ಬಳ್ಳಾರಿ / ಕುರುಗೋಡು: ತಾಲ್ಲೂಕಿನ ಯರಿಂಗಳಿಗಿ ಗ್ರಾಮದ ನಾಲ್ಕನೇ ವಾರ್ಡ್ನಲ್ಲಿ ಚರಂಡಿ ನಿರ್ಮಾಣ ಮಾಡದ ಪರಿಣಾಮ ಕಲುಷಿತ ನೀರು ರಸ್ತೆಯ ಮೇಲೆ ಹರಿಯುತ್ತಿದೆ.
ನಿರಂತರವಾಗಿ ನೀರು ಹರಿಯುವುದರಿಂದ ರಸ್ತೆಯ ಮಧ್ಯದಲ್ಲಿ ಗುಂಡಿ ನಿರ್ಮಾಣವಾಗಿದ್ದು ಕಲುಷಿತ ನೀರು ರಸ್ತೆಯ ಗುಂಡಿಯಲ್ಲಿ ಶೇಖರಣೆಯಾಗುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಕಾಂಪೌಂಡ್ಗೆ ಹೊಂದಿಕೊಂಡು ಕಿರು ನೀರು ಸರಬರಾಜು ಘಟಕ ತುಂಬಿ ನಿರಂತರವಾಗಿ ಹರಿಯುವ ನೀರು ರಸ್ತೆಯ ಮಧ್ಯದ ಗುಂಡಿಗೆ ಸೇರುತ್ತಿದೆ.
ರಸ್ತೆಯ ಮಧ್ಯದ ಗುಂಡಿಯಲ್ಲಿ ಕಲುಷಿತ ನೀರು ನಿಲ್ಲುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಆವರಿಸಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಜನರು ಸೊಳ್ಳೆ ಕಡಿತದಿಂದ ಬರುವ ಡೆಂಗಿ, ಮಲೇರಿಯಾ, ಚಿಕನ್ಗುನ್ಯ, ಮೆದುಳುಜ್ವರದ ಭೀತಿಯಲ್ಲಿ ಕಾಲಕಳೆಯುವಂತಾಗಿದೆ.
ಇದೇ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಂಗನವಾಡಿ ಕೇಂದ್ರವಿದೆ. ವಿದ್ಯಾರ್ಥಿಗಳು ನಿತ್ಯ ಇದೇ ಕಲುಷಿತ ನೀರು ದಾಟಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚರಂಡಿ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದಿದೆ. ಆದರೂ ಪ್ರಯೋಜನವಾಗಿಲ್ಲ.
– ಪರಶುರಾಮ, ಗ್ರಾಮ ಪಂಚಾಯಿತಿ ಸದಸ್ಯ
ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ ಕ್ರಿಯಾಯೋಜನೆ ತಯಾರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ.
- ಶಿವರಾಮ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ, ಕುರುಗೋಡು.
ವರದಿ : ಜಿಲಾನಸಾಬ್ ಬಡಿಗೇರ್



















