ಬಳ್ಳಾರಿ / ಕಂಪ್ಲಿ : ತಾಲೂಕಿನ ರಾಮಸಾಗರದ ಡಾ. ಹಾದಿಮನಿ ಕಾಳಿಂಗಗವರ್ಧನ ರವರಿಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರತಿಷ್ಠಿತ ‘ಡಾ. ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್’ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಅಮೆರಿಕಾದ ಇಂಟರ್ನ್ಯಾಷನಲ್ ಅಕ್ರೆಡಿಟೇಶನ್ ಆರ್ಗನೈಸೇಶನ್ ಮತ್ತು ಭಾರತ ಸರ್ಕಾರದ ನೀತಿ ಆಯೋಗದ ಅಡಿಯಲ್ಲಿ ನೋಂದಾಯಿತವಾಗಿರುವ ಯುಜಿಎಫ್‌ಟಿ ಸಂಸ್ಥೆಯ ಅಂಗಸಂಸ್ಥೆಯಾದ, ಐಎಸ್‌ಒ ಪ್ರಮಾಣೀಕೃತ ‘ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ’ ಹಾಗೂ ‘ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿ’ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಸಮಾಜ ಸೇವೆಗೆ ಸಂದ ಗೌರವ : ಡಾ. ಹಾದಿಮನಿ ಕಾಳಿಂಗಗವರ್ಧನ ಅವರು ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿರುವ ನಿರಂತರ ಹಾಗೂ ಅನುಪಮ ಸಾಧನೆಯನ್ನು ಗುರುತಿಸಿ ಈ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಅವರ ಅರ್ಜಿ ಹಾಗೂ ಪ್ರೊಫೈಲ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದ್ದ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು, ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಹೆಚ್ಚಿದ ಜವಾಬ್ದಾರಿ ಡಾ. ಹಾದಿಮನಿ ಕಾಳಿಂಗಗವರ್ಧನ :
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಹಾದಿಮನಿ ಕಾಳಿಂಗಗವರ್ಧನ ಅವರು, “ಭಾರತದ ಹೆಮ್ಮೆಯ ಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಈ ಗೌರವ ಲಭಿಸಿರುವುದು ನನ್ನ ಜೀವನದ ಸೌಭಾಗ್ಯ. ಸಮಾಜ ಸೇವೆಯನ್ನು ಯಾವುದೇ ಪ್ರಶಸ್ತಿಯ ನಿರೀಕ್ಷೆಯಿಲ್ಲದೆ ಮಾಡುತ್ತಾ ಬಂದವನು ನಾನು. ಈ ಪುರಸ್ಕಾರವು ನನ್ನ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ನನ್ನ ಈ ಸೇವಾ ಕಾರ್ಯಗಳು ಮುಂದೆಯೂ ನಿರಂತರವಾಗಿ ಮುಂದುವರಿಯಲಿವೆ. ನನ್ನ ಸೇವೆಯನ್ನು ಗುರುತಿಸಿದ ಏಷ್ಯಾ ಇಂಟರ್ನ್ಯಾಷನಲ್ ಸಂಸ್ಥೆಯ ಆಡಳಿತ ಮಂಡಳಿಗೆ ಮತ್ತು ನನ್ನ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ,” ಎಂದು ಭಾವುಕರಾಗಿ ನುಡಿದರು.
(ಸೆಪ್ಟೆಂಬರ್ 27) ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಡಾ. ಹಾದಿಮನಿ ಕಾಳಿಂಗಗವರ್ಧನ ಅವರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಡಾ. ಹಾದಿಮನಿ ಕಾಳಿಂಗಗವರ್ಧನ ಅವರಿಗೆ ಸಮಾಜದ ವಿವಿಧ ಗಣ್ಯರು ಹಾಗೂ ಹಿತೈಷಿಗಳಿಂದ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.
ವರದಿ : ಜಿಲಾನಸಾಬ್ ಬಡಿಗೇರ್




















