ಕೊಪ್ಪಳ/ ತಳಬಾಳ: ಸರಕಾರಿ ವಸತಿಯುಕ್ತ ಮಾದರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೬-೨೭ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ವಿವಿಧ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ.ಹನಮಗೌಡ ಪಾಟೀಲ್ ಇವರು ತಮ್ಮ ಮುಖ್ಯ ಅತಿಥಿಗಳ ನುಡಿಯಲ್ಲಿ ಪ್ರೀತಿಯ ವಿದ್ಯಾರ್ಥಿಗಳೇ, ಇಂದು ನಿಮ್ಮ ಜೀವನದ ಹೊಸ ಅಧ್ಯಾಯ ಶುರುವಾಗಿದೆ. ನಾನು ನಿಮ್ಮನ್ನು ನೋಡಿದಾಗ ನನಗೆ ನನ್ನ ಕಾಲೇಜಿನ ಮೊದಲ ದಿನ ನೆನಪಾಗುತ್ತಿದೆ. ಆ ಕುತೂಹಲ, ಆ ಭಯ, ಆ ಕನಸು – ಎಲ್ಲವೂ ನಿಮ್ಮ ಕಣ್ಣಲ್ಲಿ ನನಗೆ ಕಾಣುತ್ತಿದೆ. ಕಾಲೇಜು ಎಂದರೆ ಕೇವಲ ಅಂಕ ಗಳಿಸುವ ಜಾಗವಲ್ಲ. ಪ್ರಶ್ನೆ ಕೇಳಿ. ಅನುಮಾನ ಇದ್ದರೆ ನಿಮ್ಮ ಉಪನ್ಯಾಸಕರನ್ನು ಕೇಳಿ. ಇಂದು ನೀವು ಕೇಳುವ ಒಂದು ಸಣ್ಣ ಪ್ರಶ್ನೆಯೇ ನಾಳೆ ನಿಮ್ಮ ದೊಡ್ಡ ಯಶಸ್ಸಿಗೆ ಕಾರಣವಾಗಬಹುದು. ಪದವಿ ಪ್ರಮಾಣ ಪತ್ರ ಎಲ್ಲರಿಗೂ ಸಿಗುತ್ತದೆ, ಆದರೆ ವ್ಯಕ್ತಿತ್ವ ನಿಮ್ಮನ್ನು ಜನಸಂದಣಿಯಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಎನ್.ಎಸ್.ಎಸ್, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ. ನಿಮ್ಮನ್ನು ಇಲ್ಲಿಗೆ ಕಳುಹಿಸಲು ನಿಮ್ಮ ತಂದೆ-ತಾಯಿ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದನ್ನು ಯಾವತ್ತೂ ಮರೆಯಬೇಡಿ. ಮೊಬೈಲ್, ಗೆಳೆತನ ಎಲ್ಲಾ ಇರಲಿ, ಆದರೆ ನಿಮ್ಮ ಮೂಲ ಗುರಿಯಾದ ವಿದ್ಯಾಭ್ಯಾಸವನ್ನು ಎಂದಿಗೂ ಮರೆಯಬೇಡಿ. ಈ ಕಾಲೇಜು ಒಂದು ದೇವಸ್ಥಾನ ಇದ್ದ ಹಾಗೆ. ಇಲ್ಲಿರುವ ಗ್ರಂಥಾಲಯ, ಪ್ರಯೋಗಾಲಯ, ನಿಮ್ಮನ್ನು ತಿದ್ದಿ ತೀಡುವ ಶಿಕ್ಷಕರು – ಇವರೆಲ್ಲ ನಿಮ್ಮನ್ನು ಉತ್ತಮ ಪ್ರಜೆಯನ್ನಾಗಿ ಮಾಡುತ್ತಾರೆ. ಕೊನೆಯದಾಗಿ, ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ನಾನು ಮತ್ತೊಮ್ಮೆ ಹೃತ್ಪೂರ್ವಕವಾಗಿ ಸ್ವಾಗತ ಕೋರುತ್ತೇನೆ. ನಿಮ್ಮ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಲಿ, ನೀವು ಕಂಡಿರುವ ಎಲ್ಲಾ ಕನಸುಗಳು ನನಸಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಿಕ್ಷಣ ಚಿಂತಕರಾದ ಉದಯಕುಮಾರ ರಾಯರೆಡ್ಡಿಯವರು ಈ ಬಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭೀವೃದ್ದಿ ಹೊಂದಲೆಂದು ಸರ್ಕಾರವು ಸಾಕಷ್ಟು ಅನುಕೂಲತೆಯನ್ನು ಮಾಡಿಕೊಟ್ಟಿದೆ. ಅದರ ಸದುಪಯೋಗ ಪಡೆದುಕೊಂಡು ಸಮಾಜಕ್ಕೆ ದೇಶಕ್ಕೆ ತಮ್ಮ ಅಭೂತಪೂರ್ವ ಸೇವೆ ಸಿಗಲೆಂದು ಈ ಮೂಲಕ ಎಲ್ಲಾ ವಿದ್ಯಾರ್ಥಿಗಳಿಂದ ಅಪೇಕ್ಷಿಸುತ್ತೇನೆ ಮತ್ತು ಬರೀ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು. ಮಹಾವಿದ್ಯಾಲಯದ ಅಂತಿಮ ವರ್ಷ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಬಹಳಷ್ಟು ಸಂತಸ ಮತ್ತು ಸಂಭ್ರಮದಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು.
ಸಾಂಸ್ಕೃತಿಕ ಸಂಯೋಜಕರಾದ ಶ್ರೀಮತಿ ಪುಷ್ಪಾವತಿ ಕನಸಾವಿ ಇವರು ಪ್ರಾಸ್ತಾವಿಕ ನುಡಿಯಲ್ಲಿ ಕಾಲೇಜು ಬೆಳೆದು ಬಂದ ಹಾದಿ, ಕಾಲೇಜಿನ ನಿಯಮಗಳು ಶಿಸ್ತು, ಸಮಯ ಪಾಲನೆ, ಶಿಕ್ಷಕರ ಜೊತೆಗಿನ ಸಹಕಾರ, ವಿವಿಧ ಒಕ್ಕೂಟಗಳ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಮಾತನಾಡಿದರು.
ಅತಿಥಿಗಳಾದ ಕೆ.ಹೆಚ್.ಛತ್ರದ ನಿವೃತ್ತ ಪ್ರಾಂಶುಪಾಲರು ಇವರು ಕಾಲೇಜು ಸ್ಥಾಪಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ ಬಹುತೇಕ ಶಾಸಕರಾದಿಯಾಗಿ ಗ್ರಾಮಸ್ಥರ ಸಹಕಾರದಿಂದ ಈ ಕಾಲೇಜು ನಿರ್ಮಾಣಗೊಂಡಿದೆ. ಆ ಶ್ರಮದ ಫಲವನ್ನು ನಾವೇಲ್ಲರೂ ಅನುಭವಿಸುತ್ತಿದ್ದೇವೆ. ಮುಂದಿನ ದಿನಮಾನದಲ್ಲಿ ಇದರ ಪ್ರತಿಫಲ ನಿಮ್ಮಿಂದ ದೇಶಕ್ಕೆ ಮತ್ತು ಸಮಾಜಕ್ಕೆ ಸೇವೆಗೈಯ್ಯುವಂತಾಗಲಿ ಎಂದು ಹರಸಿದರು. ಹಾಗೇಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಶಂಕರ ಬಿನ್ನಾಳ ಮತ್ತು ಅವರ ಸಂಗೀತ ಬಳಗ ಸಂಗೀತದ ರಸದೌತಣವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಕಾರ್ಯಕ್ರಮ್ಕಕೆ ಮೆರಗು ತಂದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಈ.ಆರ್.ಲಗಳೂರ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ವಿದ್ಯಾಭ್ಯಾಸದೊಂದಿಗೆ ವಿವಿಧ ಒಕ್ಕೂಟಗಳಲ್ಲಿ ಭಾಗವಹಿಸಿ ಕಾಲೇಜಿನ ಅಭಿವೃದ್ದಿಯ ಜೊತೆಗೆ ತಮ್ಮ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿ ಶ್ರೀ ಮಲ್ಲಿಕಸಾಬ ನೂರಭಾಷ, ಶ್ರೀ ವೀರಭದ್ರಯ್ಯ ಮನ್ನಾಪುರ, ಶ್ರೀ ಲಿಂಬನಗೌಡ ಪೋಲಿಸ್ ಪಾಟೀಲ್, ಶ್ರೀ ನಿಂಗಪ್ಪ ಹೆಳವರ, ನಿಲಯ ಪಾಲಕರಾದ ಶ್ರೀ ಮಾರುತಿ ಜೀವಣ್ಣವರ, ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ನಾಗರತ್ನ ತಮ್ಮಿನಾಳ ಹಾಗೂ ಪ್ಲೇಸ್‌ಮೆಂಟ್ ಸೆಲ್ ಸಂಯೋಜಕರಾದ ಶ್ರೀಸುರೇಶ ಕುಮಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಪ್ರಾರ್ಥನೆ ಕು. ಪಲ್ಲವಿ ಹಾಗೂ ಶಿವಲೀಲಾ ವಿದ್ಯಾರ್ಥಿನಿಯರು, ಸ್ವಾಗತ ಶ್ರೀ ಸಿಂಧೂರಲಕ್ಷ್ಮಣ ವಾಲಿಕಾರ, ನಿರೂಪಣೆ ಶ್ರೀ ಸಂಗಪ್ಪ ಬ್ಯಾಳಿ, ವಂದನಾರ್ಪಣೆ ಶ್ರೀ ಮಾರುತಿ ಕಬ್ಬೇರ ನಡೆಸಿಕೊಟ್ಟರು.




















