ಮುಂಡಗೋಡ: ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಘೋಷಿಸಿರುವ ದಸರಾ ರಜೆಯನ್ನು ಕಡಿತಗೊಳಿಸಿರುವ ಮುಂಡಗೋಡ ತಾಲೂಕಿನ ಲೊಯಲ ಶಿಕ್ಷಣ ಸಂಸ್ಥೆಗೆ ಸೂಕ್ತ ನಿರ್ದೇಶನ ಕೊಟ್ಟು ಶೈಕ್ಷಣಿಕ ವೇಳಾಪಟ್ಟಿಯಂತೆ ರಜಾ ದಿನಗಳನ್ನು ಒದಗಿಸಲು ಆದೇಶಿಸಬೇಕೆಂದು ಹಿಂದೂಪರ ಸಂಘಟನೆಗಳ ಮುಖಂಡರು ಬಿ ಇ ಓ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ಲೊಯೋಲಾ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿಗಳೂ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನಿಗದಿಪಡಿಸಿರುವ ದಸರಾ ರಜೆಯನ್ನು ಕಡಿತಗೊಳಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ಸಮುದಾಯದೊಂದಿಗೆ ದಸರಾ ಹಬ್ಬವನ್ನು ಆಚರಿಸುವ ಅವಕಾಶದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಅದೇ ರೀತಿ, ಕ್ರಿಸ್ಮಸ್ ಹಬ್ಬವನ್ನು ಆಚರಿಸುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯವಿದ್ದಲ್ಲಿ ಸರ್ಕಾರದ ನಿಯಮಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಸೂಕ್ತ ರಜೆಯನ್ನು ಕಲ್ಪಿಸುವ ವ್ಯವಸ್ಥೆ ಮಾಡಬಹುದು. ನಮ್ಮ ಮನವಿಯನ್ನು ಪರಿಗಣಿಸದೆ ರಜಾ ದಿನಗಳನ್ನು ಕಡಿತಗೊಳಿಸಿದರೆ ಶಿಕ್ಷಣ ಸಂಸ್ಥೆ ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಬದ್ಧವಾಗಿ ಪ್ರಜಾ ಸತ್ಯಾತ್ಮಕವಾಗಿ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಪ್ರಕಾಶ್ ಬಡಿಗೇರ, ಶಂಕರ ಲಮಾಣಿ, ಮಂಜುನಾಥ್ ಎಚ್ ಪಿ, ಗಿರೀಶ್ ಓಣಿಕೇರಿ, ಮಾರುತಿ ಲಮಾಣಿ, ವಿಶ್ವನಾಥ್ ನಾಯರ ಸೇರಿದಂತೆ ಅನೇಕರು ಇದ್ದರು.




















