
ಬೀದರ್/ಬಸವಕಲ್ಯಾಣ : ಜಗದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮನುಕುಲದ ಉದ್ಧಾರಕರು ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಪ್ರತಿ ವರ್ಷದಂತೆ ನಿನ್ನೆ ಸಾಯಂಕಾಲ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಅಭಿನವ ರೇಣುಕಾ ಪ್ರಶಸ್ತಿ ಶ್ರೀ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ ಮೂಲಕ ಮನುಕುಲಕ್ಕೆ ಅಹಿಂಸಾ, ಸತ್ಯ, ಅಸ್ತೇಯ, ಪೂಜಾ, ಜಪ, ಧ್ಯಾನ ಮೊದಲಾದ ದಶಧರ್ಮ ತತ್ವಗಳನ್ನು ಬೋಧಿಸಿ ಧರ್ಮ ಮಾರ್ಗ ತೋರಿದರು. ಅಲ್ಲದೆ ಹದಿನೆಂಟು ಜಾತಿಯ ಜನಾಂಗಕ್ಕೆ ಇಷ್ಟಲಿಂಗ ದೀಕ್ಷೆ ಗೈದು ಧರ್ಮ ಮಾರ್ಗದಲ್ಲಿ ಮುನ್ನಡೆಸುವುದರ ಮೂಲಕ ಮನುಕುಲವನ್ನು ಉದ್ಧರಿಸಿದರು. ಹಾಗೆಯೇ ಅಭಿನವ ರೇಣುಕ ಶ್ರೀ ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ಪ್ರಾಚಾರ್ಯ ಮಲ್ಲಿಕಾರ್ಜುನ ಕಾಡಾದಿ ಮಠ ಅವರು ಧರ್ಮವಂತರಾಗಿ ಆರಂಭದಿಂದಲೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯಂದು ಪ್ರಸಾದ ಸೇವೆ ಗೈಯುತ್ತಾ ಬರುತ್ತಿದ್ದಾರೆ. ಶಿವಯ್ಯ ಮಠಪತಿಯವರು ಚಿಕ್ಕ ವಯಸ್ಸಿನಲ್ಲಿಯೇ ಗ್ಯಾರಂಟಿ ನ್ಯೂಸ್ ಜಿಲ್ಲಾ ವರದಿಗಾರರಾಗಿ ಸಾಧನೆ ಗೈದಿದ್ದಾರೆ. ಬಸವರಾಜ ಮಾಲಿಪಾಟೀಲರು ಸದಾ ಗವಿಮಠ ಸೇವೆಯಲ್ಲಿ ನಿರತರಾಗಿರುತ್ತಾರೆ. ಈ ಪ್ರಶಸ್ತಿ ಈ ಸಾಧಕರ ಸೇವೆಗೆ ಸಂದ ಗೌರವವೇ ಎಂದು ಸಂತಸದಿಂದ ನುಡಿದರು.
ನೇತೃತ್ವ ವಹಿಸಿದ್ದ ಮಂಠಾಳ ವಿರಕ್ತ ಮಠದ ಪೂಜ್ಯಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ ಪ್ರತಿವರ್ಷ ಬಸವಕಲ್ಯಾಣದಲ್ಲಿ ಗವಿಮಠದ ಪೂಜ್ಯಶ್ರೀ ಡಾ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ಸಂಗತಿ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗಪುರುಷರಾಗಿದ್ದು, ಅವರ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಅವರ ಆಶೀರ್ವಾದ ಸದಾ ಇರಲಿ ಎಂದು ಶುಭ ಹಾರೈಸಿದರು.
ಅಭಿನವ ರೇಣುಕಾ ಶ್ರೀ ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ಪ್ರಾಚಾರ್ಯ ಮಲ್ಲಿಕಾರ್ಜುನ ಕಾಡಾದಿಮಠ ಮಾತನಾಡಿ ಘಟದಿಂದ ಮಠ ಮಾಡಿದ ಪೂಜ್ಯಶ್ರೀ ಡಾ. ಅಭಿನವ ಘನಲಿಂಗ ಗುರುಗಳ ಶಕ್ತಿ ಅಪಾರ. ಚಿಕ್ಕಂದಿನಿಂದಲೂ ಗವಿಮಠದ ಭಕ್ತನಾಗಿ ಸದಾ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಈ ಸೇವೆ ಗುರುತಿಸಿ ಪೂಜ್ಯ ಗುರುಗಳು ನನಗೆ ಈ ಪ್ರಶಸ್ತಿ ನೀಡಿ ಗೌರವಿಸಿ ಆಶೀರ್ವದಿಸಿದ್ದು ನನ್ನ ಭಾಗ್ಯ ಎಂದು ಹರ್ಷದಿಂದ ನುಡಿದರು. ಚಿಕ್ಕವಯಸ್ಸಿನಲ್ಲಿಯೇ ಪೂಜ್ಯ ಡಾ. ಅಭಿನವ ಗುರುಗಳು ನನ್ನ ಈ ಸಾಧನೆ ಗುರುತಿಸಿ ಅಭಿನವ ರೇಣುಕಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತೋಷ ತಂದಿದೆ ಎಂದು ಗ್ಯಾರಂಟಿ ನ್ಯೂಸ್ ಜಿಲ್ಲಾ ವರದಿಗಾರ ಶಿವಯ್ಯ ಮಠಪತಿ ನುಡಿದರು.
ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಅಭಿನವ ರೇಣುಕಾ ಶ್ರೀ ಪ್ರಶಸ್ತಿ ಪುರಸ್ಕೃತ ಬಸವರಾಜ ಮಾಲಿಪಾಟೀಲ, ಮುಖ್ಯ ಅತಿಥಿ ಚನ್ನಪ್ಪ ರಾಜಾಪುರೆ, ಕಲ್ಯಾಣ ನಾಡು ಜಾನಪದ ಕಲಾ ತಂಡದ ಅಧ್ಯಕ್ಷ ದಿಲೀಪಕುಮಾರ ದೇಸಾಯಿ ವೇದಿಕೆ ಮೇಲಿದ್ದರು. ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಜಯಂತಿ ಯುಗಮಾನೋತ್ಸವ, ಗವಿಮಠದ ಇತಿಹಾಸ ಪರಂಪರೆ ಕುರಿತು ಪ್ರಾಸ್ತಾವಿಕ ನುಡಿದರು. ಯುವಕಲಾವಿದ ವಿವೇಕ ವಸ್ತ್ರದ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ರುದ್ರೇಶ್ವರ ವಿರೂಪಾಕ್ಷಸ್ವಾಮಿ ಸ್ವಾಗತಿಸಿದರು. ಮುಖ್ಯಗುರು ರಮೇಶ ರಾಜೋಳೆ ಸಂಚಾಲನೆ ಮಾಡಿದರು.
ಈ ಸಮಾರಂಭದಲ್ಲಿ ಬಸವಂತಪ್ಪ ಲವಾರೆ, ಪತ್ರಕರ್ತ ವೀರಶೆಟ್ಟಿ ಮಲಶೆಟ್ಟಿ, ಮಲ್ಲಿಕಾರ್ಜುನ ಅಲಗುಡೆ, ರಮೇಶ ಸ್ವಾಮಿ, ಬಾಬು ಸ್ವಾಮಿ, ಸಂಜೂಕುಮಾರ ಮಠಪತಿ ಪುಣೆ, ಲಿಂಗರಾಜ ಬಿರಾದಾರ, ಸುಬಿದ್ರಾಬಾಯಿ ಸ್ವಾಮಿ, ವಿಮಲಾಬಾಯಿ ಬಿರಾದಾರ, ಸರಸ್ವತಿ ಬೆಂಬಳಿ, ಶೀಲಾದೇವಿ ಲವಾರೆ, ಮುಂತಾದ ಭಕ್ತರು ಉಪಸ್ಥಿತರಿದ್ದರು.
ಬೇಲೂರ ಮೊದಲಾದ ಗ್ರಾಮಗಳ ಭಜನಾ ತಂಡದ ಕಲಾವಿದರು ಕಲಾ ಸೇವೆ ಮಾಡಿದರು.
ವರದಿ: ಶ್ರೀನಿವಾಸ ಬಿರಾದಾರ




















