ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಸಮುದ್ರ ಗ್ರಾಮದ ಮುಖ್ಯ ರಸ್ತೆಯಿಂದ ನೆಲ್ಲುಡಿ ಮಾಗಾಣಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಒತ್ತುವರಿ ತೆರವುಗೊಳಿಸಿ, ಅಗಲೀಕರಣ ಮಾಡಬೇಕೆಂದು ಆಗ್ರಹಿಸಿ ರೈತರು ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಡೆಮನೆ ಮಂಜುನಾಥ, “ಗ್ರಾಮದ 2ನೇ ವಾರ್ಡಿನ ಗುಂಡಮ್ಮನ ಬಾವಿಯಿಂದ ಹರಿಜನ ಹನುಮಂತಪ್ಪನ ಹೊಲದವರೆಗೆ ಇರುವ ಸಾರ್ವಜನಿಕ ರಸ್ತೆಯನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಸುಮಾರು 2000 ಎಕರೆ ಕೃಷಿ ಭೂಮಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಇದಾಗಿದ್ದು, ಒತ್ತುವರಿಯಿಂದಾಗಿ ನಿತ್ಯ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿದೆ” ಎಂದು ದೂರಿದರು.
“ಭತ್ತ ಮತ್ತು ಒಣಹುಲ್ಲು ಸಾಗಿಸುವ ಟ್ರಾಕ್ಟರ್, ಲಾರಿಗಳು ಇದೇ ಮಾರ್ಗವಾಗಿ ಚಲಿಸಬೇಕಿದೆ. ಪ್ರಸ್ತುತ ಭತ್ತ ಕಟಾವು ಹಂಗಾಮು ಆರಂಭವಾಗುತ್ತಿರುವುದರಿಂದ ರೈತರು ಮತ್ತು ಸಾರ್ವಜನಿಕರು ತೀವ್ರ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ರಸ್ತೆ ಕಿರಿದಾಗಿರುವುದರಿಂದ ಹರಿಜನ, ಭೋವಿಜನ, ಉಪ್ಪಾರು, ಕಣ್ಣೀರು ಸೇರಿದಂತೆ ವಿವಿಧ ಜನಾಂಗದ ಮದುವೆ ಹಾಗೂ ಇತರ ಸಾಮಾಜಿಕ ಕಾರ್ಯಕ್ರಮಗಳಿಗೂ ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸದ್ಯ ಕಲ್ಯಾಣ ಕರ್ನಾಟಕ ಯೋಜನೆಯಡಿ ದೇವಸಮುದ್ರ ಗ್ರಾಮದ ಮುಖ್ಯ ರಸ್ತೆಯಿಂದ ಹೈಟೆಕ್ ಶೌಚಾಲಯದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಆದರೆ, ಈ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಮುನ್ನವೇ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ತಕ್ಷಣವೇ ಒತ್ತುವರಿ ಜಾಗವನ್ನು ತೆರವುಗೊಳಿಸಿ ರಸ್ತೆಯನ್ನು ಅಗಲೀಕರಣ ಮಾಡಿದ ಬಳಿಕವೇ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ರೈತರು ಕಳಕಳಿಯ ಮನವಿ ಮಾಡಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ರೈತ ಮುಖಂಡರಾದ ಪರಮೇಶ್ವರ, ನೀಲಕಂಠಪ್ಪ, ಹೆಚ್.ಗುಂಡಪ್ಪ, ಹೊನ್ನೂರಪ್ಪ, ವೆಂಕಟೇಶ, ದೊಡ್ಡಬಸುವ, ಪಂಪಾಪತಿ, ಸಣಾಪುರ ರುದ್ರಪ್ಪ, ರಾಮಣ್ಣ, ಹನುಮೇಶ ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ರಸ್ತೆ ಆಶ್ರಿತ ರೈತರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















