ಬಳ್ಳಾರಿ / ಕಂಪ್ಲಿ : ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನರು ರೋಸಿ ಹೋಗಿದ್ದು, ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ. ಆದ್ದರಿಂದ ಕಾರ್ಯಕರ್ತರು ಈಗಿನಿಂದಲೇ ಬಿಜೆಪಿ ಪಕ್ಷದ ಏಳಿಗೆಗೆ ಶ್ರಮಿಸಬೇಕು ಎಂದು ಕಂಪ್ಲಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಬಡಿಗೇರ ವೀರೇಶ್ ಕರೆ ನೀಡಿದರು.
ಪಟ್ಟಣದ ತುಂಗಭದ್ರಾ ವೈಟ್ ಹೌಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿಯ ಕಂಪ್ಲಿ ಮಂಡಲ ಯುವ ಮೋರ್ಚಾದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷದ ಮುಖಂಡರಾದ ಟಿ.ಎಚ್. ಸುರೇಶ್ ಬಾಬು ಹಾಗೂ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕ ಅವರ ಆದೇಶದ ಮೇರೆಗೆ ಈ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
” ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ಮತ್ತು ಸಾರ್ವಜನಿಕರು ಈಗಾಗಲೇ ತೀವ್ರ ಆಕ್ರೋಶಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಜನರು ಕಾಂಗ್ರೆಸ್ಗೆ ಗೇಟ್ ಪಾಸ್ ನೀಡಲಿದ್ದಾರೆ. ಈ ಹಿಂದೆ ಸುರೇಶ್ ಬಾಬು ಅವರು ತಂದಿದ್ದ ಅನುದಾನದಲ್ಲೇ ಕಂಪ್ಲಿ ಕ್ಷೇತ್ರ ಅಭಿವೃದ್ಧಿಯಾಗಿದೆ. ಈಗಿನ ಶಾಸಕರಿಂದ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ,” ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳು ಹಾಗೂ ಈ ಹಿಂದೆ ಬಿಜೆಪಿ ಸರ್ಕಾರ ರೈತರಿಗಾಗಿ ಜಾರಿಗೆ ತಂದಿದ್ದ ಯೋಜನೆಗಳ ಬಗ್ಗೆ ಜನರಲ್ಲಿ ಮನದಟ್ಟು ಮಾಡಿಕೊಡಬೇಕು. ಆಗ ಮಾತ್ರ ಮುಂಬರುವ ದಿನಗಳಲ್ಲಿ ಜನ ಬಿಜೆಪಿಗೆ ಹೆಚ್ಚಿನ ಮತ ನೀಡಿ ಆಶೀರ್ವದಿಸಲಿದ್ದಾರೆ ಎಂದು ಅವರು ಕಾರ್ಯಕರ್ತರಿಗೆ ತಿಳಿಸಿದರು.
ಯುವ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶರಣಗೌಡ್ರು, ಪ್ರಧಾನ ಕಾರ್ಯದರ್ಶಿ ನವೀನ್, ಸಂಚಾಲಕ ಶಂಕರ್ ಗೌಡ್ರು, ಸಹ ಸಂಚಾಲಕ ಅಂಜಿನಿ, ಕಂಪ್ಲಿ ಪುರಸಭೆ ಮಾಜಿ ಸದಸ್ಯ ಟಿ.ವಿ. ಸುದರ್ಶನ್ ರೆಡ್ಡಿ, ನಗರ ಘಟಕದ ಅಧ್ಯಕ್ಷ ಮುರಳಿ ಮೋಹನ್ ರೆಡ್ಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಕೆ. ಪ್ರಶಾಂತ್, ಪ್ರಮುಖರಾದ ಮನೋಜ್ ಗೌಡ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















