ಬಳ್ಳಾರಿ / ಕಂಪ್ಲಿ : ಗಂಗಾವತಿ–ದರೋಜಿ (36 ಕಿ.ಮೀ) ಹೊಸ ಬ್ರಾಡ್‌ಗೇಜ್ ರೈಲ್ವೆ ಮಾರ್ಗಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ಗಂಗಾವತಿ ಭಾಗದ ರೈಲ್ವೆ ಅಭಿವೃದ್ಧಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಗಂಗಾವತಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ನಿಯೋಗವು ಸಚಿವರಿಗೆ ಮನವಿ ಪತ್ರ ಹಸ್ತಾಂತರಿಸಿತು.ಗಂಗಾವತಿ ಪ್ರದೇಶವು ಭತ್ತದ ನಾಡು, ಹನುಮನ ಜನ್ಮಸ್ಥಳ ಹಾಗೂ ಹಂಪಿ–ಕಿಷ್ಕಿಂದೆಯ ಹೆಬ್ಬಾಗಿಲಾಗಿದ್ದರೂ ರೈಲ್ವೆ ಸಂಪರ್ಕದಲ್ಲಿ ಹಿಂದುಳಿದಿದೆ ಎಂದು ನಿಯೋಗವು ಸಚಿವರ ಗಮನ ಸೆಳೆಯಿತು. ಗಂಗಾವತಿ–ದರೋಜಿ ನೇರ ರೈಲು ಮಾರ್ಗ ನಿರ್ಮಾಣವಾದರೆ ಬಳ್ಳಾರಿಗೆ ಪ್ರಯಾಣಿಸುವ ಅಂತರವು ಸುಮಾರು 57 ಕಿ.ಮೀಗಳಷ್ಟು ಕಡಿಮೆಯಾಗಲಿದೆ. ಇದರಿಂದ ಗಂಗಾವತಿ, ಕಂಪ್ಲಿ ಹಾಗೂ ಸಂಡೂರು ಭಾಗದ ಜನರಿಗೆ ಆರ್ಥಿಕವಾಗಿ ಮತ್ತು ಸಮಯದ ಉಳಿತಾಯದ ದೃಷ್ಟಿಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದರು.
ಈಗಾಗಲೇ ಯೋಜನೆಯ ಸರ್ವೇ ಹಾಗೂ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧವಾಗಿದ್ದು, ಮುಂಬರುವ 2026-27ನೇ ಸಾಲಿನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಗೋವಾ ರೈಲು ವಿಸ್ತರಣೆಗೆ ಬೇಡಿಕೆ :
ಇದೇ ವೇಳೆ ಸಿಂಧನೂರು–ಗಂಗಾವತಿ–ಹುಬ್ಬಳ್ಳಿ ಪ್ಯಾಸೆಂಜರ್ ರೈಲನ್ನು ಗೋವಾದ ಮಡಗಾಂವ್ ವರೆಗೆ ವಿಸ್ತರಿಸುವಂತೆ ಮನವಿ ಮಾಡಲಾಯಿತು. ಈ ವಿಸ್ತರಣೆಯಿಂದ ಹಂಪಿ, ಆನೆಗುಂದಿ ಹಾಗೂ ಕಿಷ್ಕಿಂದ ಧಾಮಗಳಿಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರಿಗೆ ಅತ್ಯಂತ ಅನುಕೂಲವಾಗಲಿದ್ದು, ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ನಿಯೋಗವು ಮನವರಿಕೆ ಮಾಡಿಕೊಟ್ಟಿತು.
ಗಂಗಾವತಿ ನ್ಯೂ ಸಿಟಿ ಹಾಲ್ಟ್’ಗೆ ಒತ್ತು :
ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ, ಗಂಗಾವತಿಯ ನೂತನ ಬಸ್ ನಿಲ್ದಾಣದ ಸಮೀಪ “ಗಂಗಾವತಿ ನ್ಯೂ ಸಿಟಿ ಹಾಲ್ಟ್” ಹೆಸರಿನ ಹೊಸ ರೈಲ್ವೆ ನಿಲ್ದಾಣ ಅಥವಾ ಹಾಲ್ಟ್ ನಿರ್ಮಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಇದರಿಂದ ಬಸ್ ಮತ್ತು ರೈಲು ಪ್ರಯಾಣಿಕರ ನಡುವಿನ ಕೊಂಡಿ ಸುಲಭವಾಗಲಿದೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ಸಿಂಗನಾಳ, ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ, ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸದಸ್ಯ ಕೆ. ವಿಶ್ವನಾಥ ಸ್ವಾಮಿ ಸೇರಿದಂತೆ ಪ್ರಮುಖ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















