
ಯಲಬುರ್ಗಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರ್ ಕಾಲೋನಿ, ಬೇವೂರು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಚಂದ್ರಪ್ಪ ಪರಸಪ್ಪ ರಾಜೂರು ಅವರು ಸುದೀರ್ಘ ಸೇವೆಯ ಬಳಿಕ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.
ಸುಮಾರು ಮೂರು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಚಂದ್ರಪ್ಪ ರಾಜೂರು ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕೇವಲ ಪಾಠ ಬೋಧಿಸುವುದಷ್ಟೇ ಅಲ್ಲದೆ, ಸಂಸ್ಕಾರ, ಶಿಸ್ತು, ಮಾನವೀಯತೆ ಹಾಗೂ ಸಮಾಜ ಸೇವೆಯ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ ಎಂದು ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಶಿಕ್ಷಕ ವೃಂದ, ಗ್ರಾಮಸ್ಥರು, ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಚಂದ್ರಪ್ಪ ರಾಜೂರು ಅವರನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರರು ಶ್ರೀ ಮರಿಸ್ವಾಮಿ ಕೆ ಮಣ್ಣಿನವರು ಹಾಗೂ ಶ್ರೀ ಕರಿಯಪ್ಪ ಮಣ್ಣಿನವರು ಮಾತನಾಡಿ “ಚಂದ್ರಪ್ಪ ರಾಜೂರು ಸರ್ ಅವರು ನಮ್ಮೂರಿನ ದೀಪ. ಅಂಬೇಡ್ಕರ್ ಕಾಲೋನಿಯಂತಹ ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣದ ಜ್ಯೋತಿಯನ್ನು ಬೆಳಗಿಸಿದ ಅವರ ಸೇವೆ ಅನನ್ಯ. ಅವರ ಶೈಕ್ಷಣಿಕ ಸೇವೆ ಸದಾ ಸ್ಮರಣೀಯ,”ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.




















