ಬಾಗಲಕೋಟೆ -ಮುಧೋಳ : ಪಾರಿಜಾತ ಎಂದರೆ ಸಾಂಸ್ಕೃತಿಕ ಮಹತ್ವ ಹೊಂದಿರುವ ಪುಷ್ಪ.
ಈ ಪುಷ್ಪವನ್ನು ಶ್ರೀ ಕೃಷ್ಣ ಪರಮಾತ್ಮನು ಸತ್ಯಭಾಮೆಗಾಗಿ ಸ್ವರ್ಗದಿಂದ ತಂದ ಎಂಬ ಕಥೆ ಇದೆ. ಪಾರಿಜಾತವು ಒಂದು ದೈವಿಕವಾದ ಸಸ್ಯ. ಶ್ರೀಕೃಷ್ಣ ಪರಮಾತ್ಮನಿಗೆ ಪ್ರಿಯವಾದ “ಪಾರಿಜಾತದ” ಮಹತ್ವ- ಅದರ ಸುಗಂಧವನ್ನು ನಾಡಿನಾದ್ಯಂತ ಹರಡಿದ ಬೆರಳಣಿಕೆಯ ಖ್ಯಾತ ಕಲಾವಿದರಲ್ಲಿ ಸುನಂದ. ಕೆ. ಮ್ಯಾಗೇರಿ ಒಬ್ಬರು. ಇವರು ಮೂಲತಃ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಕಾಶವ್ವ ಮ್ಯಾಗೇರಿ ಎಂಬ ತಾಯಿಯ ಉದರದಲ್ಲಿ 1965 ರಲ್ಲಿ ಜನಿಸಿದರು. ಆವ ಜನ್ಮದ ಸುಕೃತವೋ ಪಾರಿಜಾತದ ಹಿರಿಯ ಕಲಾವಿದ ಹುಲ್ಯಾಳದ ಖ್ಯಾತ ತಬಲಾ ವಾದಕ ಅಯ್ಯಪ್ಪ ಮಾಸ್ಟರ್ ಹೂಗಾರ್ ಅವರ ಕಣ್ಣಿಗೆ ಬಿದ್ದು ಅವರ ಗರಡಿಯಲ್ಲಿ ಪಳಗಿದ ಸುನಂದಾ ಮ್ಯಾಗೇರಿ ಕನ್ನಡ ರಂಗಭೂಮಿಯ ಶ್ರೇಷ್ಠ ಕಲಾವಿದೆಯಾಗಿ ಹೊರಹೊಮ್ಮಿ 50 ವಷ೯ ನಿರಂತರ ಪಾರಿಜಾತ ಸೇವೆ ಮಾಡಿದ್ದಾರೆ. ಹೆಚ್ಚಿನ ಕಲಾವಿದ್ಯೆಯನ್ನು ಚೌಡಾಪೂರದ ಶಂಕರೆಪ್ಪ ಅವರು ಗುರುವಾಗಿ ಧಾರೆಯೆರೆದರು. ಶ್ರೀ ಕೃಷ್ಣ ಪಾರಿಜಾತ ರಂಗಭೂಮಿಯ ದಿಗ್ಗಜರಾದ ಬರಗಿ ರಾಚಯ್ಯ ಸ್ವಾಮಿಗಳ ಮಾಗ೯ದಶ೯ನ- ಕಲಾದೀಕ್ಷೆ ಬೆಳವಣಿಗೆಗೆ ಸಹಕಾರಿಯಾಯಿತು.ಟಕ್ಕಳಕಿ ವಿಠ್ಠಲಪ್ಪ. ಅಥಣಿಯ ಮಲ್ಲಯ್ಯ ಸ್ವಾಮಿಗಳು. ಕೃಷ್ಣಾಜೀ ದೇಶಪಾಂಡೆ.ಸಾರವಾಡದ ಶಿವಣಗೌಡ. ಮಹಾಲಿಂಗಪೂರದ ರತ್ನಪ್ಪ ಮಾಸ್ತರ.ಲಕ್ಷ್ಮಣ ಬೂದಿಹಾಳ.ಹಣಮಂತ ರಡರಟ್ಟಿ.ಕಾಶಿಬಾಯಿ ದಾದನಟ್ಟಿ. ಮಲ್ಲಮ್ಮ ಬೈಲಹೊಂಗಲ.ಮಲ್ಲವ್ಶ ಶಿರೋಳ. ಕಮಾಲಸಾಬ ದಾದನಟ್ಟಿ. ವೆಂಕಣ್ಣ ತುಳಸಿಗಿರಿ. ರೇಣುಕಾ ಮಾಲಾಪೂರ.ದಯಾನಂದ ಲೋಣಿ. ಇಂಗಳಗಿ ರಾಮಣ್ಣ.ಮುಂತಾದ ಅನುಭವಿ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದು ಇವರ ಹೆಗ್ಗಳಿಕೆ.
ಈಗ ಜ್ಞಾನೇಶ್ವರ ಶ್ರೀ ಕೃಷ್ಣ ಪಾರಿಜಾತ ಕಂಪನಿಯನ್ನು ಕಟ್ಟಿಕೊಂಡು ಸೇವೆಯನ್ನು ಮುಂದುವರಿಸಿದ್ದಾರೆ. ಮೊದಮೊದಲು ಬಾಲ್ಯದಲ್ಲಿ ರತ್ನ ಮಾಂಗಲ್ಯ. ಪುತ್ತಳಿ. ಅಣ್ಣ ತಂಗಿ.ಹಸಿರು ಬಳೆ .ಹೀಗೆ ಅನೇಕ ಅಮೇಚೂರ ನಾಟಕಗಳಲ್ಲಿಯೂ ಕಥಾನಾಯಕಿ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡವರು . ನಂತರದಲ್ಲಿ ಚೌಡಿಕಿ ಮೇಳವನ್ನು ಮಾಡಿಕೊಂಡು ಹಳ್ಳಿಗಳಲ್ಲಿ ಸೇವೆ ಮಾಡಿದ್ದಾರೆ. ಈಗ ತಮ್ಮ ಸುಶ್ರಾವ್ಯ ಕಂಠದಿಂದ ಭಜನೆಯನ್ನು ಹೇಳುತ್ತಾರೆ. ಗೌಳಗಿತ್ತಿ ಸತ್ಯಭಾಮೆ ಕೊರವಂಜಿ ಪಾತ್ರಗಳಲ್ಲಿ ಅವರ ಅಸ್ಕಲಿತ ವಾಣಿಯಿಂದ ನವರಸಗಳಿಂದ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ ಪ್ರೇಕ್ಷಕರನ್ನ ಶರೆಹಿಡಿದು ಮಂತ್ರ ಮುಗ್ಧರನ್ನಾಗಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ . ಇಂಥ ಮೇರು ಕಲಾವಿದೆ ಶ್ರೀಮತಿ ಸುನಂದ ಮ್ಯಾಗೇರಿ ಅವರನ್ನು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ.
ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆ. ಬಸವ ಜಾನಪದ ಕಲಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ದಿ. 8 ರಂದು ನಡೆಯುವ ರಾಷ್ಟ್ರೀಯ ಮಹಿಳಾ ದಿನೋತ್ಸವ ಕಾರ್ಯಕ್ರಮದಲ್ಲಿ “ಬಯಲಾಟದ ಭಾರ್ಗವಿ” ಎಂಬ ಗೌರವ ಪ್ರಶಸ್ತಿಯನ್ನು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಾನಿಧ್ಯದಲ್ಲಿ ನೀಡಿ ಗೌರವಿಸಲಾಗುತ್ತದೆ.
- ಕರುನಾಡ ಕಂದ ಪತ್ರಿಕೆ



















