ಹುನಗುಂದ : ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ನಡೆದ ಹೊನ್ನಕುಸುಮ ಸಾಹಿತ್ಯ ವೇದಿಕೆಯ “ತಿಂಗಳ ಬೆಳಕು -32ನೇ ಕೃತಿ ಅವಲೋಕನ, ಸಂವಾದ, ಚರ್ಚೆ ಕಾರ್ಯಕ್ರಮ ನಡೆಯಿತು.
ಕೆ. ಸಿದ್ದೇಶ ಅವರ ಕೋಲುದಾರಿ ಆತ್ಮಕಥನ ಕುರಿತು ಮಾತನಾಡಿದ ಶ್ರೀ ಶ್ರೀಹರಿ ಧೂಪದ್ ಅವರು ಅಂಗವೈಕಲ್ಯಕ್ಕೆ ಯಾರೂ ಧೃತಿಗೆಡಬೇಕಾಗಿಲ್ಲ ನಮ್ಮೊಳಗೆ ಛಲ ಇದ್ದರೆ ನೂರಾರು ದಾರಿಗಳಿವೆ ಎಂಬುದನ್ನು ಕೋಲುದಾರಿ ಆತ್ಮಕಥನ ತಿಳಿಸುತ್ತದೆ ಎಂದು ಹೇಳಿದರು.
ಆತ್ಮಸ್ಥೈರ್ಯಕ್ಕೆ ಚ್ಯುತಿ ಬಾರದಂತೆ ಜೀವನವನ್ನು ರೂಪಿಸಿಕೊಂಡು ಹೋಗಿದ್ದಾರೆ. ಸ್ವ ಪ್ರಯತ್ನ ಬಿಟ್ಟರೆ ಜಗತ್ತು ಸ್ವೀಕರಿಸುವುದಿಲ್ಲ. ಸ್ವ ಪ್ರಯತ್ನದಿಂದ ಅಂಗ ವೈಕಲ್ಯದ ನೂನ್ಯತೆಯನ್ನು ಸರಿದೂಗಿಸಬಹುದು ಎಂಬುದಕ್ಕೆ ಕೆ ಸಿದ್ದೇಶ್ ಅವರು ಮಾದರಿಯಾಗಿದ್ದಾರೆ. ನಮ್ಮೊಳಗೆ ಛಲ, ಆತ್ಮಸ್ಥೈರ್ಯ, ಸತತ ಪ್ರಯತ್ನವಿದ್ದರೆ ನೂರಾರು ದಾರಿಗಳಿವೆ ಎಂಬ ಮೌಲಿಕ ವಿಚಾರಗಳನ್ನು ಕೋಲುದಾರಿ ನಿರೂಪಿಸುತ್ತದೆ.
ಕೆ. ಸಿದ್ದೇಶ್ ಅವರು ನಿರೀಕ್ಷೆ, ಕಲ್ಪನೆಯಿಲ್ಲದೆ ಆಕಸ್ಮಿಕವಾಗಿ ಇದ್ದಕ್ಕಿದ್ದಂತೆ ಹದಿನೆಂಟನೆ ವಯಸ್ಸಿನಲ್ಲಿ ಕಣ್ಣನ್ನು ಕಳೆದುಕೊಂಡರು. ಪ್ರಪಂಚದಲ್ಲಿ ನಾನೊಬ್ಬನೇ ಕುರುಡನೆ? ಲೋಕ ವಿಕಾರತೆ ಬೇರೆ, ಅಂಗ ವೈಕಲ್ಯತೆ ಬೇರೆ. ಛಲವಿದ್ದರೆ ಯಾರಿಗೂ ಹೊರೆಯಾಗದಂತೆ ಬದುಕಬಹುದು ಎಂದು ಕೆ. ಸಿದ್ದೇಶ್ ಅವರ ಆತ್ಮಕಥನ ತಿಳಿಸುತ್ತದೆ. ಕತ್ತಲೆಯನ್ನು ದೂಷಿಸಿ ಫಲವಿಲ್ಲ. ಏನಿದ್ದರೂ ಬೆಳಕಿನ ಹಾದಿಯನ್ನು ಕಂಡುಕೊಳ್ಳಬೇಕೆಂಬುದು ಕೋಲುದಾರಿಯ ಅನುಭವದ ಪಾಠವಾಗಿದೆ. ದೇಹದ ನೋವಿಗೆ ವೈದ್ಯರು ಚಿಕಿತ್ಸೆ ನೀಡಿದರು. ಆದರೆ ಮನಸ್ಸಿನ ನೋವಿಗೆ ಕೆ. ಸಿದ್ದೇಶ್ ಅವರೇ ವೈದ್ಯರಾಗಿದ್ದರು ಎಂಬುದು ಈ ಕಥನದಿಂದ ತಿಳಿಯುತ್ತದೆ. ಸಿದ್ದೇಶ್ ಅವರು ಕಣ್ಣು ಕಳೆದುಕೊಂಡ ಸಂದರ್ಭ ತಾಯಿಯ ಸಾವಿನ ಸಮಯ, ಹೆಂಡತಿಯೊಂದಿಗಿನ ಪ್ರೇಮ ಪ್ರಸಂಗ ಇನ್ನು ಮೊದಲಾದ ಅಂಶಗಳನ್ನು ಕುರಿತು ಶ್ರೀಹರಿ ದೂಪದ್ ಅವರು ಮಾತನಾಡಿದರು.
ಕೆ. ಸಿದ್ದೇಶ್ ಅವರು ಲೇಖಕರ ನುಡಿಗಳನ್ನಾಡುತ್ತಾ
ಜೀವನ ಚಿತ್ರಣ ಎಂದು ನಾನು ಬರೆದಿದ್ದೆ. ಆದರೆ ವಸುದೇಂದ್ರ ಅವರಿಗೆ ತೋರಿಸಿದಾಗ ಇದು ಆತ್ಮಕಥೆ ಎಂದು ಹೇಳಿ ಕೋಲುದಾರಿ ಎಂಬ ಹೆಸರನ್ನು ನೀಡಿದರು. ಕೋಲು ಹಿಡಿದ ದಾರಿ ಹಿಡಿದು ನನ್ನ ದಾರಿಯನ್ನು ಕಂಡುಕೊಂಡೆ. ಹುಟ್ಟು ಕುರುಡು ಸಹಜವಾದದ್ದು. ಆದರೆ ಮಧ್ಯದಲ್ಲಿ ಬರುವ ಕುರುಡು ದುರಂತವಾದುದು.
ವೈಯಕ್ತಿಕ ಬದುಕಿನಲ್ಲಿ ಹಲವಾರು ಏರಿಳಿತಗಳನ್ನು ಕಂಡಿರುವೆ ಆತ್ಮಸ್ಥೈರ್ಯವಿದ್ದರೆ ಯಾವ ವಿಕಲತೆಯು ನಮ್ಮನ್ನು ಕಾಡುವುದಿಲ್ಲ. ಉತ್ತಮ ಸ್ಥಿತಿಗೆ ಹೋದಾಗ ನಡೆದು ಬಂದ ದಾರಿ ಮರೆಯಬಾರದು ಎಂದು ಹೇಳಿದರು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಇಂದು ಅಂಧರ ಬದುಕು ಸರಳವಾಗಿದೆ. ಸಾಧನೆಗೆ ತಂತ್ರಜ್ಞಾನದ ಕೊಡುಗೆ ಅಪಾರವೆಂದರು. ಕೋಲಿಲ್ಲದೆ ಕಾಲುವೆಗೆ ಬಿದ್ದ ಸಂದರ್ಭ, ತಮ್ಮ ಅತಂತ್ರ ಬದುಕು, ಉದ್ಯೋಗ ಕಳೆದುಕೊಂಡಾಗ ಪಟ್ಟಪಾಡು, ಅಂಗವಿಕಲರನ್ನು ಸಮಾಜದಲ್ಲಿ ನೋಡುವ ಪರಿ, ತಮ್ಮ ತಾಯಿಯ ಮರಣದ ಸಂದರ್ಭ ಇನ್ನು ಮೊದಲಾದ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಿದರು.
ಹೊನ್ನಕುಸುಮ ಸಾಹಿತ್ಯ ವೇದಿಕೆಯ ಗೌರವ ಅಧ್ಯಕ್ಷರಾದ ಡಿ.ಎಸ್. ತಿಪ್ಪೇಸ್ವಾಮಿ ಅವರು ಮಾತನಾಡುತ್ತ ಶ್ರೀ. ಕೆ. ಸಿದ್ದೇಶ್ ಅವರು ಬೆಳಕಿನ ಬದುಕು ಹಾಗೂ ಕತ್ತಲೆಯ ಬದುಕು ಈ ಎರಡು ಬದುಕನ್ನು ಕಂಡವರು. ತಮ್ಮ ಅಂಗವಿಕಲತೆಯಿದ್ದರೂ ಸಾಧಿಸುವ ಛಲ ಅಗಾಧವಾದದ್ದು ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿದ್ದು ಪಿಎಚ್. ಡಿ. ಪದವಿ ಅಧ್ಯಯನ ಮಾಡುತ್ತಿರುವುದು ಸಂತೋಷದ ಸಂಗತಿ. ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಅವರಿಂದ ಮೂಡಿಬರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ.ಮಹಾಂತೇಶ ಅವಾರಿ ಅವರು ಕನ್ನಡ ಸಾಹಿತ್ಯದಲ್ಲಿ ಆತ್ಮಕಥೆಗಳು ಮಾದರಿಗಳಾಗಿವೆ. ಹಲವಾರು ಮೌಲ್ಯಗಳನ್ನು ಒದಗಿಸುವ ಪ್ರೇರಕ ಶಕ್ತಿಯಾಗಿವೆ. ಅವುಗಳಲ್ಲಿ ಸಿದ್ದೇಶ್ ಅವರ ಕೋಲುದಾರಿಯು ಒಂದು. ಸದೃಢವಾಗಿದ್ದರೂ ಕೆಲವರು ತಮ್ಮ ಅನ್ನವನ್ನು ಕಂಡುಕೊಳ್ಳುವುದಿಲ್ಲ. ಇವರು ಅಂಗವಿಕಲತೆಯಲ್ಲೂ ಸಾಧನೆ ಮಾಡಿ ತಮ್ಮ ಬದುಕನ್ನು ಕಂಡುಕೊಂಡರು. ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಶ್ರೀಮತಿ ಗೀತಾ ತಾರಿವಾಳ ಪ್ರಾರ್ಥಿಸಿದರು. ಶ್ರೀ ಎಂ.ಡಿ. ಚಿತ್ತರಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಶ್ರೀ ಗುಂಡಪ್ಪ ಕುರಿ ನಿರೂಪಿಸಿದರು. ಡಾ.ನಾಗರಾಜ ನಾಡಗೌಡ, ಜನಾದ್ರಿ ವಕೀಲರು, ಶರಣಪ್ಪ ಹೂಲಗೇರಿ,ಜಗದೀಶ್ ಹಾದಿಮನಿ, ಡಾ. ಎಲ್. ಜಿ. ಗಗ್ಗರಿ, ಸೇರಿದಂತೆ ಇನ್ನಿತರ ಲೇಖಕರು, ಸಹೃದಯರು, ಹೊನ್ನಕುಸುಮ ಸಾಹಿತ್ಯ ವೇದಿಕೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
- ಕರುನಾಡ ಕಂದ ಪತ್ರಿಕೆ



















