ಬಳ್ಳಾರಿ / ಕಂಪ್ಲಿ : ಪಕ್ಷದಲ್ಲಿ ಶಿಸ್ತು ಅತಿ ಮುಖ್ಯವಾಗಿದ್ದು, ಕಂಪ್ಲಿ ಕ್ಷೇತ್ರದ ಜನರು, ಅಭಿಮಾನಿಗಳು ಕಂಪ್ಲಿಯಿಂದ ಹೈಕಮಾಂಡ್ ವರೆಗೆ ನಮಗೆ ಸಚಿವ ಸ್ಥಾನಕ್ಕಾಗಿ ಧ್ವನಿ ಮಾಡುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಮುಂದಿನ ದಿನದಲ್ಲಿ ಸಚಿವ ಸ್ಥಾನ ನೀಡಿದರೆ, ಸ್ವೀಕರಿಸುವೆ. ಪಕ್ಷದ ನಿರ್ಧಾರಕ್ಕೆ ಸದಾ ಬದ್ಧ ಎಂದು ಶಾಸಕ ಜೆ.ಎನ್.ಗಣೇಶ ಸ್ಪಷ್ಟಪಡಿಸಿದರು.
ಅವರು ಗುರುವಾರ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಶಾಸಕರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ನೀಡುವ ಪ್ರತಿಯೊಂದು ಜವಾಬ್ದಾರಿ ಪ್ರಾಮಾಣಿಕವಾಗಿ ನಿಭಾಯಿಸಲಾಗುವುದು. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಸೇರಿದಂತೆ ಕರ್ನಾಟಕ, ಆಂಧ್ರ, ತೆಲಂಗಾಣದ ಮೂರು ರಾಜ್ಯದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಮಲೆನಾಡಿನಲ್ಲಿ ಉತ್ತಮ ಮಳೆಯಾದ ಹಿನ್ನಲೆ ಪ್ರಸ್ತುತ 64 ಟಿಎಂಸಿ ನೀರು ಸಂಗ್ರಹವಾಗಿರುವುದು ಸಂತಸ ತಂದಿದೆ. ಸಿ.ಎಂ ಮತ್ತು ಜಿಲ್ಲಾ ಸಚಿವರ ಗಮನಕ್ಕೆ ಈ ಭಾಗದ ರೈತರ ಸಂಕಷ್ಟ ತಿಳಿಸಿದ್ದು, ಆದಷ್ಟು ಬೇಗ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ರೈತರು ಬೆಳೆ ಬೆಳೆಯಲು ನೀರು ಒದಗಿಸಬೇಕು. ಈಗಾಗಲೇ ರೈತರು ಹಾಕಿರುವ ಸಸಿ ಮಡಿಗಳು ಒಣಗುತ್ತಿದ್ದು, ಇದರಿಂದ ಸಂಕಷ್ಟ ಎದುರಾಗಿದೆ. ಆದ್ದರಿಂದ ಸರ್ಕಾರ, ನೀರಾವರಿ ಸಲಹಾ ಸಮಿತಿಯು ಜಲಾಶಯದ ಮುನಿರಾಬಾದ್ ನಲ್ಲೇ ಪ್ರತಿ ಸಲಹಾ ಸಮಿತಿ ಸಭೆ ನಡೆಸಬೇಕು. ಅಂದಾಗ ಮಾತ್ರ ಈ ಭಾಗದ ರೈತರ ಸಂಕಷ್ಟ ಆಲಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಶ್ರೀನಿವಾಸರಾವ್, ಚನ್ನಬಸವರಾಜಗೌಡ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















