ಬಳ್ಳಾರಿ / ಕಂಪ್ಲಿ : ಗಾಣಿಗ ಸಮಾಜದವರಿಗೆ ಜಾತಿ ಪ್ರಮಾಣಪತ್ರ, ಆದಾಯಪತ್ರ ನೀಡಬೇಕಂದು ಆಗ್ರಹಿಸಿ, ಎಮ್ಮಿಗನೂರು ಗಾಣಿಗ ಸಮಾಜದ ನೇತೃತ್ವದಲ್ಲಿ ಗಾಣಿಗ ಸಮಾಜದವರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮಂಗಳವಾರ ಮನವಿ ಸಲ್ಲಿಸಿದರು.
ನಂತರ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಕಪ್ಪಗಲ್ ವಿರೇಶ ಮಾತನಾಡಿ, ಎಮ್ಮಿಗನೂರು ಗ್ರಾಮದ ಶೃತಿ ಗಾಣಿಗೇರ ತಂದೆ ಅಮರೇಶಪ್ಪ ಇವರ ಜಾತಿಯ ಬಗ್ಗೆ ತಾವುಗಳು ಖುದ್ದಾಗಿ ಬಂದು ಬೇರೆ ಜನಾಂಗದವರೊಡನೇ ಚರ್ಚೆ ಮಾಡಿರುವ ಸಮಯದಲ್ಲಿ ಅವರು ಗ್ರಾಮದಲ್ಲಿ ಗಾಣಿಗ ಜನಾಂಗದ ಸುಮಾರು 70-80 ಮನೆಗಳು ಇರುವುದಾಗಿ ತಿಳಿಸಿದರೂ ಅದನ್ನು ತಾವು ಪರಿಗಣನೆಗೆ ತೆಗೆದುಕೊಳ್ಳದೇ ವೀರಶೈವ ಲಿಂಗಾಯತ ಎಂದು ನಮೂದಿಸಿರುತ್ತೀರಿ. ಯಾವ ಆಧಾರದ ಮೇಲೆ ನಮೂದಿಸಿರುತ್ತೀರಿ, ಇಷ್ಟಲಿಂಗ ಪೂಜೆ ಮಾಡುವ ಸಲುವಾಗಿ, ನಾವು ತಿನ್ನುವ ಆಹಾರ ಪದ್ಧತಿಯನ್ನು ನೋಡಿ ಕೊಡುತ್ತಿಲ್ಲವೇ, ಇಲ್ಲ ನಮ್ಮ ಮನೆಯ ದೇವರನ್ನು ಪೂಜೆ ಮಾಡುವ ಸಲುವಾಗಿ ಕೊಡುತ್ತಿಲ್ಲವೇ ಹಾಗೂ ನಾವು ಮಾಡುವ ಶವಸಂಸ್ಕಾರ ನೋಡಿ ಕೊಡುತ್ತಿಲ್ಲವೇ. ನೀವು ಕೊಟ್ಟಿರುವ ಪಂಚನಾಮದಲ್ಲಿ ಕನೂನಿನ ವ್ಯಪ್ತಿಗೆ ಒಳಪಡುತ್ತದೆ ಎಂದು ನಮಗೆ ಮನವರಿಕೆ ಮಾಡಿಕೊಟ್ಟು, ಯಾವ ಆಧಾರದ ಮೇಲೆ ನಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡದೇ ತಿರಿಸ್ಕರಿಸಿದ್ದೀರಿ. ಇದನ್ನು ನಾವು ಖಂಡಿಸುತ್ತೇವೆ. ಕೂಡಲೇ ತಾವುಗಳು ಈ ಪತ್ರಕ್ಕೆ ಸ್ಪಂದಿಸಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎ.ವಿರುಪಾಕ್ಷಪ್ಪ, ಖಜಾಂಚಿ ಹನುಮನಗೌಡ, ಮುಖಂಡರಾದ ಎಮ್ಮಿಗನೂರು ಗಾಣಿಗ ಸಮಾಜದ ಅಧ್ಯಕ್ಷ ಎಸ್.ಶರಣಬಸವನಗೌಡ, ಮುಖಂಡರಾದ ಬಾವಿಕಟ್ಟೆ ವಿರೇಶ, ಎಸ್.ಜಿ.ಜಗದೀಶ, ಎಸ್.ರಾಜಶೇಖರಗೌಡ, ಕೆ.ಸತೀಶ, ಡಿ.ಈರಪ್ಪ, ನಾಗರಾಜ, ಎಸ್.ಬಸವರಾಜ, ದೇವರಮನೆ ಜಡೆಯಪ್ಪ, ರವಿ, ಗಾಣಿಗರ ತಿಪ್ಪೇಸ್ವಾಮಿ, ಡಿ.ನಾಗರಾಜ, ಜಡೇಶ, ಸಜ್ಜನರ ವಿಶ್ವನಾಥ, ಸಜ್ಜನರ ಶರಣಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















