
ಮಾಜಿ ಸೈನಿಕರು ಹಾಗೂ ದಲಿತ ಸಂಘಟನೆಗಳ ಘರ್ಜನೆ : ಪಟ್ಟಣದಲ್ಲೇ ನಿರ್ಮಾಣಕ್ಕೆ ಪಟ್ಟು
ತಾಳಿಕೋಟೆ: ತಾಲೂಕಿನ ಮೈಲೇಶ್ವರ ಗ್ರಾಮದ ಬಳಿ ಪ್ರಜಾಸೌಧ ನಿರ್ಮಿಸುವ ಸರ್ಕಾರದ ನಿರ್ಧಾರಕ್ಕೆ ಪಟ್ಟಣದಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದು, ‘ಪ್ರಜಾಸೌಧ ಪಟ್ಟಣದಲ್ಲೇ ಇರಲಿ’ ಎಂಬ ಆಗ್ರಹದೊಂದಿಗೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ 41ನೇ ದಿನಕ್ಕೆ ಕಾಲಿಟ್ಟಿದೆ.
ದಿನದಿಂದ ದಿನಕ್ಕೆ ಹೋರಾಟದ ಕಿಚ್ಚು ಹೆಚ್ಚುತ್ತಿದ್ದು, ಸರ್ಕಾರದ ಪಟ್ಟು ಸಡಿಲಿಸುವವರೆಗೂ ಹಿಂದೆ ಸರಿಯುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಸೋಮವಾರ ಮಾಜಿ ಸೈನಿಕರು ಸಾಥ್ ನೀಡುವ ಮೂಲಕ ಹೊಸ ಚೈತನ್ಯ ತುಂಬಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಾರ್ವಜನಿಕರಿಗೆ ದೂರವಾಗುವ ಮತ್ತು ಜನಸಾಮಾನ್ಯರಿಗೆ ತೊಂದರೆ ನೀಡುವ ಇಂತಹ ಯೋಜನೆಯನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಪಟ್ಟಣದ ಸರ್ಕಾರಿ ಜಾಗದಲ್ಲೇ ಪ್ರಜಾಸೌಧ ನಿರ್ಮಿಸಬೇಕು” ಎಂದು ಒತ್ತಾಯಿಸಿದರು.
ಬೃಹತ್ ರ್ಯಾಲಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಸ್ಥಾಪಿತ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ಭರ್ಜರಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಧರಣಿ ವೇದಿಕೆಗೆ ಆಗಮಿಸಿದ ತಹಶೀಲ್ದಾರ್ ಡಾ. ವಿನಯಾ ಹೂಗಾರ ಅವರಿಗೆ ಮನವಿ ಸಲ್ಲಿಸಿ, ಜನರ ಆಶಯಕ್ಕೆ ಗೌರವ ನೀಡುವಂತೆ ಆಗ್ರಹಿಸಿದರು.
ಮಾಜಿ ಸೈನಿಕರುಗಳಾದ ಶ್ರೀಪಾಲ ಸಂಗ್ಮಿ, ಸಿದ್ಧನಗೌಡ ಪಾಟೀಲ, ಎಸ್. ಕೆ. ತೆಗ್ಗಿನಮಠ,ಎನ್. ಎಸ್. ಕೊಣ್ಣೂರ, ಎನ್. ವಿ. ವಾಲಿ, ಎಸ್. ಜಿ. ಬಿರಾದಾರ, ಬಾಪುಗೌಡ ಪಾಟೀಲ, ರಸೂಲ್ ಮುರಾಳ, ಶಂಕರಗೌಡ ಜಿ. ಬಿರಾದಾರ, ಬಿ. ಎಸ್. ಅಮಲ್ಯಾಳ, ನೇಮಸಿಂಗ್, ಅನಿಲ್ ಕುಮಾರ್, ಶಂಕರಗೌಡ ರಾಜಾಪೂರ, ನಿಂಗನಗೌಡ ಪೊಲೀಸ್ ಪಾಟೀಲ, ಇದ್ದರು.
ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ಬೆಂಬಲ: ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಮುತ್ತಪ್ಪಾ ಚಾಮಲಾಪುರ, ಮುಖ್ಯ ಕಾರ್ಯದರ್ಶಿ ದೆವೆಂದ್ರ ಹಾದಿಮನಿ, ಸಹಕಾರ್ಯದರ್ಶಿ ನಾಗೇಶ ಕಟ್ಟಿಮನಿ ಹಾಗೂ ಮಹೇಶ ಚಲವಾದಿ, ಬೆಳಗಾವಿ ವಿಭಾಗ ಸಂಚಾಲಕ ದೇವೀದ್ರ ಹಾದಿಮನಿ, ಸಂಘಟನಾ ಸಂಚಾಲಕ ಹುಯೋಗಿ ತಳ್ಳೊಳ್ಳಿ, ಜಿಲ್ಲಾ ಸಂಚಾಲಕ ಗುರುರಾಜ ಗುಡಿಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಶುರಾಮ ಕಟ್ಟಿಮನಿ, ಕಾಮೇಶ ಭಜಂತ್ರಿ, ಕಾಳಪ್ಪ ಮಸಬಿನಾಳ, ಪಾವಡೆಪ್ಪ ಹುಲದೂರ, ನಾಗೇಶ ಕಟ್ಟಿಮನಿ, ಮಹಾಂತೇಶ ಕಟ್ಟಿಮನಿ ಸೇರಿದಂತೆ ಅನೇಕರು ಹಾಗೂ ಹೋರಾಟ ಸಮಿತಿಯವರು ಉಪಸ್ಥಿತರಿದ್ದರು.
ಸರ್ಕಾರಕ್ಕೆ ಎಚ್ಚರಿಕೆ:
ಒಂದು ತಿಂಗಳಿಗೂ ಹೆಚ್ಚು ಕಾಲ ಸತತವಾಗಿ ನಡೆಯುತ್ತಿರುವ ಈ ಹೋರಾಟವು ಇದೀಗ ಜನಚಳುವಳಿಯಾಗಿ ಮಾರ್ಪಟ್ಟಿದೆ. “ಜನಪ್ರತಿನಿಧಿಗಳು ಮತ್ತು ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸ್ಥಳಾಂತರದ ನಿರ್ಧಾರವನ್ನು ಕೈಬಿಡದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸಲಾಗುವುದು” ಎಂದು ಸಮಿತಿ ಎಚ್ಚರಿಕೆ ನೀಡಿದೆ.




















