದಲ್ಲಿ ಆಗಬೇಕಾಗಿದ್ದು ಆಗೆ ಆಗುತ್ತದೆ, ವಿಧಿಯಾಟ ಯಾರನ್ನೂ ಬಿಡದು, ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸುತ್ತಾ ಈ ಕಾದಂಬರಿಯ ಎಲ್ಲಾ ಪಾತ್ರಗಳು ಮುಂದುವರಿದಿದೆ ಎಂದು ಹೇಳಿದರು.
ಕಾದಂಬರಿಯ ಕರ್ತೃ ರಾಜಶೇಖರ ಜೋಗಿನ್ಮನೆ ಅವರು ಕೆಲವೊಂದು ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಿದರು. ಇದೇ ಸಂದರ್ಭದಲ್ಲಿ ನೃತ್ಯ ನಾಟಕ ಪ್ರಸ್ತುತ ಪಡಿಸಿದ ವಿದ್ಯಾಶ್ರೀ ಹೆಗಡೆ ಅವರನ್ನು ಗೌರವಿಸಲಾಯಿತು.
ಅಣಕಟ್ಟು ಮಧುಸೂಧನ ರಾವ್, ವಿಶಾಲಾಕ್ಷಿ ಶರ್ಮ ಅವರು ರಚಿಸಿದ ಬೇಡ್ತಿ ಬಿಡೆವು ಪರಿಸರ ಗೀತೆಯನ್ನು ಹಾಡಿ, ಸ್ವಾಗತಿಸಿ, ಪ್ರಸ್ತಾಪಿಸಿದರೆ, ಸಮನ್ವಿತ ಪ್ರಕಾಶನದ ರಾಧಾಕೃಷ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ದಿನೇಶ ಉಪ್ಪೂರ, ಸಿದ್ದಣ್ಣ ಸೊನ್ನದ ,ಬನವಾಸಿ ಕೃಷ್ಣಮೂರ್ತಿ, ವೈ ವಿ ಶರದ್, ಧೀರೇಂದ್ರ ನಾಗರಹಳ್ಳಿ, ವಿದ್ಯಾ ಭರತನಹಳ್ಳಿ, ಜೀವಿ ಹೆಗಡೆ, ಕೊಪ್ಪರಂ ಅನ್ನಪೂರ್ಣ, ಪ್ರಭಾಕರ ಗಂಗೊಳ್ಳಿ, ಎನ್ ಆರ್ ರಾಘವೇಂದ್ರರಾವ್, ಸಂಘದ ಸದಸ್ಯರುಗಳಾದ ಉಲಿಗೆಸ್ವಾಮಿ, ಜಿ ರಾಘವೇಂದ್ರ, ಚಲಪತಿ, ಕೆ ವೀರಯ್ಯ, ಈರಪ್ಪ, ನಿತ್ಯಾನಂದಪ್ಪ , ಗೀತಾ ಸಭಾಹಿತ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!