
ಬಳ್ಳಾರಿ / ಕಂಪ್ಲಿ : ಅಕ್ಷರ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವುದರ ಜೊತೆಗೆ, ಬಾಲ್ಯದ ಗೆಳೆಯ-ಗೆಳತಿಯರನ್ನು ಮತ್ತೆ ಒಂದೆಡೆ ಸೇರಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅಪರೂಪದ ಕ್ಷಣಕ್ಕೆ ಕಂಪ್ಲಿ ಪಟ್ಟಣ ಸಾಕ್ಷಿಯಾಯಿತು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪೇಟೆ ಶಾಲೆಯ 2001–02ನೇ ಸಾಲಿನ 7ನೇ ತರಗತಿಯ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಭಾನುವಾರ ಶಾಲಾ ಆವರಣದಲ್ಲಿ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು.
ಸುಮಾರು 25 ವರ್ಷಗಳ ಸುದೀರ್ಘ ಅವಧಿಯ ಬಳಿಕ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, ಪರಸ್ಪರ ಆತ್ಮೀಯವಾಗಿ ಭೇಟಿಯಾಗಿ ಸಂತಸ ಹಂಚಿಕೊಂಡರು.
ಕಾರ್ಯಕ್ರಮದ ಅಂಗವಾಗಿ ಹಳೆಯ ವಿದ್ಯಾರ್ಥಿಗಳು ತಮಗೆ ಅಕ್ಷರ ಜ್ಞಾನ, ಶಿಸ್ತು ಹಾಗೂ ಜೀವನ ಮೌಲ್ಯಗಳನ್ನು ಕಲಿಸಿದ ನಿವೃತ್ತ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸಿದರು. ಗುರುಗಳ ಪಾದಪೂಜೆ ನೆರವೇರಿಸಿ, ಸನ್ಮಾನಿಸಿದ್ದು ಕಾರ್ಯಕ್ರಮದ ಅತ್ಯಂತ ಭಾವನಾತ್ಮಕ ಕ್ಷಣವಾಗಿ ಮೂಡಿಬಂದಿತು. ಇದೇ ವೇಳೆ ದಿವಂಗತ ಶಿಕ್ಷಕರಾದ ಭೋಗೇಶಾಚಾರ್, ಲಲಿತಮ್ಮ, ಸಚ್ಚಿದಾನಂದ ಮತ್ತು ಸೋಮಪ್ಪ ಅವರನ್ನು ಸ್ಮರಿಸಿ, ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕರು, “ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದೆ. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಆರೋಗ್ಯಪೂರ್ಣ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ಇಂದಿನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಬೇಕು” ಎಂದು ಸಲಹೆ ನೀಡಿದರು.
ಬಳಿಕ ಹಳೆಯ ವಿದ್ಯಾರ್ಥಿಗಳು ತಮ್ಮ ಜೀವನದ ಯಶಸ್ಸಿನಲ್ಲಿ ಶಿಕ್ಷಕರು ಬೀರಿದ ಪ್ರಭಾವವನ್ನು ಸ್ಮರಿಸಿದರು. ಕಾಲು ಶತಮಾನದ ಬಳಿಕ ಸಿಕ್ಕ ಸ್ನೇಹಿತರು ಪರಸ್ಪರ ತಮ್ಮ ಕುಟುಂಬ, ಉದ್ಯೋಗ ಹಾಗೂ ಜೀವನದ ಬೆಳವಣಿಗೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಅಂದಿನ ಶಿಕ್ಷಕರಾದ ಭಾರತಿ, ದ್ರೌಪತಿ, ರೇವಯ್ಯ, ನಾಗಯ್ಯಸ್ವಾಮಿ, ದೊಡ್ಮನಿ, ಶಶಿಧರ, ಗಂಗಾಧರಯ್ಯ ಭಾಗವಹಿಸಿದ್ದರು. ಹಳೆಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ರವಿ, ಉಪಾಧ್ಯಕ್ಷ ನಾಗಾರ್ಜುನ, ಕಾರ್ಯದರ್ಶಿಗಳಾದ ವಿಷ್ಣು, ಭಾಸ್ಕರ, ಖಜಾಂಚಿ ಎಜಾಜ್ ಹಾಗೂ ಸದಸ್ಯರಾದ ಫಕ್ರುದ್ದೀನ್, ರಾಘವೇಂದ್ರ, ಎನ್. ಶ್ರೀನಿವಾಸ್, ವೆಂಕಟೇಶ್, ದಾವೂದ್, ರಮೇಶ್, ಗಾಜಿ ಅಹಮದ್, ಸಾವಿತ್ರಿ, ದೇವಿಕ ಭಾಯಿ, ವಿಜಯಲಕ್ಷ್ಮಿ, ನಾಗಮಣಿ, ಡಿ. ರೇಖಾ, ವೀಣಾ, ಮಂಜುಶ್ರೀ, ಪಾರ್ವತಿ, ರಾಧಾ, ಕುಲುಸ್ಮ, ಸಲ್ಮ, ಶಶಿರೇಖಾ ಸೇರಿದಂತೆ ಹಲವು ಸ್ನೇಹಿತರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ




















