
ಒಗ್ಗಟ್ಟಿನ ಮಂತ್ರ ಜಪಿಸಿದ ಡೆಕೋರೇಟರ್ಸ್: ಶಾಮಿಯಾನ ಮತ್ತು ಲೈಟರ್ಸ್ ಸಂಘದ ಅಧಿವೇಶನ ಮುಕ್ತಾಯ.
ಬಳ್ಳಾರಿ / ಕಂಪ್ಲಿ :”ದೇಶದಲ್ಲಿ ಸೈನಿಕ ಮತ್ತು ರೈತನನ್ನು ಹೊರತುಪಡಿಸಿದರೆ, ಜಾತಿರಹಿತವಾದ ಮತ್ತೊಂದು ವೃತ್ತಿ ಎಂದರೆ ಅದು ಶಾಮಿಯಾನ್ ಕಾಯಕ. ತಮ್ಮ ಅಲಂಕಾರವನ್ನು ಬದಿಗೊತ್ತಿ, ಮತ್ತೊಬ್ಬರ ಕಾರ್ಯಕ್ರಮದ ವೈಭವ ಹಾಗೂ ಅಲಂಕಾರವನ್ನು ಹೆಚ್ಚಿಸುವ ಉದಾತ್ತ ಕಾಯಕ ಶಾಮಿಯಾನ್ ವೃತ್ತಿ ಬಾಂಧವರದ್ದಾಗಿದೆ ” ಎಂದು ಎಮ್ಮಿಗನೂರು ಹಂಪಿ ಸಾವಿರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ವೀರಶೈವ ಭವನದ ಗಂಡುಗಲಿ ಕುಮಾರರಾಮನ ವೈಭವ ವೇದಿಕೆಯಲ್ಲಿ, ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕು ಶ್ಯಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡನೇ ದಿನದ ತಾಲೂಕು ಮಟ್ಟದ 3ನೇ ಅಧಿವೇಶನ ಸಮಾರಂಭವನ್ನು ಉದ್ಘಾಟಿಸಿ ಅವರು ದಿವ್ಯಸಾನಿಧ್ಯದೊಂದಿಗೆ ಆಶೀರ್ವದಿಸಿ ಮಾತನಾಡಿದರು.
ಯುಗ ಯುಗಗಳಿಂದಲೂ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಚಪ್ಪರ ನಿರ್ಮಿಸಿ ನೆರಳು ಕೊಡುವ ವೃತ್ತಿ ನಡೆದು ಬಂದಿದೆ. ಇಂದು ಈ ವೃತ್ತಿ ಆಧುನಿಕತೆಯ ಸ್ಪರ್ಶದೊಂದಿಗೆ ಇನ್ನಷ್ಟು ವೈಭವವನ್ನು ಪಡೆದುಕೊಂಡಿದೆ. ಜಾತಿ, ಲಿಂಗ, ವರ್ಣ ಹಾಗೂ ಪಕ್ಷದ ಭೇದವಿಲ್ಲದೆ ಎಲ್ಲರೂ ಒಂದಾಗಿ ಸಂಘಟನೆಯಾಗಿ ಬೆಳೆದು ಬಂದಿರುವುದು ಶಾಮಿಯಾನ್ ಸಂಘದ ಹೆಮ್ಮೆಯಾಗಿದೆ. ಈ ಕಾಯಕವನ್ನು ಗೌರವಿಸುತ್ತಲೇ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಒಳ್ಳೆಯ ಭವಿಷ್ಯ ರೂಪಿಸಬೇಕು ಎಂದು ಶ್ರೀಗಳು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ವಿರೇಶ ಸಣಾಪುರ ಮಾತನಾಡಿ, “ಎಲ್ಲರ ಸಹಕಾರದಿಂದ ಎರಡು ದಿನಗಳ ಅಧಿವೇಶನ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ. ಸರ್ಕಾರವು ನಮ್ಮ ಶ್ಯಾಮಿಯಾನ್ ವೃತ್ತಿಪರರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ, ಸಂಘದ ಅಭಿವೃದ್ಧಿಯ ಜೊತೆಗೆ ಸಮಾಜದಲ್ಲಿಯೂ ಧನಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ” ಎಂದು ಮನವಿ ಮಾಡಿದರು.
ಮುಸ್ಲಿಂ ಧರ್ಮಗುರು ಡಾ. ಸೈಯದ್ ಷಾ ನೂರ್ ಅಹ್ಮದ್ ಖಾದ್ರಿ ಹಾಗೂ ಫಾದರ್ ಪಾಲ್ ಪಂಪಾಪತಿ ಅವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳನ್ನು ಹಾಗೂ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.
ಸಮಾರಂಭದಲ್ಲಿ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೆಹಬೂಬ್ ಮುಲ್ಲಾರ, ಸಹ ಕಾರ್ಯದರ್ಶಿ ಎಚ್. ನಾಗರಾಜ (ರವಿಕಿರಣ ಡೆಕೋರೇಷನ್ ಕಂಪ್ಲಿ), ಅಪೆಕ್ಸ್ ಬ್ಯಾಂಕ್ ಸದಸ್ಯ ಪಿ. ಮೂಕಯ್ಯಸ್ವಾಮಿ, ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಮುಖಂಡರಾದ ಸಿ.ಡಿ. ಮಹಾದೇವ, ಪಿ. ಬ್ರಹ್ಮಯ್ಯ, ಟಿ. ಸುರೇಶಗೌಡ, ಡಿ. ಮೌನೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















