ಎರಡು ಚಿನ್ನ, ಒಂದು ಕಂಚಿನ ಪದಕ ಗೆದ್ದು ಅಪೂರ್ವ ಸಾಧನೆ
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಸೆಪ್ಟೆಂಬರ್ 24ರಿಂದ 28ರವರೆಗೆ ನಡೆದ ಟೆಕ್ನೋಕ್ರಾಟ್ಸ್ ಇಂಟರ್ನ್ಯಾಷನಲ್ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ 2026–27ರಲ್ಲಿ ಬೆಂಗಳೂರು ಇಂಟರ್ನ್ಯಾಷನಲ್ ಅಕಾಡೆಮಿಯ ಸಿಬಿಎಸ್ಇ ವಿಭಾಗದ 4ನೇ ತರಗತಿಯ ವಿದ್ಯಾರ್ಥಿ ಪ್ರಣವ್ ಮನೋಹರ್ ಅಪೂರ್ವ ಸಾಧನೆ ಮಾಡಿದ್ದಾರೆ.
11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿದ ಪ್ರಣವ್ ಮನೋಹರ್ ಅವರು 200 ಮೀಟರ್ ವೈಯಕ್ತಿಕ ಮೆಡ್ಲೆ (IM) ಸ್ಪರ್ಧೆಯಲ್ಲಿ ಚಿನ್ನದ ಪದಕ, 50 ಮೀಟರ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 50 ಮೀಟರ್ ಬಟರ್ಫ್ಲೈ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿದ್ಯಾರ್ಥಿಯ ಈ ಗಮನಾರ್ಹ ಸಾಧನೆಯನ್ನು ಬೆಂಗಳೂರು ಇಂಟರ್ನ್ಯಾಷನಲ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ರೊ. ಡಾ. ಮುನಿರಾಜು ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿಗಳಾದ ಕಾರ್ತಿಕ್ ಮುನಿರಾಜು ಅವರು ಪ್ರಣವ್ ಮನೋಹರ್ ಅವರನ್ನು ಅಭಿನಂದಿಸಿದ್ದಾರೆ.
ಶಾಲೆಯ ಪ್ರಾಚಾರ್ಯರಾದ ಡಾ. ಆರೋಗ್ಯರಾಜ್ ಪಿ. ಅವರು ವಿದ್ಯಾರ್ಥಿಯ ಸಾಧನೆಗೆ ಬೆಂಬಲ ನೀಡಿದ ಪೋಷಕರು ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಅಭಿನಂದಿಸಿದರು. ಪ್ರಣವ್ ಅವರ ಕ್ರೀಡಾ ಸಾಧನೆಯ ಹಾದಿ ಇದೇ ರೀತಿ ಮುಂದುವರೆದು, ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಪ್ರಣವ್ ಮನೋಹರ್ ಅವರ ಈ ಸಾಧನೆ ಬೆಂಗಳೂರು ಇಂಟರ್ನ್ಯಾಷನಲ್ ಅಕಾಡೆಮಿಗೆ ಹೆಮ್ಮೆಯ ಸಂಗತಿಯಾಗಿದ್ದು, ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಸಂತಸ ಮೂಡಿಸಿದೆ.
- ಕರುನಾಡ ಕಂದ ಸುದ್ದಿ




















