
ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಹಿಂದೂ ಮಹಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಮತ್ತು ಶೋಭಾಯಾತ್ರೆ ಶನಿವಾರ ಸಂಜೆ ಅತ್ಯಂತ ಅದ್ಧೂರಿ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಜರುಗಿತು.
ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ನಡೆದ ಈ ಜಲಸ್ತಂಭನೋತ್ಸವದಲ್ಲಿ ಕಂಪ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡು ಸಡಗರಪಟ್ಟರು.
ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತಸಾಗರ :
ಪಟ್ಟಣದ ಗಂಗಾ ನಗರದಿಂದ ಆರಂಭಗೊಂಡ ಮೆರವಣಿಗೆಯು ಉದ್ಭವ ಮಹಾಗಣಪತಿ ದೇವಸ್ಥಾನದ ಮುಂಭಾಗ, ಡಾ. ರಾಜ್ಕುಮಾರ್ ರಸ್ತೆ ಮೂಲಕ ಸಾಗಿ ಅಂಬೇಡ್ಕರ್ ವೃತ್ತವನ್ನು ತಲುಪಿತು. ಅಲ್ಲಿಂದ ಮರಳಿ ರಾಜಕುಮಾರ್ ರಸ್ತೆ ಮೂಲಕ ಸಂಚರಿಸಿ, ಕೊನೆಗೆ ತುಂಗಭದ್ರಾ ನದಿಯ ತಟವನ್ನು ತಲುಪಿತು. ನದಿ ತೀರದಲ್ಲಿ ಜಮಾಯಿಸಿದ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಗಣೇಶ ಮೂರ್ತಿಯ ವಿಸರ್ಜನೆಯನ್ನು ನೆರವೇರಿಸಲಾಯಿತು. ಮೆರವಣಿಗೆಯ ಅಂಗವಾಗಿ ಮುಂಜಾನೆಯಿಂದಲೇ ಗಣೇಶನಿಗೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಜನಪದ ಕಲೆಗಳ ವೈಭವ :
ಮೆರವಣಿಗೆಯುದ್ದಕ್ಕೂ ವಿವಿಧ ಕಲಾತಂಡಗಳು ಪ್ರದರ್ಶಿಸಿದ ಸಾಂಪ್ರದಾಯಿಕ ಸಾಂಸ್ಕೃತಿಕ ಪ್ರದರ್ಶನಗಳು ಕಣ್ಮನ ಸೆಳೆದವು. ರೈತರ ಗೆಜ್ಜೆಕುಣಿತ, ನಂದಿಕೋಲು, ಹಕ್ಕಿಪಿಕ್ಕಿ ಮಹಿಳೆಯರ ಕುಣಿತ, ಡೊಳ್ಳು ಕುಣಿತ, ತಪ್ಪಡಿ, ತಾಷಾ ರಾಮ್ ಡೋಲ್, ಕಹಳೆ ವಾದನ, ಹಾಸ್ಯಗೊಂಬೆಗಳು ಹಾಗೂ ಜಾನ್ಜ್ ಮೇಳದ ಧ್ವನಿ ಮೆರವಣಿಗೆಯ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಬಣ್ಣ ಬಣ್ಣದ ವಿದ್ಯುತ್ ಅಲಂಕಾರಗಳೊಂದಿಗೆ ಸಾಗಿದ ಗಣೇಶನ ಮೂರ್ತಿ ನೋಡುಗರ ಕಣ್ಣು ತಂಪಾಗಿಸಿತು.
ಅಂಬೇಡ್ಕರ್ ವೃತ್ತದಿಂದ ಧ್ವನಿವರ್ಧಕಗಳ ಸದ್ದು ಮೊಳಗುತ್ತಿದ್ದಂತೆ ಮಹಿಳೆಯರು, ಪುರುಷರು ಹಾಗೂ ಮಕ್ಕಳು ನೃತ್ಯ ಮಾಡಿ ಸಂಭ್ರಮಿಸಿದರು.
ಭಾವೈಕ್ಯತೆಯ ಸಂಕೇತ ಮಹಿಳೆಯರ ಭಕ್ತಿ ಸಮರ್ಪಣೆ :
ಈ ಮೆರವಣಿಗೆಯ ಪ್ರಮುಖ ವಿಶೇಷತೆಯೆಂದರೆ, ಹಿಂದೂ ಮಹಾ ಮಂಡಳಿಯ ಪದಾಧಿಕಾರಿಗಳ ಜೊತೆಗೆ ಸರ್ವ ಸಮುದಾಯದ ಮುಖಂಡರು ಮತ್ತು ಭಕ್ತರು ಸಕ್ರಿಯವಾಗಿ ಪಾಲ್ಗೊಂಡು ಧಾರ್ಮಿಕ ಮತ್ತು ಸಾಂಸ್ಕೃತಿಕ ಏಕತೆಯನ್ನು ಪ್ರದರ್ಶಿಸಿದರು. ಅಲ್ಲದೆ, ವಿವಿಧ ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕ ಮಹಿಳೆಯರು ಸಾಗುತ್ತಿದ್ದ ಗಣೇಶನಿಗೆ ಕಳಸದ ಆರತಿ ಮತ್ತು ತುಪ್ಪದ ಪ್ರಣತಿ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದ್ದು ಮೆರವಣಿಗೆಗೆ ಮತ್ತಷ್ಟು ಕಳೆ ತಂದಿತು.
ಬಿಗಿ ಪೊಲೀಸ್ ಬಂದೋಬಸ್ತ್:
ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಶಿಸ್ತಿನ ವಾತಾವರಣ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಸುಮನ್ ಡಿ. ಪೆನ್ನೇಕರ್, ಹೆಚ್ಚುವರಿ ಎಸ್ಪಿ ನವೀನ್ ಕುಮಾರ್, ಡಿವೈಎಸ್ಪಿ ಪ್ರಸಾದ್ ಗೋಖಲೆ, ಕಂಪ್ಲಿ ಪಿಐ ಕೆ.ಬಿ. ವಾಸುಕುಮಾರ್ ಅವರ ನೇತೃತ್ವದಲ್ಲಿ ವಿವಿಧ ಠಾಣಾ ವ್ಯಾಪ್ತಿಯ ಸಿಪಿಐ, ಪಿಎಸ್ಐ, ಎಎಸ್ಐ ಹಾಗೂ ಪೊಲೀಸ್ ಪೇದೆಗಳು ಸೇರಿದಂತೆ 300ಕ್ಕೂ ಹೆಚ್ಚು ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















