ತಿಮ್ಮಾಪುರ (ಬಾಗಲಕೋಟೆ) :
ಶಿಕ್ಷಣ ಕ್ಷೇತ್ರದ ಪ್ರಗತಿಗೆ ನಿರಂತರ ಶ್ರಮಿಸಿ, ಬಾಗಲಕೋಟೆ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾದ ತಾಲೂಕಿನ ಸಾಧಕ ಶಿಕ್ಷಕರನ್ನು ಬಾಗಲಕೋಟೆ ಮತಕ್ಷೇತ್ರದ ಶಾಸಕರಾದ ಉಮೇಶ ಮೇಟಿ ಅವರು ತಮ್ಮ ಸ್ವಗ್ರಾಮವಾದ ತಿಮ್ಮಾಪುರದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸರಳ ಹಾಗೂ ಅರ್ಥಪೂರ್ಣ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದ ಶಾಸಕರು, “ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಸೇವೆ ಸಮಾಜಕ್ಕೆ ಅತ್ಯಂತ ಅಮೂಲ್ಯವಾದುದು. ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ ಜಿಲ್ಲಾ ಮಟ್ಟದ ಗೌರವಕ್ಕೆ ಪಾತ್ರರಾದ ಶಿಕ್ಷಕರು ಇತರರಿಗೂ ಪ್ರೇರಣೆಯಾಗಿದ್ದಾರೆ,” ಎಂದು ಶ್ಲಾಘಿಸಿದರು. ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ ನುಗ್ಲಿ ಮಾತನಾಡುತ್ತಾ ಶಾಸಕರು ಗುರುಗಳನ್ನು ಗೌರವಿಸಲು ತಮ್ಮ ಮನೆಗೆ ಕರೆಸಿ ಗೌರವಿಸಿ,ಶಿಕ್ಷಕರಿಗೆ ಸಿಹಿ ಭೋಜನ ಉಣಬಡಿಸಿದ ಗುರುಭಕ್ತಿ ಅತ್ಯಂತ ಮಾದರಿ ಕಾರ್ಯವಾಗಿದೆ , ಅವರ ಸರಳ ಸಜ್ಜನಿಕೆ ಪ್ರತೀಕವೆಂದರು.
ತಮ್ಮನ್ನು ಗೌರವಿಸಿದ್ದಕ್ಕಾಗಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಶಾಸಕರಿಗೆ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರು ಶಿಕ್ಷಣ ಪ್ರೇಮಿಗಳು, ಜನಪ್ರತಿನಿಧಿಗಳು ,ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.
ಶಿಕ್ಷಕರಾದ ಸುನಿಲ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು ,ಅಶೋಕ ದೊಡಮನಿ ವಂದಿಸಿದರು.
- ಕರುನಾಡ ಕಂದ ಸುದ್ದಿ




















