ಗಂಗಾವತಿ: ವಿಕಲಚೇತನರಲ್ಲಿ ೨೧ ಬಗೆಯ ಅಂಗವಿಕಲತೆಯ ವಿಧಗಳನ್ನು ಗುರುತಿಸಲಾಗಿದ್ದು, ವಿವಿಧ ವಿಧಗಳ ವಿಕಲಚೇತನರು ಪ್ರತ್ಯೇಕ ಸಂಘಗಳನ್ನು ಕಟ್ಟಿಕೊಂಡು ತಮಗೆ ಅನುಕೂಲಕರವಾದ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಇತರೆ ವಿಧದ ವಿಕಲಚೇತನ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಇದರಿಂದ ಕೆಲವು ಬಡ ವಿಕಲಚೇತನರು ಅಸಂಘಟಿತರಾಗಿ ಯಾವುದೇ ಬೇಡಿಕೆಗೆ ಒತ್ತಾಯಿಸಲಾಗದೇ ವಿವಿಧ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ ಎಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಅಂಗವಿಕಲ ಘಟಕದ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ವಿಕಲಚೇತನರಲ್ಲಿ ಶ್ರವಣದೋಷ ವಿಕಲಚೇತನರ ಸಂಘ, ವಿಕಲಚೇತನ ಸರ್ಕಾರಿ ನೌಕರರ ಸಂಘ, ವಿಕಲಚೇತನರ ಅತಿಥಿ ಶಿಕ್ಷಕರ ಸಂಘ ಹೀಗೆ ವಿವಿಧ ರೀತಿಯ ಸಂಘಗಳನ್ನು ರಚಿಸಿಕೊಂಡಿದ್ದು, ಇವರ ಜೊತೆಗೆ ರಾಜ್ಯದಲ್ಲಿ ಸುಮಾರು ೬೮೦೦ ರಷ್ಟು ಇರುವ ಎಂ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯು, ವಿ.ಆರ್.ಡಬ್ಲ್ಯು ಇವರು ವಿಕಲಚೇತನರ ಬೇಡಿಕೆಗಳ ಜೊತೆಗೆ ತಮ್ಮ ಬೇಡಿಕೆಗಳಿಗೆ ಪ್ರಾಮುಖ್ಯತೆ ನೀಡಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇವರು ಆರ್ಥಿಕವಾಗಿ ಸಬಲರಾಗಿ ಎಲ್ಲಿಗೆ ಬೇಕಾದರೂ ಹೋಗಿ ಧರಣಿ, ಸತ್ಯಾಗ್ರಹ, ಹೋರಾಟ ಮಾಡಿ, ಅಂಕಿಸಂಖ್ಯೆಗಳನ್ನು ನೀಡಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳಯುತ್ತಿದ್ದಾರೆ. ಇವರಿಗೆ ಈಗಾಗಲೇ ಸರ್ಕಾರ ಮಾಸಿಕ ೧೦ ರಿಂದ ೧೫ ಸಾವಿರ ರೂಪಾಯಿಗಳ ವರೆಗೆ ವೇತನ ನೀಡಲಾಗುತ್ತಿದೆ, ಆದರೂ ಇವರು ಖಾಯಂ ಮಾಡಲು ಹಾಗೂ ಕನಿಷ್ಟ ವೇತನ ರೂ. ೨೦,೦೦೦/- ನೀಡಲು ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ. ಎಷ್ಟೋ ಮುಗ್ಧ ವಿಕಲಚೇತನರಿಗೆ ಯು.ಡಿ.ಐ.ಡಿ ಕಾರ್ಡ್ ಎಂದರೇನು ಎಂಬುದೇ ಗೊತ್ತಿಲ್ಲ, ತಮ್ಮ ಪುನರ್ವಸತಿ ಕಾರ್ಯಕರ್ತರು ಯಾರು ಎಂಬುದು ಕೂಡಾ ತಿಳಿದಿಲ್ಲ.
ಆದರೆ ಕೇವಲ ಮಾಶಾಸನದ ಮೇಲೆಯೇ ಅವಲಂಬಿತರಾಗಿ ಬದುಕುತ್ತಿರುವ ಅಸಂಘಟಿತ ವಿಕಲಚೇತನರು ಯಾವುದೇ ಹೋರಾಟಕ್ಕಿಳಿಯಲಾಗದೇ, ಅನೇಕ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ವಿಕಲಚೇತನರ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನದಲ್ಲಿ ಸರ್ಕಾರ ಈಗಾಗಲೇ ಶೇ. ೬೦ ರಷ್ಟನ್ನು ಬೇರೆ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡು ವಿಕಲಚೇತನರಿಗೆ ಪ್ರಸ್ತುತ ಸೌಲಭ್ಯಗಳನ್ನು ನೀಡುವಲ್ಲಿಯೂ ಕಡಿತಗೊಳಿಸಿ ಅನ್ಯಾಯ ಮಾಡುತ್ತಿದೆ. ಅಲ್ಲದೇ ಎಷ್ಟೋ ಗ್ರಾಮ ಪಂಚಾಯತಿಗಳಲ್ಲಿ ವಿಕಲಚೇತನರಿಗೆ ಮೀಸಲಿರಿಸಿದ ಅನುದಾನಗಳನ್ನು ಖರ್ಚು ಮಾಡಿರುವುದಿಲ್ಲ.
ಅಲ್ಲದೇ ಬೇರೆ ರಾಜ್ಯಗಳಲ್ಲಿ ವಿಕಲಚೇತನರ ಮಾಶಾಸನ ರೂ. ೫೦೦೦/- ಇದ್ದು, ಆದರೆ ಕರ್ನಾಟಕದಲ್ಲಿ ಕೆಲವರಿಗೆ ಕೇವಲ ರೂ. ೮೦೦/- ಹಾಗೂ ಶೇ ೭೫ ರಷ್ಟು ವಿಕಲತೆ ಹೊಂದಿದವರಿಗೆ ರೂ. ೧೪೦೦/- ಗಳನ್ನು ಮಾತ್ರ ನೀಡಲಾಗುತ್ತಿದ್ದು, ಇದರಿಂದ ಈಗಿನ ದುಬಾರಿ ಕಾಲದಲ್ಲಿ ಅವರ ಜೀವನ ನಿರ್ವಹಣೆಗೆ ಮಾಶಾಸನ ಸಾಕಾಗುತ್ತಿಲ್ಲ. ಯಾವುದೇ ಬೇಡಿಕೆ ಇಡದ ಮಹಿಳೆಯರಿಗೆ ಶಕ್ತಿಯೋಜನೆ ಜಾರಿ ಮಾಡಿ, ರಾಜ್ಯಾಧ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು, ವಿಕಲಚೇತನರನ್ನು ಮಾತ್ರ ಕಡೆಗಣಿಸಿದೆ. ಬಡ ವಿಕಲಚೇತನರು ತೀವ್ರ ಆರ್ಥಿಕ ತೊಂದರೆಯಿಂದ, ನಿರುದ್ಯೋಗದಿಂದ ಪರದಾಡುತ್ತಾ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ ಸರ್ಕಾರ ವಿಕಲಚೇತನರ ಕಡೆಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸರಕಾರಕ್ಕೆ, ಅಧಿಕಾರಿಗಳಿಗೆ ಅಂಗವಿಕಲರೆಂದರೆ ಪುನರ್ವಸತಿ ಕಾರ್ಯಕರ್ತರು ನೆನಪಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕ ಆಡಳಿತ ವಿಕಲಚೇತನರ ತಾಲೂಕು ಮಟ್ಟದ ಕುಂದುಕೊರತೆಗಳ ಸಭೆಯನ್ನು ಹಮ್ಮಿಕೊಳ್ಳುವ ಮೂಲಕ ವಿಕಲಚೇತನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ವಿಕಲಚೇತನರ ಹಕ್ಕುಗಳ ಕಾಯ್ದೆ ೨೦೧೬ ರನ್ವಯ ವಿಕಲಚೇತನರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಖ್ಯವಾಹಿನಿಗೆ ತರುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಕಲಚೇತನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಪುನರ್ವಸತಿಗೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನು ಒದಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸದೆ ಇರುವುದರಿಂದ ವಿಕಲಚೇತನರು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಮತ್ತು ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ವಿಕಲಚೇತನರ ಕುಂದು ಕೊರತೆಗಳ ಸಭೆ ನಡೆಯದೆ ಇರುವ ಕಾರಣದಿಂದ ವಿಕಲಚೇತನರ ಹಲವಾರು ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದುಕೊಂಡಿವೆ. ಕೆಲವು ಕಡೆ ಕುಂದುಕೊರತೆಗಳ ಸಭೆಗಳು ನಡೆಯುತ್ತಿವೆಯಾದರೂ ಬರೀ ಕಾಟಾಚಾರಕ್ಕೆ ನಡೆಯುತ್ತಿವೆ, ಅದರಿಂದ ವಿಕಲಚೇತನರಿಗೆ ಯಾವುದೇ ಉಪಯೋಗವಾಗುತ್ತಿಲ್ಲ, ಕೂಡಲೇ ವಿಕಲಚೇತನರ ಸಮಸ್ಯೆಗಳ ಕುರಿತು ಚರ್ಚಿಸಿ, ಎಲ್ಲಾ ವಿಕಲಚೇತನರಿಗೆ ಸಮಾನವಾಗಿ ಸೌಲಭ್ಯಗಳನ್ನು ಒದಗಿಸಿ ನ್ಯಾಯ ಒದಗಿಸಿಕೊಡಬೇಕೆಂದು ಸರ್ಕಾರಕ್ಕೆ ಹಾಗೂ ಸ್ಥಳೀಯ ಸಚಿವರು ಹಾಗೂ ಶಾಸಕರಿಗೆ ಅಶೋಕ ಗುಡಿಕೋಟಿ ಒತ್ತಾಯಿಸಿದರು.
- ಕರುನಾಡ ಕಂದ ಸುದ್ದಿ




















