
ಬಳ್ಳಾರಿ / ಕಂಪ್ಲಿ : ಆಧುನಿಕ ಯುಗದಲ್ಲಿ ಜೀವನ ಕಷ್ಟಕರ. ಅಂದರಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿನಿಯರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಪಟ್ಟಣದ ಎಸ್‌ಬಿಐ ಬ್ಯಾಂಕ್ ಬಳಿಯಲ್ಲಿರುವ ವಿವಿಎಸ್‌ಎಸ್ ಟ್ರಸ್ಟಿನ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಮದರ್ ತೆರೇಸಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡಿಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಯರು ಉನ್ನತ ಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನದಂದು ಅಭಿವೃದ್ಧಿಯೊಂದಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸಾಧನೆಯ ಆಲೋಚನೆ ಇದ್ದರೆ ಒಳ್ಳೆಯ ಬದುಕು ಸಾಧಿಸಲು ಸಾಧ್ಯ. ಫೇಸ್‌ಬುಕ್, ವಾಟ್ಸಾಪ್ ಬಿಟ್ಟು ಓದಿನ ಕಡೆಗೆ ಮುಂದಾಗಬೇಕು ಎಂದರು.
ನಂತರ ಹೆಚ್.ವೀರಾಪುರದ ಶಿವಲಿಂಗ ಮಠದ ಜಡೇಶ್ ತಾತ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಮಕ್ಕಳು ಗುರಿಯನ್ನಿಟ್ಟುಕೊಂಡು ಕಲಿಕಾ ಹಂತದಲ್ಲಿ ಮುಂದೆ ಸಾಗಿದರೆ ಒಳ್ಳೆಯ ಭವಿಷ್ಯ ದೊರಕುತ್ತದೆ ಎಂದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಮಾತನಾಡಿ, ಪೋಷಕರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು. ಕಾಲೇಜು ಹೆಮ್ಮರವಾಗಿ ಬೆಳೆದಿರುವುದು ಖುಷಿ ತಂದಿದೆ. ತಂದೆ ತಾಯಿಯವರ ಮಾರ್ಗದರ್ಶನದಲ್ಲಿ ನಡೆದು, ನೋಯಿಸದೆ ಶಿಕ್ಷಣ ಪಡೆದು ಒಳ್ಳೆಯ ಹುದ್ದೆ ಪಡೆದುಕೊಳ್ಳಬೇಕು ಎಂದರು.
ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಮದ್ದಾನೆಪ್ಪ ಬಿಡನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿನಿಯರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕಾಲೇಜು ಸಂಸ್ಥೆಯು ನಿರಂತರವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಹೆಣ್ಮಕ್ಕಳು ಉನ್ನತ ಮಟ್ಟದ ಶಿಕ್ಷಣದೊಂದಿಗೆ ಕಾಲೇಜಿಗೆ ಹಾಗೂ ಪೋಷಕರಿಗೆ ಗೌರವ ತರಬೇಕಾಗಿದೆ ಎಂದರು.
ವಿವಿಎಸ್‌ಎಸ್ ಟ್ರಸ್ಟ್ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ರಂಗದಲ್ಲಿ ಸಾಧನೆ ಮಾಡಿದ ದಕ್ಷಿಣ ಭಾರತದ ಸಾವಿತ್ರಿ ಬಾಯಿ ಪುಲೆ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತೆ ಶಾಂತ ಗಡ್ಡದ್, ವಸತಿ ನಿಲಯ ಪಾಲಕಿ ಎಂ.ಬಿ.ಶುಭಾ ಸೋಮಶೇಖರ, ವೈದ್ಯಕೀಯ ಕ್ಷೇತ್ರದ ಡಾ.ಶ್ರದ್ಧಾ ಭರತ್, ಆರೋಗ್ಯ ಕ್ಷೇತ್ರಶಿಕ್ಷಣಾಧಿಕಾರಿ ಕೆ.ಶೋಭಾ ಇವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಕ್ಕಿ ಗಿರಿಣಿ ಮಾಲಿಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಪುರಸಭೆ ಮಾಜಿ ಸದಸ್ಯ ಸಿ.ಆರ್.ಹನುಮಂತ, ಪ್ರಾಚಾರ್ಯರಾದ ಮಹಮ್ಮದ್ ಶಫಿ, ಬಸವರಾಜಸ್ವಾಮಿ, ಮದ್ದಾನೆಪ್ಪ ಬಿಡನಾಳ, ಮಹಾಬಲೇಶ್ವರಪ್ಪ, ಇಂದ್ರಜೀತ್ ಸಿಂಗ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















