ಕೊಪ್ಪಳ: ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿರುಚಿ ಸಂಘ (ರಿ.) ಇವರ ಸಹಯೋಗದಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ ಜನ್ಮ ದಿನದ ಅಂಗವಾಗಿ ಮಾಚ್೯-7 ಶನಿವಾರ ಮಧ್ಯಾಹ್ನ 2 ಗಂಟೆಗೆ ನಗರದ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಕವಿಗೋಷ್ಠಿ ನಡೆಯಿತು.
ಕಾರ್ಯಕ್ರಮವು ಕಾರಟಗಿಯ ಭೋಜರಾಜ ಕಲಾವಿದರಿಂದ ಪುಟ್ಟಯ್ಯಜ್ಜನ ಪ್ರಾರ್ಥನೆಯೊಂದಿಗೆ, ಗಾನಯೋಗಿ ಡಾ. ಪಂ. ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಹೂಗಳನ್ನು ಅರ್ಪಿಸಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿಯವರಿಂದ ಗಿಡಗಳಿಗೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಳಹಳ್ಳಿ ಬೃಹನ್ಮಠದ ಪೂಜ್ಯರಾದ ಶ್ರೀ ಶರಣಬಸವ ದೇವರು ಹಾಗೂ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಎಸ್.ವಿ. ಪಾಟೀಲ್ ಗುಂಡೂರು ವಹಿಸಿದ್ದರು.
ಉದ್ಘಾಟನೆ ಭಾಷಣವನ್ನು ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿಯವರು ಕೊಪ್ಪಳ ಮತ್ತು ಗಂಗಾವತಿ ಸಾಹಿತ್ಯ ಕ್ಷೇತ್ರ ಆಗುಹೋಗುಗಳ ಬಗ್ಗೆ, ಪ್ರಸ್ತುತ ಬೆಳವಣಿಗೆ ವಿವರಿಸುತ್ತ ಗಂಗಾವತಿ ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನ ಮಾಡಲು ಮುಂದಾಗಲಿ ಸಮ್ಮೇಳನ ಮುಖೇನ ಹಿರಿಯ ಕಿರಿಯ ಸಾಹಿತಿಗಳು ಒಂದಡೆ ಸೇರುವಂತಾಗಲಿ ನಾನು ಕೂಡಾ ಮುಂಚಿತವಾಗಿ ಬಂದು ಪ್ರತಿಯೊಂದಕ್ಕೂ ಸಹಕಾರ ನೀಡವುದಾಗಿ ಭರವಸೆ ನುಡಿಗಳಾಡಿದರು.
ಪ್ರಾಸ್ತಾವಿಕ ನುಡಿಯಲ್ಲಿ ಅಶೋಕ ಗುಡಿಕೋಟಿಯವರು ಚುಟುಕು ಸಾಹಿತ್ಯ ಪರಿಷತ್ತು ನಡೆದು ಬಂದ ಹಾದಿ ಮತ್ತು ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಂಗೀತ, ಸಾಹಿತ್ಯ, ಸಾಮಾಜಿಕ ಕಳಕಳಿ ಬಗ್ಗೆ ಹಾಗೂ ಕವಿಗೋಷ್ಠಿ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಮುಂದೆ ಮಾಡುವ ತಾಲೂಕು ಚುಟುಕು ಸಮ್ಮೇಳನ ಕುರಿತು ಪ್ರಸ್ತಾಪಿಸಿ ಎಲ್ಲರ ಸಹಕಾರ ಇದ್ದರೆ ಮಾಡುವುದಾಗಿ ತಿಳಿಸಿದರು.
ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣವನ್ನು ಮಾಡಿದ ಹಿರಿಯ ಸಾಹಿತಿಗಳಾದ ಎಸ್. ವಿ. ಪಾಟಿಲ್ ಗುಂಡೂರವರು, ಕವನ ವಾಚನ ಮಾಡಿದ ಕವಿಗಳ ಕವನಗಳ ಬಗ್ಗೆ ಇಲ್ಲಿ ಎಲ್ಲರೂ ಸಮಾನರು. ಯಾರೂ ದೊಡ್ಡವರು ಚಿಕ್ಕವರಲ್ಲವೆಂದು, ಪ್ರೋತ್ಸಾಹದ ದುಷ್ಠಿಯಿಂದ ಸರಳವಾಗಿ ವಿಮರ್ಶಿಸಿ, ಕಾವ್ಯ ಅಂದರೆ ಏನು, ಕಾವ್ಯ ರಚನೆ ಹೇಗಿರಬೇಕೆಂದು ಹಿರಿಯ ಕವಿಗಳ ಕವಿತೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ತಡವಾಗಿ ಬಂದ ಗಂಗಾವತಿ ಪ್ರಾಣೇಶ್‌ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಈ ಭಾಗದಲ್ಲಿ ಸಾಹಿತ್ಯಾಸಕ್ತರು ಸಾಹಿತಿಗಳು ಹೆಚ್ಚನ ಸಂಖ್ಯೆಯಲ್ಲಿ ಇದ್ದು ಕಾರ್ಯಕ್ರಮಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಸಾಹಿತಿಗಳು ಬೆಳೆದಿದ್ದಾರೆ, ಆದರೆ ಇತ್ತೀಚಿನ ಯುವ ಕವಿಗಳಿಗೆ ಅಧ್ಯಯನದ ಕೊರತೆ ಇದೆ. ಬೇರೆಯವರ ಪುಸ್ತಕ ಕವಿತೆಗಳನ್ನು ಓದಿ ಬರೆಯುವುದನ್ನು ರೂಢಿ ಮಾಡಿಕೊಂಡರೆ ಉತ್ತಮ ಬೆಳವಣಿಗೆಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲರು ಪುಟ್ಟರಾಜ ಗವಾಯಿಗಳಿಗೂ ತಮಗೂ ಇರುವ ಅವಿನಾಭಾವ ಸಂಬಂಧ ಹಾಗೂ ಕವಿಗೋಷ್ಠಿ ಕುರಿತು ಮಾತನಾಡಿದರೆ, ಇನ್ನೋರ್ವ ಅತಿಥಿಯಾದ ಕರವೇ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಮಾತನಾಡಿ, ಮುಂದೆ ನಡೆಯುವ ಪ್ರತಿಯೊಂದು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಇರುತ್ತೆಯೆಂದು ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಎಸ್.ಬಿ ಹಿರೇಮಠ ಹಿರೇಜಂತಕಲ್, ಚು.ಸಾ.ಪ ಕಾರಟಗಿ ತಾಲೂಕ ಅಧ್ಯಕ್ಷರಾದ ಕರಿಸಿದ್ದನಗೌಡ ಅವರು ಭಾಗವಹಿಸಿದ್ದರು.
ಆಮೇಲೆ ವೇದಿಕೆಯ ಗಣ್ಯರೆಲ್ಲರಿಗೂ ಪರಿಷತ್ತಿನಿಂದ ಸನ್ಮಾನಿಸಿ ಗೌರವಿಸಲಾಯಿತು.
ಕವಿಗೋಷ್ಠಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ತಮ್ಮ ಸ್ವರಚಿತ ಕವನಗಳನ್ನು ವಾಚನ ಮಾಡಿದರು. ಬಹಳಷ್ಟು ಕವನಗಳು ಪುಟ್ಟರಾಜ ಗವಾಯಿಗಳ ಕುರಿತು ಇದ್ದವು, ಉಳಿದ ಕವನಗಳು ಸಾಹಿತ್ಯಾಸಕ್ತರ ಮನ ತಣಿಸಿದವು. ಕವಿಗೋಷ್ಠಿಯಲ್ಲಿ ಉತ್ತಮ ಕವಿತೆ ಮತ್ತು ವಾಚನ ಮಾಡಿದ ಯುವಕವಿ ಎಂ.ಎಸ್ ನಾರಾಯಣ, ಶ್ರೀಮತಿ ಶಾರದಾ ಬೆಟಗೇರಿ, ಶರಣಪ್ಪ ವಿದ್ಯಾನಗರ ರವರಿಗೆ ಶ್ರೀ ಡಾ. ಪಂ. ಪುಟ್ಟರಾಜ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ಮಂಜುನಾಥ ತಾವರಿಗಿ ನೆರೆವೇರಿಸಿದರೆ, ವಂದನಾರ್ಪಣೆಯನ್ನು ಸೋಮಶೇಖರ ಕಂಚಿ ಮಾಡಿದರು.
- ಕರುನಾಡ ಕಂದ ಪತ್ರಿಕೆ



















