ಮೈಸೂರು ದಸರಾ ಸೊಬಗನ್ನು ನೆನಪಿಸುವಂತೆ ಕಂಗೊಳಿಸಿದ ಇಳಕಲ್ ನಗರ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರೆ
ಇಳಕಲ್: ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಇಳಕಲ್ ನಗರವು ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಸಂಜೆ ವೇಳೆಯಲ್ಲಿ ನಗರವನ್ನು ನೋಡಿದರೆ ಇದು ಜಾತ್ರಾ ನಗರವೋ, ಉತ್ಸವದ ನಗರವೋ ಎಂಬ ಭಾವ ಮೂಡುತ್ತಿದೆ.
ಸೆಪ್ಟೆಂಬರ್ 1ರಿಂದ ಶ್ರೀಮಠದ ಸಮೀಪ ರಾಜ್ಯದ ಪ್ರಸಿದ್ಧ ಕಲಾವಿದರಿಂದ ನಗೆಹಬ್ಬ, ರಸಮಂಜರಿ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಜಾತ್ರೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಜಾತ್ರೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಾಜಮಾರ್ಗಗಳಿಗೆ ಮಾಡಿರುವ ಆಕರ್ಷಕ ದೀಪಾಲಂಕಾರವು ಇಳಕಲ್ ನಗರದ ಸೌಂದರ್ಯಕ್ಕೆ ಹೊಸ ಮೆರುಗು ನೀಡಿದೆ.
ಹಿಂದೆ ಬಾದಾಮಿ ಚಾಲುಕ್ಯ ಉತ್ಸವ, ವಿಜಯಪುರದ ನವರಸಪುರ ಉತ್ಸವ, ಹಂಪಿ ಉತ್ಸವ ಸೇರಿದಂತೆ ವಿವಿಧ ಸರ್ಕಾರಿ ಉತ್ಸವಗಳ ಸಂದರ್ಭದಲ್ಲಿ ಐತಿಹಾಸಿಕ ನಗರಗಳನ್ನು ದೀಪಾಲಂಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅಲಂಕರಿಸಿ, ಇಡೀ ನಗರವನ್ನೇ ಉತ್ಸವದ ವಾತಾವರಣದಲ್ಲಿ ಮಿಂಚಿಸುವುದನ್ನು ನೋಡಿದ್ದೇವೆ. ಅದೇ ರೀತಿಯ ಸೊಬಗು ಇದೀಗ ಇಳಕಲ್ ನಗರದಲ್ಲೂ ಕಂಡು ಬರುತ್ತಿರುವುದು ವಿಶೇಷ.
ಹುಬ್ಬಳ್ಳಿ, ಗದಗ, ಗಜೇಂದ್ರಗಡದಿಂದ ನಗರ ಪ್ರವೇಶಿಸುವ ವಾಹನಗಳು ಸಂಚರಿಸುವ ಗಾಯತ್ರಿ ಫ್ಯಾಕ್ಟರಿಯಿಂದ ಸಬ್ರಿಜಿಸ್ಟರ್ ಕಚೇರಿ ಮಾರ್ಗವಾಗಿ ಬಸ್ ನಿಲ್ದಾಣದವರೆಗೆ, ಹೊಸಪೇಟೆ, ಕೊಪ್ಪಳ, ಕುಷ್ಟಗಿಯಿಂದ ಬರುವ ವಾಹನಗಳು ತಹಸೀಲ್ದಾರ್ ಕಚೇರಿ ಮುಂಭಾಗದಿಂದ ಗೊರಬಾಳ ನಾಕಾ ಮಾರ್ಗವಾಗಿ ಬಸ್ ನಿಲ್ದಾಣದವರೆಗೆ ಹಾಗೂ ಬೆಳಗಾವಿ, ಬಾಗಲಕೋಟೆ ಭಾಗದಿಂದ ನಗರ ಪ್ರವೇಶಿಸುವ ವಾಹನಗಳು ಬಸವೇಶ್ವರ ವೃತ್ತ, ಐಬಿ ಮುಂಭಾಗದ ರಸ್ತೆಯಿಂದ ಬಸ್ ನಿಲ್ದಾಣದವರೆಗೆ—ಹೀಗೆ ನಗರದ ಪ್ರಮುಖ ಪ್ರವೇಶ ಮಾರ್ಗಗಳೆಲ್ಲವೂ ದೀಪಗಳ ಬೆಳಕಿನಲ್ಲಿ ಝಗಮಗಿಸುತ್ತಿವೆ.
ಬಣ್ಣಬಣ್ಣದ ಬೆಳಕುಗಳಿಂದ ಅಲಂಕರಿಸಲ್ಪಟ್ಟ ಪ್ರಮುಖ ರಸ್ತೆಗಳು, ಜಾತ್ರೆಯ ವಾತಾವರಣ, ಸಾಂಸ್ಕೃತಿಕ ಕಾರ್ಯಕ್ರಮಗಳು
ಇಳಕಲ್ನ ಸೊಬಗು ಕಣ್ಮನ ಸೆಳೆಯುತ್ತಿದೆ.
ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರು ನಗರ ಯಾವ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲ್ಪಟ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆಯೋ, ಅದೇ ರೀತಿಯಲ್ಲಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರೆಯ ಸಂದರ್ಭದಲ್ಲಿ ಇಳಕಲ್ ನಗರವೂ ದೀಪಗಳ ಬೆಳಕಿನಲ್ಲಿ ಹೊಸ ರೂಪ ಪಡೆದುಕೊಂಡಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಮನರಂಜನೆ ನೀಡುವುದರ ಜೊತೆಗೆ, ಇಳಕಲ್ನ ಕಲೆ, ಸಂಸ್ಕೃತಿ, ಭಕ್ತಿ ಮತ್ತು ಸಾಮಾಜಿಕ ಸೌಹಾರ್ದತೆಯ ಸೊಬಗನ್ನು ಹೊರಜಗತ್ತಿಗೆ ಪರಿಚಯಿಸುವಂತಿವೆ. ಹೊರಗಿನಿಂದ ನಗರಕ್ಕೆ ಆಗಮಿಸುವವರಿಗೆ ಇಳಕಲ್ನ ಮೊದಲ ನೋಟವೇ ದೀಪಾಲಂಕಾರದಿಂದ ಸ್ವಾಗತಿಸುವಂತಾಗಿದೆ.
ಒಂದು ಜಾತ್ರೆ… ಒಂದು ನಗರ… ಒಂದು ಸಂಭ್ರಮ!
ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಳಕಲ್ ನಗರ ಪಡೆದಿರುವ ಈ ಹೊಸ ರೂಪ ನಿಜಕ್ಕೂ ಸ್ಥಳೀಯರ ಮನದಲ್ಲಿ ಸಂತಸ ಮೂಡಿಸಿದೆ.
ನಗರವನ್ನು ಇಷ್ಟು ಸುಂದರವಾಗಿ, ಆಕರ್ಷಕವಾಗಿ ಹಾಗೂ ಉತ್ಸವದ ವಾತಾವರಣದಲ್ಲಿ ಸಜ್ಜುಗೊಳಿಸಿದ ಜಾತ್ರಾ ಮಹೋತ್ಸವದ ಆಯೋಜಕರು, ಶ್ರೀಮಠದ ಆಡಳಿತ ಮಂಡಳಿ, ಸಹಕರಿಸಿದ ಸಂಘ-ಸಂಸ್ಥೆಗಳು ಹಾಗೂ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಸಚಿವರಾದ ವಿಜಯಾನಂದ ಕಾಶಪ್ಪನವರ ಅವರಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗಳಾದ ಶಿವರಾಜ ತಂಗಡಗಿ ಅವರಿಗೆ ಹಾಗೂ ಪ್ರತಿಯೊಬ್ಬರಿಗೂ ಇಳಕಲ್ ನಗರದ ಸಮಸ್ತ ನಾಗರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಇಳಕಲ್ ,
ಸಂಸ್ಕೃತಿಯ ಕಂಪಿನಲ್ಲಿ ಮಿಂದೇಳುವ ಇಳಕಲ್,
ಭಕ್ತಿಯ ಭಾವದಲ್ಲಿ ಒಂದಾಗುವ ಇಳಕಲ್ —ಈ ಜಾತ್ರೆಯ ಸಂಭ್ರಮದಲ್ಲಿ ನಿಜಕ್ಕೂ ‘ಇಳಕಲ್ ಉತ್ಸವ’ವಾಗಿ ರೂಪುಗೊಂಡಿದೆ.




















