ಬಳ್ಳಾರಿ / ಕಂಪ್ಲಿ: ಕಂಪ್ಲಿ ವಿದಾನಸಭಾ ಕ್ಷೇತ್ರದ ಕಂಪ್ಲಿ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಮತ್ತು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ದೇವರಾಜ ತಿಳಿಸಿದರು.
ಅವರು ಪಟ್ಟಣದ ತಹಾಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ವಿವಿಧ ರಾಜಕಿಯ ಪಕ್ಷಗಳೊಂದಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರ್ಹ ಮತದಾರರು ಮತದಾರರ ಯಾರೂ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶದಿಂದ ಈ ಎಸ್ ಐ ಆರ್ ಪ್ರಕ್ರಿಯೆ ನಡೆಯಲಿದೆ.
ಎಸ್ ಐ ಆರ್ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರ ಮನೆಗೂ ಖುದ್ದಾಗಿ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಿ ದೃಢೀಕರಿಸಲಿದ್ದಾರೆಂದು ವಿವರಿಸಿದರು.
ಜೂನ್ 29ರಿಂದ ಜುಲೈ 21ರವರೆಗೆ ಬಿ ಎಲ್ ಒಗಳು ಪ್ರತಿ ಮನೆಗೆ ಭೇಟಿ ನೀಡಿ 2026 ರ ಆಗಷ್ಟ್ 1ಕ್ಕೆ 18 ವರ್ಷ ತುಂಬುವ ಪ್ರತಿಯೊಬ್ಬ ನಾಗರಕನೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 2.25,745 ಮತದಾರರಿದ್ದು,ಮ್ಯಾಪಿಂಗ್ ಮಾಡುವ ಮಹತ್ವದ ಕಾರ್ಯ ನಡೆದಿದೆ. ಶೇಕಡಾ 97% ರಷ್ಟು ಮತದಾರರನ್ನು ಪತ್ತೆ ಹಚ್ಚಿ ಅವರ ಕುಟುಂಬದವರೊಂದಿಗೆ ಕೊಂಡಿ ಕಲ್ಪಿಸುವ ಕೆಲಸ ಯಶಸ್ವಿಯಾಗಿದೆ. ಇನ್ನು ಮ್ಯಾಪ್ ಆಗದೇ ಇರುವ ಮತದಾರರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುವುದು ಎಂದರು.
ಸಹಾಯಕ ಮತದಾರರ ನೋಂದಣಾಧಿಕಾರಿ ಕಂಪ್ಲಿ ತಹಸಿಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ ಬಿ ಎಲ್ ಒ ಗಳು ಸಾರ್ವಜನಿಕರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸುವಾಗ ಯಾವುದೇ ರೀತಿಯ ಪೂರಕ ದಾಖಲೆಗಳನ್ನು ಕೇಳುವುದಿಲ್ಲ. ಮತದಾರರು ನೀಡುವ ಅಜಿಏ ಅಪೂರ್ಣವಾಗಿದ್ದರೂ ಸಹ ಬಿ ಎಲ್ ಒಗಳೇ ಅದಕ್ಕೆ ಅಗತ್ಯವಿರುವ ಸಹಾಯವನ್ನು ಸ್ಥಳದಲ್ಲಿ ಮಾಡಲಿದ್ದಾರೆ ಎಂದು ವಿವರಿಸಿದ ಅವರು ಮತದಾರರ ಪಟ್ಟಿಯ ವಿಶೇಷ ಪರಿಸ್ಕರಣೆ ಸಂದರ್ಭದಲ್ಲಿ ವಿವಿಧ ರಾಜಕಿಯ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಬಿ ಎಲ್.ಒ ಗಳೊಂದಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ತಾ.ಪಂ.ಇಒ ಆರ್.ಕೆ.ಶ್ರೀಕುಮಾರ್, ಶಿರಸ್ತೆದಾರ ಎಸ್.ಕೆ.ರಮೇಶ್, ರಾಜಕೀಯ ಪಕ್ಷಗಳ ಮುಖಂಡರಾದ ಕೆ.ಶ್ರೀನಿವಾಸರಾವ್, ಗೊರ್ತಿ ಶ್ರೀನಿವಾಸಲು, ಸೈಯದ್ ಉಸ್ಮಾನ್,ಬಿ.ಅಂಬಣ್ಣ, ಅಯೋದಿ ವೆಂಕಟೇಶ್, ಪುರಸಭೆ ಅಧಿಕಾರಿಗಳು, ಕಂದಾಯ ಇಲಾಖೆಯ ಗ್ರಾಮಾಢಳಿತಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















